ಮಂತ್ರಿ, ಮುಖ್ಯಮಂತ್ರಿ ಜಿಲ್ಲೆಗಳಿಗೆ ಪ್ರವಾಸ ಹೋದಾಗ ಎಲ್ಲ ವಾಹನಗಳಿಗೂ ಮುಂದೆ ಪೈಲೆಟ್ ಜೀಪ್ ಇರುತ್ತದೆ. ಆಯಾ ಜಿಲ್ಲೆಯ ಪೊಲೀಸರು ತಮ್ಮ ಜಿಲ್ಲೆಯ ಸರಹದ್ದಿನವರೆಗೂ ಪೈಲೆಟ್ ಮಾಡುತ್ತಾರೆ. ನಂತರ ಅದರ ಜವಾಬ್ದಾರಿ ಮುಂದಿನ ಜಿಲ್ಲೆಗೆ ಹೋಗುತ್ತದೆ. ಇದೇ ಮಾದರಿ ನಡೆ ಹಿಮಾಲಯ ಶ್ರೇಣಿಯ ನಾಯಿಗಳಲ್ಲಿಯೂ ಕಂಡು ಬರುತ್ತದೆ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ ? ಇವುಗಳಿಗೆ ಈ ರೀತಿ ನಡೆದುಕೊಳ್ಳಲು ಯಾರೂ, ಯಾವ ತರಬೇತಿಯನ್ನೂ ನೀಡಿರುವುದಿಲ್ಲ. ಆದರೂ ಏಕೆ ಇವುಗಳು ಈ ರೀತಿ ವರ್ತಿಸುತ್ತವೆ ಅದೊಂದು ಯಕ್ಷಪ್ರಶ್ನೆ… ಇಂಥ ಅನುಭವಗಳು ನನ್ನ ಪಾಲಿಗೂ ದಕ್ಕಿವೆ. ಅವುಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
ಹಿಮಾಚಲ ಪ್ರದೇಶ ರಾಜ್ಯದ ಮನಾಲಿ ಪಟ್ಟಣದಿಂದ ಬಹುತೇಕ ಚಾರಣದ ಹಾದಿಗಳು ತೆರೆದುಕೊಳ್ಳುತ್ತವೆ. ನಾಲ್ಕು ಕಿಲೋಮೀಟರ್ ಮುಂದೆ ರೊತುಂಗ್ ಪಾಸ್ ಹಾದಿಯಲ್ಲಿ ಪ್ರೀನಿ ಎಂಬ ಹಳ್ಳಿಯಿದೆ. ಇಲ್ಲಿ ಚಾರಣದ ವ್ಯವಸ್ಥೆ ಮಾಡುವ, ಗೈಡ್ ಮಾಡುವ ಸುವ್ಯವಸ್ಥಿತ ತಂಡಗಳಿವೆ. ಬೆಂಗಳೂರಿನ ಕರ್ನಾಟಕ ಪರ್ವತಾರೋಹಣ ಸಂಸ್ಥೆ ನಮ್ಮ ಚಾರಣವನ್ನು ಇಲ್ಲಿನ ಖೇಮರಾಜ್ ಠಾಕೂರ್ ನೇತೃತ್ವದ ಹಿಮಾಲಯನ್ ಅಡ್ವೆಂಚರ್ಸ್ ಸಹಭಾಗಿತ್ವದಲ್ಲಿ ಆಯೋಜಿಸಿತ್ತು. ಇವರುಗಳ ನೆರವಿಲ್ಲದೇ ಹಿಮಾಲಯ ಶ್ರೇಣಿಗಳಲ್ಲಿ ಚಾರಣ ಮಾಡುವುದೆಂದರೆ ಅದು ಅಸಾಧ್ಯ. ಏಕೆಂದರೆ ಆ ಮಾರ್ಗಗಳು ಅಷ್ಟು ಕಠಿಣ, ದುರ್ಗಮ.


ಹಿಮಾಲಯ ಚಾರಣ ಮಾಡುವ ಮುನ್ನ ಆರಂಭದ ಕ್ಯಾಂಪಿನಲ್ಲಿ ಒಂದೆರಡು ದಿನ ಇರಲೇಬೇಕು. ಇದು ನಮ್ಮ ದೇಹ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಒಟ್ಟು ಒಂಭತ್ತು ದಿನಗಳ ಟ್ರೆಕ್. ಪ್ರೀನಿಯಿಂದ ರಿಯಾನ್ ಅತ್ತ ಹೊರಟೆವು. ಬೆಟ್ಟದ ಹಾದಿಯಲ್ಲಿ ಅದರ ಅಂಚಿನ ಹಾವಿನಂತ ಹಾದಿಯಲ್ಲಿಯೇ ಮೇಲೇರುತ್ತಾ ಹೋಗಬೇಕು. ಮಧ್ಯಾಹ್ನ ಗರಿಷ್ಠ ಎಂದರೆ 1.30 ರಿಂದ 2ರೊಳಗೆ ಅವತ್ತಿನ ಟ್ರೆಕ್ ಮುಕ್ತಾಯ. ನಂತರ ಅಲ್ಲಿಯೇ ಕ್ಯಾಂಪ್. ಏಕೆಂದರೆ ಈ ಸಮಯದ ನಂತರ ಹಿಮಾಲಯದ ಮೂಡು ಬದಲಾಗುತ್ತದೆ.ಯಾವ ಕ್ಷಣ ಏನು ತಿಳಿಯುವುದಿಲ್ಲ.
ಮರುದಿನ ಬೆಳಗ್ಗೆ ರಿಯಾನ್ ಎಂಟಕ್ಕೆಲ್ಲ ರಿಯಾನ್ ಬಿಟ್ಟೆವು. ಪ್ರೀನಿಯ ಸರಹದ್ದು ಬಿಡುವುದರೊಳಗೆ ಹಿಮಾಲಯನ್ ನಾಯಿಯೊಂದು ನಮ್ಮ ಜೊತೆಗಿತ್ತು. ಮಾರ್ಗದರ್ಶಕರಿಗಿಂತ ಮುಂದೆ ಇದ್ದ ಅದು ಮಾರ್ಗದರ್ಶಕರಿಗೇ ಗೈಡ್ ಎನ್ನುವ ರೀತಿ ಇದ್ದಿದ್ದು ಅಚ್ಚರಿ. ಇಷ್ಟರಲ್ಲಾಗಲೇ ಜೊತೆ ನೀಡಿದ್ದ ನಾಯಿ ವಾಪ್ಪಸ್ಸಾಗಿತ್ತು. ಮತ್ತೊಂದು ನಾಯಿ ಜೊತೆಯಾಯಿತು. ನೇಗಿದುರ್ಗ್ ಸನಿಹದಲ್ಲಿದ್ದೆ ಎನ್ನುವಾಗಲೇ ಅದು ತಂಡದತ್ತ ಒಂದೆರಡು ಬಾರಿ ನೋಡಿ ವಾಪ್ಪಸಾಯಿತು. ಇಲ್ಲಿಂದಾಚೆ ಯಾವ ನಾಯಿಯೂ ಜೊತೆಯಾಗಲಿಲ್ಲ. ಇಷ್ಟರಲ್ಲಾಗಲೇ ಬಹುದೂರದ ಚಾರಣದ ಹಾದಿಯನ್ನು ಅರ್ಧಕ್ಕೂ ಹೆಚ್ಚು ಕ್ರಮಿಸಿದೆವು. ಅರೆಬರೆ ಹಿಮಾವೃತ್ತವಾಗಿದ್ದ ಬೆಟ್ಟಗಳಿಂದ ಪೂರ್ಣ ಹಿಮಾವೃತ್ತವಾಗಿದ್ದ ಬೆಟ್ಟಗಳ ಹಾದಿಯಲ್ಲಿದೆವು.


ಸಂಜೆ 6 ರೊಳಗೆಲ್ಲ ಕತ್ತಲು ಕವಿಯಲು ಆರಂಭ. 6.30ರೊಳಗೆಲ್ಲ ರಾತ್ರಿ ಊಟವೂ ಮುಗಿದಿರುತ್ತದೆ. ಬಿಸಿಬಿಸಿಯಾಗಿರುವಾಗಲೇ ತಿನ್ನಬೇಕು. ಆಮೇಲೆ ತಿಂದರಾಯಿತೆಂದು ಉಢಾಪೆ ಮಾಡಿದರೆ ಆ ಚಳಿಗೆ ರೋಟಿಗಳು ಕಲ್ಲಿನಂತಾಗಿರುತ್ತದೆ. ವಾತಾವರಣ ತಿಳಿಯಾಗಿದ್ದರೆ ಮಾತ್ರ ಕ್ಯಾಂಪ್ ಫೈರ್. ಇಲ್ಲದಿದ್ದರೆ 7ರೊಳಗೆ ಟೆಂಟಿನೊಳಗೆ ಸೇರಿಕೊಳ್ಳಬೇಕು. ಮಗ್ಗುಲಿನಲ್ಲಿಯೇ ಹೆಡ್ ಟಾರ್ಚ್, ಹ್ಯಾಂಡ್ ಟಾರ್ಚ್ ಎರಡೂ ಇರಬೇಕು. ಸೂಸು ಬಂದರೆ ಪಕ್ಕದಲ್ಲಿದ್ದರನ್ನು ಎಬ್ಬಿಸಬೇಕು. ಏಕೆಂದರೆ ಸೂಸು ಮಾಡುತ್ತಾ ನಿಂತವರ ಹೆಗಲಮೇಲೆ ಮೇಲೆ ಹಿಮಕರಡಿಗಳು ಕೈಯಿಡಬಹುದು.
ನಿದ್ದೆಕಣ್ಣಿನಲ್ಲಿ ಎದ್ದು ಟೆಂಟ್ ಜಿಪ್ ತೆರೆದು ಹೊರಗೆ ಅಜಾಗರೂಕವಾಗಿ ಕಾಲಿಸಿರಿದರೆ ಪ್ರಪಾತಕ್ಕೂ ಬೀಳಬಹುದು. ಏಕೆಂದರೆ ಪರ್ವತಗಳ ಕಡಿದಾದ ಅಂಚುಗಳಲ್ಲಿ ಟೆಂಟ್ ಹಾಕಲಾಗಿರುತ್ತದೆ. ಬೆಳಗ್ಗಿನ ಹೊತ್ತು ಎಲ್ಲೆಂದರಲ್ಲಿ ತಿರುಗುವ ಹಾಗಿಲ್ಲ. ಆಳವಾದ ರಂಧ್ರಗಳ ಮೇಲೆ ನೆಪಮಾತ್ರಕ್ಕೆ ಹಿಮ ಮುಚ್ಚಿಕೊಂಡಿರುತ್ತದೆ. ಗೈಡ್ ಸಾಗುತ್ತಿದ್ದ ಪಥ ಬಿಟ್ಟು ತುಸು ಪಕ್ಕಕ್ಕೆ ಸರಿದ ಮಹಿಳಾ ಚಾರಣಿಗರೊಬ್ಬರು ಸೊಂಟದವರೆಗೂ ಹಿಮದಲ್ಲಿ ಹುದುಗಿ ಹೋಗಿದ್ದರು. ಇನ್ನೊಬ್ಬ ಮಹಿಳಾ ಚಾರಣಿಗರ ಕಾಲು ತೊಡೆಯ ತನಕ ಸಿಲುಕಿತ್ತು. ಆದ್ದರಿಂದ ಗೈಡ್ ಇಟ್ಟ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಸಾಗುವುದು ಅಗತ್ಯ.
ಮೇ ತಿಂಗಳಾದರೂ ರಾತ್ರಿವೇಳೆ ವಿಪರೀತ ಚಳಿ. ಬೆಂಗಳೂರಿನ ಬಿಸಿಲು, ರಾತ್ರಿಯ ವಾತಾವರಣ ನೋಡಿ ಅಲ್ಲಿಯೂ ಹಾಗೆ ಇರುತ್ತದೆ ಎಂದುಕೊಂಡರೆ ಯಾಮಾರಿದೆವು ಎಂದರ್ಥ. ಯಾವಾಗ ತೀವ್ರ ಚಳಿಯಾಗುವುದು, ಯಾವಾಗ ತೀವ್ರ ಮಳೆಯಾಗುವುದು, ಯಾವಾಗ ದಟ್ಟವಾಗಿ ಹಿಮ ಸಮೇತ ಮಂಜು ಬೀಳುವುದೊ ಹೇಳಲು ಆಗುವುದಿಲ್ಲ. ನಮ್ಮ ತಂಡದ ಅದೃಷ್ಟ; ಇವುಗಳಿಗೆಲ್ಲ ಸಾಕ್ಷಿಯಾದೆವು.


ಮತ್ತೆ ರಾತ್ರಿ ನೇಗಿದುರ್ಗ್ ಕ್ಯಾಂಪ್. ಇಲ್ಲಿಂದ ಕುರ್ರಡಿ. ಎಲ್ಲಿಯೂ ಇಳಿಜಾರಿನ ಹಾದಿ ಎಂಬುವುದಿಲ್ಲ. ಏರುಮುಖದ ಕಡಿದಾದ ಅಂಚುಗಳ ಹಾದಿ. ಎತ್ತಲೋ ನೋಡುತ್ತಾ ಕಾಲು ಹಾಕಿದರೆ ಪ್ರಪಾತಕ್ಕೆ ಬಿದ್ದು ಸಾಯುವುದಂತೂ ಖಚಿತ. ಮಧ್ಯಾಹ್ನದ ವೇಳೆಗೆ ಧರಣುದುಗ್ ತಲುಪಿದೆವು. ರಾತ್ರಿ ಅಲ್ಲಿಯೇ ವಾಸ್ತವ್ಯ. ಅಂದು ಸಂಜೆ ಹಿಮ ಹತ್ತಿಯ ಧಾರೆ ಸುರಿದ ಹಾಗೆ ಸುರಿಯುವ ದೃಶ್ಯ ನೋಡಿ ಪುಳಕ.
ಬೆಳಗ್ಗೆ ನಮ್ಮ ಗಮ್ಯದೆಡೆಗೆ ಏರಲಿದ್ದವು. ಇಷ್ಟರಲ್ಲಾಗಲೇ ಎಲ್ಲೆಲ್ಲೂ ಹಿಮದ ರಾಶಿ. ಶುರುಗುನ್ ಬೇಸ್ ತಲುಪಲಿದ್ದೇವೆ ಎಂಬ ತವಕ. ಬೆಳಗಾಯಿತು ಅಂದರೆ ಬೆಳಗ್ಗೆ 5ಕ್ಕೆಲ್ಲ ಬೆಳಗು ಹರಡಿರುತ್ತದೆ. ಟೆಂಟುಗಳಿಂದ ಹೊರ ಬರುವುದಕ್ಕೂ ಮೊದಲೇ ಕಣ್ಣುಗಳಿಗೆ ಅಲ್ಟ್ರಾ ವಯಲೆಟ್ ಇರುವ ತಂಪು ಕನ್ನಡಕ ಧರಿಸಲೇಬೇಕು. ಏಕೆಂದರೆ ಮೋಡಗಳು ಸೂರ್ಯನೊಡನೆ ಚಿನ್ನಾಟವಾಡುತ್ತಿರುತ್ತದೆ. ಸೂರ್ಯ ಮೋಡದಿಂದ ಹೊರಬಂದೊಡನೆ ಆತನ ಪ್ರಖರ ಕಿರಣಗಳು ಹಿಮದ ರಾಶಿ ಮೇಲೆ ಬಿದ್ದು ಪ್ರತಿಫಲನಗೊಳ್ಳುತ್ತದೆ. ಆ ಬೆಳಕಿಗೆ ಕಣ್ಣು ಮಂಜಾಗುತ್ತದೆ. ಕುರುಡಾಗುವ ಸಾಧ್ಯತೆಯೂ ಅಪಾರ.


ಶುರುಗುನ್ ಬೇಸ್ ಕ್ಯಾಂಪ್ ತಲುಪಿದೊಡನೆ ಎಲ್ಲರಿಗೂ ಅಪಾರ ಖುಷಿ. 12 ಸಾವಿರ ಅಡಿಗಳಿಗೂ ಹೆಚ್ಚು ಎತ್ತರವನ್ನು ಕ್ರಮಿಸಿದ್ದೆವು. ಇಲ್ಲಿಂದ ಮುಂದೆಯೂ ಏರುಹಾದಿಯಿದೆ. ಆದರೆ ಮುಂದಿನ ಹಾದಿ ದೇವರ ಹಾದಿ, ಶಿಖರ ಆತನ ಆವಾಸಸ್ಥಳ ಎಂಬುದು ಸ್ಥಳೀಯರ ನಂಬಿಕೆ. ಒಂದಷ್ಟು ಸಮಯ ಅಲ್ಲಿದ್ದೆವು. ಮಧ್ಯಾಹ್ನ 1.30ರೊಳಗೆ ಧರುಣುದುಗ್ಗ್ ಕ್ಯಾಂಪ್ ಸೇರಿಕೊಳ್ಳಲೇಬೇಕಿತ್ತು. ಈ ನಂತರ ಇಳಿಮುಖದ ಹಾದಿ. ಏರಿದ್ದಕ್ಕಿಂತಲೂ ಎಚ್ಚರಿಕೆಯಿಂದ ಇಳಿಯಬೇಕು.
ಧರಣುಧುಗ್ಗ್ ಕ್ಯಾಂಪಿನಲ್ಲಿ ರಾತ್ರಿ ಕಳೆದೆವು. ಬೆಳಗ್ಗೆ ಬನ್ನಾದ್ ಕ್ಯಾಂಪಿನತ್ತ ನಡೆ. ಅಲ್ಲಿ ರಾತ್ರಿ ಕ್ಯಾಂಪ್ ಫೈರ್, ಸ್ಥಳೀಯರ ಹಾಡುಗಳಿಗೆ ಹೆಜ್ಜೆ. ಗಡ್ಡದ್ದು ಊಟ, ನಿದ್ರೆ. ಮರುದಿನ ಎಂಟಕ್ಕೆಲ್ಲ ಎದ್ದು ಹೊರಟೆವು. ಹಿಂದಿನ ರಾತ್ರಿ ಮಳೆಯಾಗಿತ್ತು. ಇಳಿಜಾರಿನ ಹಾದಿ ಮತ್ತಷ್ಟೂ ಜಾರುತ್ತಿತ್ತು.
ಬೆಳಗ್ಗೆ ಬೇಸ್ ಕ್ಯಾಂಪ್ ಪ್ರೀನಿಯತ್ತ ಇಳಿಯ ತೊಡಗಿದೆವು. ಹ್ಹಾ. ಬನ್ನಾದ್ ಬಿಟ್ಟು ಮೂರ್ನಾಕ್ಕು ಕಿಲೋ ಮೀಟರ್ ಬರುತ್ತಿದ್ದಂತೆಯೇ ಹಿಮಾಲಯದ ನಾಯಿಯೊಂದು ಜೊತೆಯಾಯಿತು. ನಾನು ಮತ್ತು ಪಶ್ಚಿಮ ಬಂಗಾಳದಿಂದ ಬಂದಿದ್ದ ಚಾರಣಿಗರೊಬ್ಬರು ಎಲ್ಲರಿಗಿಂತ ಮುಂದೆ ಇದ್ದೆವು. ಒಂದಷ್ಟು ದೂರ ಸಾಥ್ ನೀಡಿದ ವ್ಯಕ್ತಿ ನಂತರ ನಾಪತ್ತೆ !. ಹಿಮಾಲಯದ ನಾಯಿ ಮತ್ತು ನಾನು ಬಿಟ್ಟರೆ ಇಡೀ ಹಾದಿ ಗವ್ಹ್ ಎನ್ನುತ್ತಿತ್ತು. ಸಾಲದಕ್ಕೆ ಮುಗಿಲು ಕಪ್ಪಾಯಿತು. ನೋಡುನೋಡುತ್ತಿದ್ದಂತೆ ತೋಯ್ದು ತೊಪ್ಪೆಯಾದೆ. ಧರಿಸಿದ್ದ ರೈನ್ ಕೋಟ್ ನೆಪಮಾತ್ರಕ್ಕಷ್ಟೆ ರೈನ್ ಕೋಟ್ ಆಗಿತ್ತು. ಮಳೆ ಬೀಳುತ್ತಲೇ ಇತ್ತು.

Picture courtesy: Net

ಹಾದಿಯ ಅಕ್ಕಪಕ್ಕ ದೇವದಾರು ವೃಕ್ಷಗಳ ಕಾಡು. ಅಂಬರವನ್ನು ಚುಂಬಿಸುವಂತಿದ್ದ ಮರಗಳು. ಒಂದೊಂದು ಮರದ ಬುಡವೂ ಕನಿಷ್ಠ 15 ರಿಂದ 20 ಜನ ಸೇರಿ ತಬ್ಬುವಷ್ಟು ದಪ್ಪ. ಆ ಮರಗಳ ಎಡೆಯಿಂದ ತೂರಿ ಬರುತ್ತಿದ್ದ ಗಾಳಿಯ ಸದ್ದು, ಮಳೆಯ ಸದ್ದು ಸೇರಿ ಮತ್ಯಾವುದೋ ವಿಚಿತ್ರ ಸದ್ದಾಗಿತ್ತು. ನಾಯಿ ನನ್ನಿಂದ ಐದಾರು ಅಡಿ ದೂರದಲ್ಲಿ ನಿಂತು ನನ್ನನ್ನೇ ನೋಡುತ್ತಿತ್ತು. ತುಸು ಹೊತ್ತು ನಿಂತು ಕೂಗು ಹಾಕಿದೆ. ಜೊತೆಯಲ್ಲಿದ್ದ ವ್ಯಕ್ತಿಯಿಂದ ಮಾರ್ದನಿಯಿಲ್ಲ. ಗುಂಪಿನಿಂದ ಸಾಕಷ್ಟು ದೂರ ಬಂದಾಗಿತ್ತು. ಹಿಂದೆ ಸಾಗದೇ ಮುಂದೆ ಸಾಗುವುದು ಅನಿವಾರ್ಯವಾಗಿತ್ತು. ನಡೆಯತೊಡಗಿದೆ. ನಾಯಿಯೂ ತಿರುತಿರುಗಿ ನೋಡುತ್ತಾ ಮುನ್ನಡೆಯತೊಡಗಿತು. ನಾನು ನಿಂತರೆ ಅದು ನಿಲ್ಲುತ್ತಿತ್ತು.
ಒಂದೆಡೆ ಮೂರು ಕವಲಾಗಿ ಹೊಡೆದಿದ್ದ ಹಾದಿ. ಎತ್ತ ಹೋಗುವುದು ತಿಳಿಯುತ್ತಿಲ್ಲ. ನನ್ನ ಎಡಕ್ಕಿದ್ದ ಹಾದಿ ಆಯ್ಕೆ ಮಾಡಿಕೊಂಡೆ. ನಾಲ್ಕೈದು ಹೆಜ್ಜೆ ಹಾಕಿದೆ ಅಷ್ಟೆ. ನಾಯಿ ಓಡೋಡಿ ಬಂದು ನನಗೆ ಅಡ್ಡ ನಿಂತಿತು. ಒಮ್ಮೆ ನನ್ನತ್ತ ಮತ್ತೊಮ್ಮೆ ಬಲದದ ಹಾದಿಯತ್ತ ಅದು ಕಣ್ಣು ಹಾಯಿಸತೊಡಗಿತು. ಆ ಮಾರ್ಗದತ್ತ ನಾನು ಹೆಜ್ಜೆ ಇರಿಸಿದೊಡನೆ ಮುಂದೆ ನಿಧಾನವಾಗಿ ನಡೆಯತೊಡಗಿತು. ಒಂದೆರಡು ಕಾಡಿ ನಿಂತು ಮೂತಿ ಮೇಲೆತ್ತಿ ಜೋರಾಗಿ ಉಸಿರೆಳೆದುಕೊಂಡಿತು. ನನ್ನತ್ತ ನೋಡಿ, ತಿರುಗಿ ನೋಡಿ ಮತ್ತೆ ಮುಂದೆ ನಿಧಾನವಾಗಿ ಓಡತೊಡಗಿತು.

Picture courtesy: Net

ಅಪಾಯಕಾರಿ ಪ್ರಾಣಿಗಳ ಜಾಡು ಗೊತ್ತಾದರೆ ನಾಯಿಗಳು ಈ ರೀತಿ ವರ್ತಿಸುತ್ತವೆ ಎಂದು ಗೊತ್ತಿದ್ದ ನನಗೆ ಆತಂಕವಾಗತೊಡಗಿತು. ಬಿರುಸಾಗಿ ಹೆಜ್ಜೆ ಹಾಕತೊಡಗಿದೆ. ಮಳೆ ಬರುತ್ತಲೇ ಇದ್ದಿದ್ದರಿಂದ ಜೋರಾಗಿ ಓಡುವಂತೆಯೂ ಇರಲಿಲ್ಲ. ಬಿದ್ದು ಗಾಯಗಳಾಗಬಹುದಿತ್ತು. ಸಾಕಷ್ಟು ದೂರ ಕ್ರಮಿಸಿದ ಮೇಲೆ ದೂರದಲ್ಲಿ ಒಂದೆರಡು ಮನೆಗಳು ಕಂಡ ನಂತರ ಮನಸು ನಿರಾಳವಾಯಿತು. ಆ ಮನೆಗಳನ್ನು ದಾಟುತ್ತಿದ್ದಂತೆ ಮನಾಲಿಯತ್ತ ಹೋಗುವ ರಸ್ತೆ. ಅದರ ಅಂಚಿನಲ್ಲಿ ಸಣ್ಣ ದುಕಾನ್ ಕಾಣಿಸಿತು. ಅಲ್ಲಿಗೆ ಹೋದೆ. ಭಾರಿ ಮಳೆಯಲ್ಲಿ ನೆನೆಯುತ್ತಾ ಬಂದ ನನ್ನನು ನೋಡಿ ಅಂಗಡಿಯಾತ ಮರು ಮಾತನಾಡದೇ ಒಳಗೆ ಕರೆದು ಚಾ ಇರಿಸಿದ. ಚಾ ಲೋಟಕ್ಕೆ ಕೈ ಇಡುವ ಮೊದಲು ಬಿಸ್ಕೇಟ್ ಪ್ಯಾಕ್ ಕೊಡುವಂತೆ ಕೇಳಿ ತೆಗೆದುಕೊಂಡು ಹಿಂದಿರುಗಿ ನೋಡಿದರೆ ಅಲ್ಲಿ ನಾಯಿ ಇರಲಿಲ್ಲ. ಕ್ಯಾಮೆರಾದಲ್ಲಿ ಬ್ಯಾಟರಿ ಇರಲಿಲ್ಲವಾದ ಕಾರಣ ಅದರ ಚಿತ್ರವನ್ನೂ ತೆಗೆಯಲಾಗಿರಲಿಲ್ಲ.  ಒಂದು ರೀತಿಯ ವಿಚಿತ್ರ ಸಂಕಟ. ಕಣ್ಣೀರು ಅನಿಯಂತ್ರಿತವಾಗಿ ಸುರಿಯತೊಡಗಿತು.

Similar Posts

2 Comments

  1. ಅದ್ಭುತವಾದ ಪ್ರವಾಸದ ಅನುಭವ. ಓದುತ್ತಿದ್ದರೆ ಮೈ ಜುಂ ಎನಿಸುವುದು. ಇನ್ನು ಜೊತೆಗಾರ ನಾಯಿಯ ನಡೆ ನಿಜಕ್ಕು ಅಚ್ಚರಿಯ ಸಂಗತಿ….

    1. ಧನ್ಯವಾದ…

Leave a Reply

Your email address will not be published. Required fields are marked *