Site icon ಕುಮಾರರೈತ

ಮನದ ಮಗು ಹಠ ಮಾಡಿದೆ ; ಮಾಡು ಬಾ ಕೊಂಗಾಟವ

ಕಾಂತಾರ ಸಿನೆಮಾದ ಹಾಡಿನಲ್ಲಿ ಬರುವ ಸಾಲಿದು. ಇಲ್ಲಿ ಬಳಕೆಯಾಗಿರುವ “ಕೊಂಗಾಟ” ಪದದ ಬಗ್ಗೆ ನಾನಿರುವ ಸಿನೆಮಾ ಗ್ರೂಪ್, ವಾಟ್ಸಪ್ ಗ್ತೂಪ್ ಗಳಲ್ಲಿ ಚರ್ಚೆಯಾಗಿದೆ. ಫೇಸ್ಬುಕ್ಕಿನಲ್ಲಿಯೂ ಚರ್ಚೆಯಾಗುತ್ತಿದೆ. ಕೊಂಗಾಟ‌ ಎಂದು ಬಳಸಿರುವುದಕ್ಕೆ ಇಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ತಮಿಳುನಾಡಿನಲ್ಲಿ ಚೇರರ ಆಳ್ವಿಕೆ ಕಾಲಘಟ್ಟದಲ್ಲಿ “ಕೊಂಗನಾಡು” ಪ್ರಾಂತ್ಯ ಅಸ್ತಿತ್ವದಲ್ಲಿತ್ತು. ಅಲ್ಲಿಯವರನ್ನು ಕೊಂಗರು ಎಂದೇ ಕರೆಯುತ್ತಿದ್ದರು. ಇವರು ಆಡುತ್ತಿದ್ದ ಜನಪದ ಆಟಕ್ಕೆ ಕೊಂಗಾಟ ಎನ್ನುತ್ತಿದ್ದರು.ಕನ್ನಂಬಾಡಿ ಕಟ್ಟೆ ನಾಲೆಗಳ ನಿರ್ಮಾಣಕ್ಕೆ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳಿಂದ ಬಂದ ಕಾರ್ಮಿಕರು ನಂತರವೂ ಮಂಡ್ಯ ಜಿಲ್ಲೆಯ ನೀರಾವರಿ ಪ್ರದೇಶಗಳಲ್ಲಿ ನೆಲೆಸಿದ್ದರು.‌ಇವರನ್ನು ಕೊಂಗರು ಎಂತಲೇ ಕರೆಯುತ್ತಿದ್ದರು. ಈಗಲೂ ಹಳೇ ತಲೆಗಳು ತಮಿಳರನ್ನು ಕೊಂಗರು ಎಂದೇ ಕರೆಯುತ್ತಾರೆ. ಗಂಭೀರವಾಗಿ ವರ್ತಿಸದವರನ್ನು “ಕೊಂಗಾಟ ಆಡ್ತಿಯಲ್ಲ, ಕೊಂಗಾಟ ಆಡಬೇಡ” ಎಂದು ಹೇಳುವ ರೂಢಿ ಈಗಲೂ‌ ಇದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಕಾಂತಾರ ಸಿನೆಮಾದಲ್ಲಿ ಬಳಸಿರುವ “ಕೊಂಗಾಟ” ಕ್ಕೆ ಬೇರೆಯೇ ಅರ್ಥವಿದೆ. ಇಲ್ಲಿ “ಮುದ್ದು ಮಾಡು” ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಆದ್ದರಿಂದ ತಮಿಳು ಮೂಲದ ಕೊಂಗಾಟಕ್ಕೂ ಇಲ್ಲಿ ಬಳಕೆಯಾಗಿರುವ ಕೊಂಗಾಟಕ್ಕೂ ಸಂಬಂಧವಿಲ್ಲ ಎಂದೇ ಭಾವಿಸಬಹುದು.
ಈ‌‌ ಸಂದರ್ಭದಲ್ಲಿ ಪ್ರಾದೇಶಿಕವಾಗಿ ಭಿನ್ನವಾಗುವ ಪದಗಳ‌ ಅರ್ಥ ವ್ಯತ್ಯಾಸ ಗಮನಿಸಬೇಕು.‌ಉದಾಹರಣೆಗೆ ತಮಿಳಿನಲ್ಲಿ “ಮೊಸರು” ಎನ್ನುವುದಕ್ಕೆ ಅಶ್ಲೀಲ‌ ಅರ್ಥವಿದೆ ಎನ್ನುತ್ತಾರೆ. ಕನ್ನಡದಲ್ಲಿ ಮೊಸರೆಂದರೆ ಹಾಲಿನ ಉತ್ಪನ್ನ ಅಷ್ಟೆ ಅರ್ಥ. ಆದ್ದರಿಂದ “ಕೊಂಗಾಟ” ಎಂದು ಬಳಸಬಾರದಿತ್ತು ಎಂದು ಹೇಳುವುದಕ್ಕೂ ಅರ್ಥವಿಲ್ಲ

ಕರಾವಳಿಯವರಾದ ಸುಕನ್ಯಾ ಉರಾಳ ಅವರು “ಕೊಂಗಾಟದ ಕೊಡಿ ಮುದ್ದು…ಇದು ಚಿಕ್ಕವಳಿಂದ ಹಿರಿಯರ ಬಾಯಿಂದ ಕೇಳಿದ ಮಾತುಗಳು…ಅತೀ ಮುಚ್ಚಟೆ ಮಾಡಿ ಸಾಕಿದ ಮಗು ಅನ್ನೊದಕ್ಕೆ ಹೇಳ್ತಾರೆ…ಪ್ರೀತಿ ..ಮುದ್ದು..ಇದಕ್ಕೆ ಬದಲಾಗಿ ಕೊಂಗಾಟ ಅನ್ನೊ ಪದ ಕೇಳ್ಕೊಂಡೆ ಬೆಳೆದವಳು ನಾನು” ಎನ್ನುತ್ತಾರೆ.

ಕರಾವಳಿಯವರೇ ಆದ ಚಿತ್ರಾ ಸಂತೋಷ್ ಅವರು “ನಮ್ಮನೆಯಲ್ಲಿ ಕೊಂಗಾಟ ಅಂತ ಬಳಸುವುದಿಲ್ಲ ಕೊಂಡಾಟ ಅಂತ ಬಳಸುತ್ತೇವೆ…ಇದರರ್ಥ ಮುದ್ದು” ಎಂದು ವಿವರಿಸುತ್ತಾರೆ.

ಕರಾವಳಿಯವರೇ ಆದ ಗಣೇಶ್ ಅವರು “ಕೊಂಗಾಟ ಕುಂದಾಪ್ರದಲ್ಲಿ ಸಾಮಾನ್ಯ ಆಡುಭಾಷೆ.. ಅಜ್ಜಿಗೆ ನಾನು ಅಂದ್ರೆ ಜಾಸ್ತಿ ಆಸೆ ಹಾಗಾಗಿ ನಂಗೆ “ಅಜ್ಜಿಯ ಕೊಂಗಾಟದ್ ಮೊಮ್ಮಗ” ಅಂತಿದ್ರು.. ಇದರಲ್ಲಿ ಬೇರೆ ಅರ್ಥ ಇಲ್ಲ ಆ ಪದ್ಯದಲ್ಲೂ.. ಯಾಕಂದ್ರೆ ಆ ಸಾಹಿತ್ಯ ಬರೆದವರು ಕೂಡ ಕುಂದಾಪುರದ ಮರವಂತೆ ಹುಡುಗ” ಎಂದು ವಿವರಿಸುತ್ತಾರೆ.

ರಾಧಾಕೃಷ್ಣ ಆನೆಗುಂದಿ ಅವರು “ಕೊಂಗ ಮತ್ತು ಕೊಂಗಾಟ ಪದಕ್ಕೆ ಹತ್ತಾರು ಅರ್ಥಗಳಿದೆ. ಪ್ರಾದೇಶಿಕವಾಗಿ ಬಳಕೆಯಾಗುವ ಶಬ್ಧಗಳ ಅರ್ಥ ಇಲ್ಲದ ದಡ್ಡರು ಮಾತ್ರ ಕ್ಯಾತೆ ತೆಗೆಯಲು ಸಾಧ್ಯ. ಉಡುಪಿ ಮತ್ತು ಮಂಗಳೂರಿನಲ್ಲೂ ಕೊಂಗಾಟ ( ತುಳುವಿನಲ್ಲಿ ಕೊಂಡಾಟ) ಪರಿಸ್ಥಿತಿಗೆ ತಕ್ಕಂತೆ ಬಳಕೆಯಾಗುತ್ತದೆ. ಉತ್ತರ ಕರ್ನಾಟಕದ ಪ್ರೀತಿಗೆ ಬೈಗುಳ ನಮ್ಮ ಕಡೆ ದೊಡ್ಡ ಅಪರಾಧದ ಪದಗಳು… ಹಾಗೇ” ಎಂದು ವಿವರಿಸುತ್ತಾರೆ.

ವಸಂತ ಬಂಟ್ಕಳ್ ಅವರು ನಾವು ಕೊಂಗಾಟ ಅಂತ ಬಳಕೆ ಮಾಡಿರಲಿಲ್ಲ ’ಕೊಂಡಾಟ’ ಅಂತ ಬಳಸುತ್ತಿದ್ದೆವು ಪಕ್ಕನೆ ಹೇಳುವಾಗ ’ಕೊಂದಡ’ ಅಂತ ಕೇಳುತ್ತಿತ್ತು” ಎನ್ನುತ್ತಾರೆ.

ಶಿವಮೊಗ್ಗದ ಪ್ಪುಸ್ತಕ ಪ್ರಕಾಶಕರಾದ ಅಕ್ಷತಾ ಕೊಂಕಣಿಯಲ್ಲಿ “ ಮುದ್ದು ಮಾಡುವುದು ಎಂಬುದಕ್ಕೆ ಕೊಂಗಾಟ್ಎಂಬ ಶಬ್ದವೇ ಇದೆ” ಎಂದು ವಿವರಿಸುತ್ತಾರೆ.

ಶಿವಮೊಗ್ಗದ ಖ್ಯಾತ ಲೇಖಕಿ ಸವಿತಾ ನಾಗಭೂಷಣ ಅವರು “ಕೊಂಕಣಿಯಲ್ಲಿ ಕೂಡ ಕೊಂಗಾಟ ಅನ್ನುವುದಕ್ಕೆ ಮುದ್ದು(ನಾಟಕೀಯ ರೂಪದ್ದು) ಎಂಬ ಅರ್ಥ ಇದೆ. ಒಂದೇ ಪದ ಬೇರೆ ಬೇರೆ ರೂಪದಲ್ಲಿ ಬಳಕೆ ಆಗಬಹುದು. ಉದಾ: ತಿಂಡಿ. ಉತ್ತರ ಕರ್ನಾಟಕದಲ್ಲಿ ಇದಕ್ಕೆ ತುರಿಕೆ ಎಂಬ ಅರ್ಥ” ಎನ್ನುತ್ತಾರೆ

ಮೂಲತಃ ಕರಾವಳಿಯವರೇ ಆದ, ಖ್ಯಾತ ಸಿನೆಮಾ ವಿಮರ್ಶಕ ನಾಗರಾಜ ಶೆಟ್ಟಿ ಅವರು “ಕೊಂಡಾಟ ತುಳುವಿನಲ್ಲಿ ಸಾಮಾನ್ಯವಾಗಿ ಮುದ್ದು ಮಾಡುವುದಕ್ಕೆ ಬಳಸುವ ಪದ.ಕುಂದಾಪುರ ಕಡೆ ಅದನ್ನೇ ಕೊಂಗಾಟ ಎನ್ನುತ್ತಾರೆ.ನನಗೆ ತಿಳಿದಂತೆ ಇದಕ್ಕೂ ತಮಿಳಿನ ಕೊಂಗ ಪದಕ್ಕೂ ಸಂಬಂಧ ಇರದು” ಎಂದೇಳುತ್ತಾರೆ.

ಖ್ಯಾತ ಸಾಹಿತಿ ಸಬಿತಾ ಬನ್ನಾಡಿ ಅವರು “ಕುಂದಾಪುರ ಕನ್ನಡದಲ್ಲಿ ಮುದ್ದುಮಾಡು ಎನ್ನುವುದಕ್ಕೆ ಕೊಂಗಾಟ ಅಂತಲೇ ಹೇಳುವುದು. ನುಡಿಗಳ ಜಾಯಮಾನಕ್ಕೆ ಅದರದೇ ಅನನ್ಯತೆ ಇರುತ್ತೆ. ಪ್ರತಿಯೊಂದೂ ಭಿನ್ನ. ಒಂದು ಪದಕ್ಕೆ ಹಲವು ಅರ್ಥ ಇರಬಹುದು. ಆಗ. ಪದವೊಂದರ ಅರ್ಥವನ್ನು ಸಾಂದರ್ಭಿಕವಾಗಿಯೇ ಗ್ರಹಿಸಬೇಕು. ಇಲ್ಲಿ ಮುದ್ದು ಮಾಡು ಎಂಬುದು ಸಾಂದರ್ಭಿಕ ಮತ್ತು ಒಳನುಡಿಯಲ್ಲಿ (=ಪ್ರಾದೇಶಿಕ) ಚಲಾವಣೆಯಲ್ಲಿ ಇರುವುದು” ಎಂದು ವಿವರಿಸುತ್ತಾರೆ.

ಬಯಲುಸೀಮೆ ದಾವಣಗೆರೆಯವರಾದ ಖ್ಯಾತ ಸಾಹಿತಿ ರವಿ ಹಂಜ್ ಅವರು “ಚೆಟ್ಟಿನಾಡು, ಕೊಂಗನಾಡು ಪದಗಳು ಅವಹೇಳನಕಾರಿ ಅಲ್ಲ. ಇವು ಪ್ರಾದೇಶಿಕತೆಯನ್ನು ತಿಳಿಸುವ ಪದಗಳು. ಯಾರೋ ಇದನ್ನು ಹೀಯಾಳಿಸಲು ಬಳಸಿದರೆಂದು ಈ ಪದಗಳನ್ನೇ ಬಳಸಬಾರದು ಎಂಬುದು ಕ್ಷುಲ್ಲಕ ಚಿಂತನೆ. ಈ ಪ್ರದೇಶದ ಅಡುಗೆಗಳು ಚೆಟ್ಟಿನಾಡು ಚಿಕನ್, ಕೊಂಗನಾಡು ಮಟನ್ ಎಂದೆಲ್ಲಾ ಇದೆ. ಕೊಂಗಾಟ ಒಂದು ಜನಪದ ಪದ. ಅದನ್ನು ಅರಿಯದವರಿಗೆ ತಿಳಿಸಬೇಕೇ ಹೊರತು ಪದವನ್ನೇ ಬಳಸಬಾರದು ಎಂಬುದಲ್ಲ. ಬ್ರಿಟಿಷರು ಭಾರತೀಯರನ್ನು ಕೂಲಿ ಎಂದು ಹೀಯಾಳಿಸುವಂತೆ ಸ್ವಾಮಿ/ಸಾಮಿ ಎಂದೂ ಹೀಯಾಳಿಸಿ ಕರೆಯುತ್ತಿದ್ದರು. ಹಾಗೆಂದು ಸ್ವಾಮಿ/ಸಾಮಿಯ ಅರ್ಥವನ್ನು ಹಾಗೆ ಕರೆದ ಮೂರ್ಖರಿಗಾಗಿ ಬದಲಾಯಿಸಬೇಕೆ?!? ಎಂದು ಪ್ರಶ್ನಿಸುತ್ತಾರೆ.

ಬಯಲುಸೀಮೆಯವರಾದ ಖ್ಯಾತ ಸಾಹಿತಿ ಉಜ್ಜಜ್ಜಿ ರಾಜಣ್ಣ ಅವರು “ಕೊಂಗಾಟ ಎಂಬ ಪದ ನಾಡಾವಳಿಯಲ್ಲಿ ಬಳಕೆಯಲ್ಲಿ ಇರುವ ಪದ. ಮನದ ಮಾತು ಹೇಳಲಾಗದೆ ಅಭಿವ್ಯಕ್ತಿಸುವ ಆಂಗಿಕ ಸನ್ಹೆಗಳಿಗೂ, ನೀಡುವ ಆಂಗಿಕ ಪ್ರತಿಕ್ರಿಯೆಗಳಿಗೂ ಕೊಂಗಾಟ ಎನ್ನುವರು. ಅದೊಂದು ಅಪರಿಮಿತವಾಗಿ ವರ್ತಿಸುವ, ಪ್ರೀತಿ ಮಾಡುವ, ಸ್ನೇಹಿತರ ನಡುವಿನ ವಿಶ್ವಾಸಾರ್ಹವಾದ ಸಲುಗೆ. ಹೊಂದಾಣಿಕೆಯನ್ನು ಆಪ್ತವಾಗಿಸಿಕೊಳ್ಳುವವರ ನಡುವಿನ ನಡಾವಳಿಕೆ. ಇದು ವಯಸ್ಸಿಗೆ ತಕ್ಕಂತೆ ಪ್ರಸಂಗಗಳಿಗೆ ಅನುಗುಣವಾಗಿ, ಸಂದರ್ಭೋಚಿತವಾಗಿ ಮನುಷ್ಯನಷ್ಟೇ ಅಲ್ಲ ಪ್ರಾಣಿಗಳಲ್ಲೂ ಇದೆ. ಮಾನವ ‘ಕೊಂಗಾಟ’ ಆಡಿದರೆ ಪ್ರಾಣಿಗಳು ‘ಚಿನ್ನಾಟ’ ಆಡುತ್ತವೆ. ಕಾಮ ಪ್ರೇಮ ಪ್ರೀತಿ ಆನಂದದ ಸಂದರ್ಭಗಳಲ್ಲಿ ಜೀವಿಗಳ ನಡುವೆ ಸಹಜವಾಗಿಯೇ ನಡೆಯುವ ಸಹಜಾಭಿನಯ. ಪದಶಃ ಅರ್ಥ ಹುಡುಕುವುದು ಹುತ್ತಬಡಿದ ಹಾಗೆ. ಎಂದು ವಿವರಿಸುತ್ತಾರೆ

ಒಂದೇ ಪದಕ್ಕೆ ಪ್ರಾದೇಶಿಕ ಭಿನ್ನತೆ ಹೆಸರಿನಲ್ಲಿ ಬೇರೆಬೇರೆ ಅರ್ಥಗಳಿರುತ್ತವೆ. ಈ ಹಿನ್ನಲೆಯಲ್ಲಿ ನಾವು ತಿಳಿದಿದ್ದೇ ಸರಿ ಎಂಬ ಭಾವನೆ ಇರಬಾರದು ಅಲ್ಲವೇ ?

 

Exit mobile version