Site icon ಕುಮಾರರೈತ

ಕುವೆಂಪು ಅವರಿಗೆ ನೊಬೆಲ್ ತಪ್ಪಲು ಕಾರಣಗಳಿವೆ !

ದೆಹಲಿಯ ಜವಾಹರ್ ಲಾಲ್ ನೆಹ್ರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಮುಖ್ಯಸ್ಥ, ಅಂತರರಾಷ್ಟ್ರೀಯ ಖ್ಯಾತಿಯ  ಭಾಷಾ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮೆ ಅವರೊಂದಿಗಿನ ಮಾತುಕಥೆಯ ಎರಡನೇ ಭಾಗವಿದು.

ಪುರುಷೋತ್ತಮ ಬಿಳಿಮಲೆ: ಭಾರತದಲ್ಲಿರುವ ಕನ್ನಡಪೀಠಗಳ ವಿಷಯವಾಗಿ ಹೇಳಬೇಕಾದರೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪ್ರತಿನಿಧಿಕರಿಸುವ ಕೆಲಸವನ್ನು ಇವುಗಳು ಮಾಡಬಹುದು. ರಾಷ್ಟ್ರಮಟ್ಟದಲ್ಲಿ ಇಂಥ ಪ್ರಾತಿನಿಧಿಕರಣ ಕಾರ್ಯಗಳನ್ನು ಜೆ.ಎನ್.ಯು. ವಿನಲ್ಲಿರುವ ಕನ್ನಡಪೀಠ ಶುರು ಮಾಡಿದೆ. ಇದೇ ರೀತಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಾತಿನಿಧಿಕರಣ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರಿಗೆ ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಕನ್ನಡದ ವರನಟ ರಾಜಕುಮಾರ್ ಬಗ್ಗೆ ಅಧ್ಯಯನ ಪೀಠ ಆರಂಭಿಸಲು ಆಸಕ್ತಿ ತೆಗೆದುಕೊಳ್ಳುವಂತೆ ಹೇಳಿದೆ. ಕೇವಲ ಒಂದೇ ಒಂದು ಬಾರಿ ಅನುದಾನ ನೀಡಿ ಎಂದು ಸಲಹೆ ಮಾಡಿದೆ. ಆದರೆ ಈ ಬಗ್ಗೆ ಸರ್ಕಾರ ಆಸಕ್ತಿ ತೆಗೆದುಕೊಳ್ಳಲಿಲ್ಲ.

ಪ್ರಸ್ತುತ ಜೆ,ಎನ್.ಯು.ವಿನಲ್ಲಿರುವ ಕನ್ನಡಪೀಠಕ್ಕೆ ರಾಜ್ಯ ಸರ್ಕಾರ 43 ಲಕ್ಷ ಅನುದಾನ ನೀಡಿದೆ. ಇನ್ನು ನಾಲ್ಕು ವರ್ಷದ ಬಳಿಕ ಈ ಪೀಠದ ಕಥೆ ಏನಾಗುವುದೋ ಗೊತ್ತಿಲ್ಲ. ಆದ್ದರಿಂದ ನಾನು ಈ ಪೀಠಕ್ಕೆ ಒಂದು ಬಾರಿಯ ಅನುದಾನ ನೀಡಿ ಎಂದು ಹೇಳಿದ್ದೇನೆ. ಕನಿಷ್ಟ 5 ಕೋಟಿ ಕೊಟ್ಟರೆ ಅದನ್ನು ಮೂಲಧನ ಎಂದು ಬ್ಯಾಂಕಿನಲ್ಲಿ ಠೇವಣಿ ಇಡಬಹುದು. ಇದರಿಂದ ಬರುವ ಬಡ್ಡಿಯಲ್ಲಿ ಕನ್ನಡಪೀಠ ನಿರಂತರವಾಗಿ, ಅಬಾಧಿತವಾಗಿ ನಡೆದುಕೊಂಡು ಹೋಗುತ್ತದೆ.

ಕುಮಾರ ರೈತ: ಅನುವಾದಗಳ ವಿಷಯದಲ್ಲಿ ಕನ್ನಡಪೀಠದಿಂದ ಆಗಬಹುದಾದ ಕೆಲಸ ಕಾರ್ಯಗಳೇನು

ಪುರುಷೋತ್ತಮ ಬಿಳಿಮಲೆ: ಹೊರಭಾಷೆಗಳ ಪ್ರಮುಖ ಕೃತಿಗಳ ಕನ್ನಡ ಅನುವಾದಗಳು ಈಗಾಗಲೇ ಲಭ್ಯ ಇವೆ. ಸಂಸ್ಥೆಗಳು ಈ ಕಾರ್ಯ ಮಾಡಿವೆ. ವೈಯಕ್ತಿಕ ಮಟ್ಟದಲ್ಲಿಯೂ ಕೆಲವರು ಈ ಕೆಲಸ ಮಾಡಿದ್ದಾರೆ. ವರ್ಲ್ಡ್ ಕ್ಲಾಸಿಕ್ ಎನ್ನುವ ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ. ಆದರೆ ನಾವು ಕೇಳಿಕೊಳ್ಳಬೇಕಾಗಿರುವುದು ಕನ್ನಡದ ಎಷ್ಟು ಕೃತಿಗಳು ಹೊರ ಭಾಷೆಗಳಿಗೆ ಅನುವಾದಗೊಂಡಿವೆ ? ಬೆರಳೆಣಿಕೆಯಷ್ಟು ಕೃತಿಗಳು ಮಾತ್ರ ಅನುವಾದಗೊಂಡಿವೆ.

ನೀವು ದೆಹಲಿಯ ದರಿಯಾಗಂಜ್ ನಲ್ಲಿರುವ ಪುಸ್ತಕದಂಗಡಿಗಳನ್ನೆಲ್ಲ ಸುತ್ತಿದರೂ ಕನ್ನಡದಿಂದ ಹಿಂದಿಗೆ ಅನುವಾದಗೊಂಡ ಒಂದೇ ಒಂದು ಕೃತಿ ಲಭ್ಯವಿಲ್ಲ. ಹಿಂದಿಯಲ್ಲಿ ಕುವೆಂಪು ಅವರ ಕೃತಿಯ ಸರಿಯಾದ ಅನುವಾದವೊಂದೂ ಲಭ್ಯವಿಲ್ಲ. ಕನ್ನಡ ಭಾಷೆಯ ಶ್ರೇಷ್ಠ ಬರಹಗಾರ ಕುವೆಂಪು ಅವರ ಕೃತಿಗಳೇ ರಾಜ್ಯದ ಹೊರಗಿನ ಪ್ರಮುಖ ಭಾಷೆಯಲ್ಲಿ ದೊರೆಯುವುದಿಲ್ಲವೆಂದರೆ ಏನರ್ಥ.

ಇವತ್ತಿನ ತುರ್ತು ಏನೆಂದರೆ ಕನ್ನಡದ ಶ್ರೇಷ್ಠ ಕೃತಿಗಳು ಹಿಂದಿಗೆ ಮತ್ತು ಇಂಗ್ಲಿಷ್ಗೆ ಅನುವಾದಗೊಳ್ಳಬೇಕು. ಆದ್ಯತೆ ಮೇರೆಗೆ ಈ ಕೆಲಸ ನಡೆಯಬೇಕು. ಏಕೆಂದರೆ ಹಿಂದಿ ಒಂಭತ್ತು ರಾಜ್ಯಗಳನ್ನು ಆವರಿಸಿಕೊಂಡಿದೆ. ದೊಡ್ಡ ಸಂಖ್ಯೆಯ ಓದುಗರು ಅಲ್ಲಿದ್ದಾರೆ. ಒಂದು ಕೃತಿಯ ಕನಿಷ್ಟ ಐದಾರು ಸಾವಿರ ಕೃತಿಗಳು ಬಹು ಸುಲಭವಾಗಿ,ಶೀಘ್ರವಾಗಿ ಮಾರಾಟವಾಗುತ್ತವೆ. ಆದರೆ ಇಲ್ಲಿಯ ತನಕ ಕನ್ನಡದ ಯಾವೊಂದು ಕೃತಿಯ ಉತ್ತಮ ಅನುವಾದ ಹಿಂದಿಯಲ್ಲಿ ಲಭ್ಯವಿಲ್ಲ.

ಇದಕ್ಕೆ ಗಿರೀಶ್ ಕಾರ್ನಾಡ್ ಅವರ ಕೃತಿಗಳು ಅಪವಾದ ಎನ್ನಬಹುದು. ಇದಕ್ಕೆ ಕಾರಣವೂ ಇದೆ. ಅವರು ಉತ್ತರ ಭಾರತದಲ್ಲಿಯೇ ಹೆಚ್ಚು ಸಮಯ ಇದ್ದವರು. ಬಾಲಿವುಡ್ ನಟ ಸಹ. ಅವರು ಅವರ ಕೃತಿಗಳ ಹಿಂದಿ ಅನುವಾದಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಹಿಂದಿ ಓದುಗರಿಗೆ ಗಿರೀಶ್ ಕಾರ್ನಾಡ್ ಗೊತ್ತು.

ಹೊರ ಭಾಷೆಯ ಒಂದಷ್ಟು ವಿದ್ಯಾರ್ಥಿಗಳು ದೆಹಲಿ ಕನ್ನಡಪೀಠಕ್ಕೆ ಬರುತ್ತಾರೆ. ಇವರಲ್ಲೊಬ್ಬ ಪ್ರತಿಭಾವಂತ ವಿದ್ಯಾರ್ಥಿ ಕುವೆಂಪು ಅವರ ಕಾನೂರು ಹೆಗ್ಗಡತಿ ಅಧ್ಯಯನ ಮಾಡಬೇಕೆಂದು ಕನ್ನಡ ಕಲಿಯುತ್ತಿದ್ದಾನೆ. ದುರದೃಷ್ಟ ಎಂದರೆ ಈ ಕೃತಿಯ ಅನುವಾದ ಇಂಗ್ಲಿಷಿನಲ್ಲಿ ಸಿಕ್ತಾ ಇಲ್ಲ.

ಚಂದ್ರಶೇಖರ ಕಂಬಾರರು ಜಾಣ. ಯಾರಿಂದಲಾದರೂ ಅವರಿಗೆ ಸಂಬಂಧಿಸಿದ ಕೆಲಸ ಆಗಬೇಕೆಂದರೆ ಇಂದ್ರ-ಚಂದ್ರ ಎಂದೆಲ್ಲ ಹೊಗಳಿ ಅಟ್ಟಕೇರಿಸುತ್ತಾರೆ. ಪೆಂಗ್ವಿನ್, ಆಕ್ಸ್ಪರ್ಡ್ ಪ್ರಕಾಶನದವರಿಗೆಲ್ಲ  ಹೇಳಿ ಅನುವಾದಗಳನ್ನು ಮಾಡಿಸಿಕೊಳ್ಳುತ್ತಾರೆ. ಆದ್ದರಿಂದಲೇ ಇವರ ಕೃತಿಗಳು ಇಂಗ್ಲಿಷಿನಲ್ಲಿ ದೊರೆಯುತ್ತವೆ.

“ನಾನು ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಚಂದ್ರಶೇಖರ ಕಂಬಾರ. ನಾನು ಸಲಹೆ ಮಾಡುತ್ತಿದ್ದೇನೆ. ಇಂಥವುಗಳು ಕನ್ನಡದ ಬಹು ಒಳ್ಳೆಯ ಕೃತಿಗಳು. ಇದು ಶಿವರಾಮ ಕಾರಂತರ ಉತ್ತಮ ಕಾದಂಬರಿ, ಇದು ಕುವೆಂಪು ಅವರ ಉತ್ತಮ ಕಾದಂಬರಿ; ಇವುಗಳು ಇಂಗ್ಲಿಷಿಗೆ ಅನುವಾದಗೊಳ್ಳುವುದು ಸೂಕ್ತ” ಎಂದು ಒಮ್ಮೆಯಾದರೂ ಹೇಳಿದ್ದಾರಾ ?

ಕೆಲವೊಂದು ವಿಷಯಗಳಲ್ಲಿ ಶಿವಪ್ರಕಾಶ್ ಕೂಡ ಹೀಗೆ. ಇವರು ಇಂಗ್ಲಿಷ್ ಪ್ರಾಧ್ಯಾಪಕರು. ತಮ್ಮ ಕವನಗಳನ್ನು ಅನುವಾದ ಮಾಡಿ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟಗೊಳಿಸುತ್ತಾರೆ. ಆದರೆ ಇವರು ಕನ್ನಡದ ಇತರ ಯಾರೊಬ್ಬ ಸಾಹಿತಿ ಕೃತಿಗಳನ್ನು ಅನುವಾದ ಮಾಡಿದ್ದಾರೆ ? ಏಕೆ ಮಾಡಲಿಲ್ಲ.

ನನ್ನಂಥವನ ಕೈಯಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ನಾನು ಕನ್ನಡದ ಪ್ರಾಧ್ಯಾಪಕ. ಇಂಗ್ಲಿಷ್ ಭಾಷೆ ಮೇಲೆ ಹೆಚ್ಚು ಹಿಡಿತವಿಲ್ಲ. ಆದ್ದರಿಂದ ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಕಾರ್ಯಗಳು ಸಾಧ್ಯವಾಗುವುದಿಲ್ಲ. ಆದರೆ ಸಾಧ್ಯವಿರುವವರು ಈ ಕೆಲಸ ಮಾಡಬಹುದಿತ್ತಲ್ಲವೇ ? ಈಗ ಬಹು ತುರ್ತಾಗಿ ಆಗಬೇಕಿರುವುದು ಕನ್ನಡದ ಶ್ರೇಷ್ಠ ಎನ್ನುವ ಕೃತಿಗಳು ಇಂಗ್ಲಿಷಿಗೆ ಅನುವಾದಗೊಳ್ಳಬೇಕಿರುವುದು.

ಮಾಸ್ತಿ, ಪುತಿನ, ಕೆ.ಎಸ್.ನ. ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ ಹೀಗೆ ಯಾರೊಬ್ಬರೂ ಉತ್ತರ ಭಾರತೀಯರಿಗೆ ಗೊತ್ತಿಲ್ಲ. ಹೆಸರು ಕೇಳಿಯೂ ಗೊತ್ತಿಲ್ಲ. ನಮ್ಮ ಜೆ.ಎನ್.ಯು.ವಿನಲ್ಲಿರುವ ಭಾರತೀಯ ಭಾಷೆಗಳ ಅಧ್ಯಯನ ಒಕ್ಕೂಟದ ಅಧ್ಯಕ್ಷರ ಕೊಠಡಿಯಲ್ಲಿ ಕುವೆಂಪು ಅವರ ದೊಡ್ಡ ಪಠ ಹಾಕಿದ್ದೇನೆ. ಅಲ್ಲಿಗೆ ಬಂದವರಿಗೆಲ್ಲ ಕುವೆಂಪು ಬಗ್ಗೆ ಹೇಳುವುದೇ ನನ್ನ ಕೆಲಸ.

ಬಂದವರಲ್ಲಿ ಹೊರಭಾಷೆಗಳ ವಿದ್ವಾಂಸರು ಸಹ ಕುವೆಂಪು ಪೋಟೋ ನೋಡಿ ‘ಇವರು ಯಾರು’ ಎಂದು ಕೇಳುತ್ತಾರೆ. ಆಗ ನಾನು ‘ಇವರು ಕುವೆಂಪು’ ಎಂದು ಹೇಳುತ್ತೇನೆ. ಆಗ ಅವರು ‘ಒಳ್ಳೆಯದು; ಇವರೇನು ಮಾಡಿದ್ದಾರೆ’ ಎಂದು ಮರು ಪ್ರಶ್ನಿಸುತ್ತಾರೆ. ಆಗ ನಾನು ಕುವೆಂಪು ಅವರ ವಿವರಗಳೆಲ್ಲವನ್ನೂ ಹೇಳಬೇಕು. ‘ಇವರು ಕವಿ, ಕಾದಂಬರಿಕಾರ, ನಾಟಕಕಾರ, ಮಹಾಕಾವ್ಯ ರಚಿಸಿದ್ದಾರೆ ಕ್ರಾಂತಿಕಾರಿ ಲೇಖಕ ಎಂದು ವಿವರಿಸಬೇಕು.

ಕುವೆಂಪು ಅಂಥ ದೊಡ್ಡ ಬರಹಗಾರರು ಭಾರತದಲ್ಲಿಯೇ ಇರುವ ಪ್ರಮುಖ ಭಾಷೆಯೊಂದರ ವಿದ್ವಾಂಸರಿಗೆ ಗೊತ್ತಿಲ್ಲ ಎಂದರೆ ಮನಸಿಗೆ ಬಹಳ ನೋವಾಗುತ್ತದೆ. ಇದು ಯಾರ ತಪ್ಪು ? ಕನ್ನಡವನ್ನು ಬೇರೆಬೇರೆ ಕ್ಷೇತ್ರಗಳಲ್ಲಿ ಪ್ರತಿನಿಧಿಸುತ್ತಿರುವವರದು. ಸಾಧ್ಯ ಇರುವವರು ಇಂಥ ದೊಡ್ಡ ಬರಹಗಾರರ ಕೃತಿಗಳನ್ನು ಅನುವಾದ ಮಾಡಿಸಿದ್ದರೆ ಪರಿಚಯ ಮಾಡಿಕೊಡುವಂಥ ಸಂದರ್ಭವೇ ಸೃಷ್ಟಿಯಾಗುತ್ತಿರಲಿಲ್ಲ.

ಕನ್ನಡದ ಓದುಗರಿಗೆ ಕಬೀರ್, ರವೀಂದ್ರ ನಾಥ ಠ್ಯಾಗೋರ್ , ಪ್ರೇಮ್ ಚಂದ್, ಮಹಾಶ್ವೇತದೇವಿ ಪೋಟೋ ತೋರಿಸಿದರೆ ಥಟ್ಟನೇ ಅವರು ಯಾರೆಂದು ಹೇಳುತ್ತಾರೆ. ಇದೇ ಪರಿಸ್ಥಿತಿಯನ್ನು ಕುವೆಂಪು ಅವರ ಬಗ್ಗೆ ನಿರ್ಮಿಸಲು ಏಕೆ ಆಗಿಲ್ಲ ? ಜೆ.ಎನ್.ಯು. ವಿನ ಹಿಂದಿ ಪ್ರೊಫೆಸರ್ಗಳಿಗೆ ಕನ್ನಡದ ಪ್ರಮುಖ ಸಾಹಿತಿಗಳು ಗೊತ್ತಾಗಿಲ್ಲ ಎಂದರೆ ಬೇಸರವಾಗುತ್ತದೆ.

ಕುವೆಂಪು ಅವರ ಸಮಗ್ರ ಕೃತಿಗಳು ಇಂಗ್ಲಿಷಿಗೆ ಅನುವಾದಗೊಂಡು ವಿದೇಶಗಳಲ್ಲಿ ಪ್ರಸರಣಗೊಂಡಿದ್ದರೆ ಅವರಿಗೆ ನೊಬೆಲ್ ಪ್ರಶಸ್ತಿ ಬಂದು ಬಹಳ ಕಾಲವಾಗಿರುತ್ತಿತ್ತು. ಅದು ಬಾರದಿರುವುದಕ್ಕೆ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ಕಾರಣವಲ್ಲ. ರಾಜ್ಯದೊಳಗೆ ಕನ್ನಡವನ್ನು ಪ್ರಾತಿನಿಧಿಸುತ್ತಿರುವ ಸಂಸ್ಥೆಗಳು ಕಾರಣ. ಸಮರ್ಥವಾಗಿ ಅನುವಾದ ಮಾಡುವಂಥವರ ಮುಖಾಂತರ ಈ ಕಾರ್ಯವನ್ನವರು ಮಾಡಿಸಬೇಕಿತ್ತು.

ಈ ಎಲ್ಲ ನಿಟ್ಟಿನಲ್ಲಿ ಕನ್ನಡದ ಉತ್ತಮ ಕೃತಿಗಳು ಎಲ್ಲ ಪ್ರಮುಖ ಭಾಷೆಗಳಿಗೆ ಅನುವಾದಗೊಳ್ಳಬೇಕು. ಕನ್ನಡತನದ ಸವಿಯನ್ನು ಹೊರ ಭಾಷಿಕರಿಗೆ ಹತ್ತಿಸಬೇಕು. ಮುಖ್ಯವಾಗಿ ಇಂಗ್ಲಿಷಿಗೆ ಅನುವಾದಗೊಳ್ಳಬೇಕು. ಹಿಂದಿಗೆ ಅನುವಾದಗೊಂಡರೆ ಅದರ ಪ್ರಕಾಶನದ ಜವಾಬ್ದಾರಿಯನ್ನು ಹಿಂದಿಯವರೇ ತೆಗೆದುಕೊಳ್ಳುವಂತೆ ಮಾಡಬೇಕು. ಅವರಿಗೆ ಬಹಳ ವ್ಯವಸ್ಥಿತವಾದ ಮಾರಾಟ ಜಾಲವಿರುತ್ತದೆ. ಕೃತಿಗಳು ಶೀಘ್ರ ಮಾರಾಟವಾಗುತ್ತವೆ.

ಕುಮಾರ ರೈತ: ಬೇರೆ ಯಾವ ಭಾಷೆಗಳಲ್ಲಿಯೂ ಇಲ್ಲದೇ ಇರುವಷ್ಟು ದೊಡ್ಡ ಸಂಖ್ಯೆಯಲ್ಲಿ ಕನ್ನಡದಲ್ಲಿ ಅಕಾಡೆಮಿಗಳು, ಪ್ರಾಧಿಕಾರಗಳು, ಪರಿಷತ್ತು, ಇಲಾಖೆ ಇವೆಲ್ಲ ಇವೆ. ನಿಮ್ಮ ಮಾತು ಕೇಳಿದ ನಂತರ  ಇವೆಲ್ಲವೂ ಕನ್ನಡ ಸಾಹಿತ್ಯ, ಜಾಗತೀಕರಣದಲ್ಲಿ ಪ್ರಸರಣ ಆಗುವಂತೆ ಮಾಡುವಲ್ಲಿ ವಿಫಲವಾಗಿವೆ ಎಂದನಿಸುತ್ತಿದೆ. ಇವೆಲ್ಲವೂ ಬಾವಿಯೊಳಗಿನ ಕಪ್ಪೆಯಂತೆ ಯೋಚಿಸಿದ್ದವೇನೋ ಎನಿಸುತ್ತದೆ.

ಪುರುಷೋತ್ತಮ ಬಿಳಿಮಲೆ: ಖಂಡಿತ ಹೌದು. ಇದು ನೂರಕ್ಕೆ ನೂರರಷ್ಟು ಸತ್ಯ. ಬರಗೂರು ರಾಮಚಂದ್ರಪ್ಪ ಅವರು ಮೊನ್ನೆಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ದೊಡ್ಡ ಭಾಷಣ ಮಾಡಿದರು. ಆದರೆ ಹೊರ ಜಗತ್ತಿಗೆ ಕನ್ನಡ ದಾಟುವ ಬಗ್ಗೆ ಹೇಳಲಿಲ್ಲ. ಕನ್ನಡವನ್ನು ಕರ್ನಾಟಕದ ಒಳಗೆ ಕಟ್ಟುವುದು ಬಹಳ ಮುಖ್ಯವಾದ ಕೆಲಸ ಖಂಡಿತ ಹೌದು. ಹಾಗೆಯೇ ಅದರ ಹೊರ ಜಗತ್ತಿನ ವಿಸ್ತಾರದ ಸಾಧ್ಯತೆಗಳನ್ನೂ ಯೋಚಿಸಬೇಕು.

ಇತ್ತೀಚೆಗೆ ಫೇಸ್ ಬುಕ್ಕಿನಲ್ಲಿ ನಾನೊಂದು ಸ್ಟೇಟಸ್ ಹಾಕಿದ್ದೆ. ನೀಟ್ ಪರೀಕ್ಷೆ ಇದೆಯಲ್ಲ; ಮೆಡಿಕಲ್ನಲ್ಲಿ, ಬಿ.ಡಿ.ಎಸ್ನಲ್ಲಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳ ಮತ್ತು ಮರಾಠಿ ಸೇರ್ಪಡೆಗೊಂಡಿವೆ. ಆದರೆ ಅಲ್ಲಿ ಕನ್ನಡವೇ ಸೇರಿಲ್ಲ. ನಾವು ಆರು ಕೋಟಿ ಜನ ಇದ್ದೇವೆ ; ಅತಿಹೆಚ್ಚು ಮೆಡಿಕಲ್ ಕಾಲೇಜುಗಳಿವೆ, ಆದರೂ ಕನ್ನಡವಿಲ್ಲ. ಇದನ್ನು ಕನ್ನಡಿಗರು ಅವಮಾನ ಎಂದು ತೆಗೆದುಕೊಳ್ಳಬೇಕು.

ಇದು ಏಕೆ ಆಗಿಲ್ಲ ಎಂದರೆ ಎನ್.ಇ.ಟಿ. ಅಂಥ ಕಡೆ ಕೆಲಸ ಮಾಡುವವರಿಗೆ ಕನ್ನಡದ ಮಹತ್ವದ ಬಗ್ಗೆ ಗೊತ್ತೇ ಇಲ್ಲ. ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ; ಕನ್ನಡ ಎಂಬ ಭಾಷೆ ಇದೆ ಎಂಬುದೇ ಉತ್ತರದ ಬಹಳ ಜನಕ್ಕೆ ಗೊತ್ತಿಲ್ಲ. ಅವರ ಭಾವನೆಯಲ್ಲಿ ದಕ್ಷಿಣ ಎಂದರೆ ಮದರಾಸಿ ಎಂದಿದೆ.

ಕುಮಾರ ರೈತ: ಕನ್ನಡವನ್ನು ಕನ್ನಡದ ಮುಂದಿನ ತಲೆಮಾರುಗಳು ಬಹು ಪ್ರೀತಿಯಿಂದ ತೆಗೆದುಕೊಳ್ಳುವ, ಮುಂದಿನ ಹಂತಗಳಿಗೆ ದಾಟಿಸುವ ಕಾರ್ಯವನ್ನು ಸರ್ಕಾರಿ ಪೋಷಿತ ಸಂಸ್ಥೆಗಳೂ ಸೇರಿದಂತೆ ಉಳಿದ ಸಂಘ-ಸಂಸ್ಥೆ ವ್ಯಕ್ತಿಗಳು ಏನು ಮಾಡಬಹುದು

ಪುರುಷೋತ್ತಮ ಬಿಳಿಮಲೆ: ಕನ್ನಡದ ಎಲ್ಲ ಬಗೆಯ ಸಾಹಿತ್ಯ (ತಾಂತ್ರಿಕವೂ ಸೇರಿದಂತೆ) ವನ್ನೂ ಡಿಜಿಟೈಸ್ ಮಾಡಿ, ಅರ್ಥಪೂರ್ಣವಾಗಿ ಲಭ್ಯವಾಗುವಂತೆ ಮಾಡಬೇಕೆಂದರೆ ವ್ಯವಸ್ಥಿತವಾಗಿ ಕೆಲಸವಾಗಬೇಕು. ಸಂಸ್ಥೆ ಅಥವಾ ಸಂಸ್ಥೆಗಳು ಈ ಕೆಲಸ ಮಾಡಬೇಕು. ಏನೇನು ಡಿಜಿಟಲೈಸ್ಡ್ ಆಗಿದೆ, ಏನೇನು ಆಗಬೇಕು ಎಂಬ ಬಗ್ಗೆ ಚಿಂತನೆಯಾಗಬೇಕು, ಅಧ್ಯಯನವಾಗಬೇಕು.

ಅಂತರ್ಜಾಲದಲ್ಲಿ ಒಂದಷ್ಟು ಕನ್ನಡ ಸಾಹಿತ್ಯ ಲಭ್ಯವಿದೆ. ವಚನಗಳಿವೆ, ಆದರೆ ಸಮಗ್ರವಾಗಿ ಲಭ್ಯವಿಲ್ಲ. ಕನಕದಾಸರ ಕೃತಿಗಳಿವೆ. ಆದರೆ ಪುರಂದರ ದಾಸರದಿಲ್ಲ. ಎಲ್ಲ ರಚನೆಕಾರರ ಎಲ್ಲ ಕೃತಿಗಳು ಸಮಗ್ರವಾಗಿ ದೊರೆಯಬೇಕು. ಇದರಿಂದ ಮುಂದಿನ ತಲೆಮಾರುಗಳು ಕನ್ನಡ ಸಾಹಿತ್ಯವನ್ನು ಸುಲಭವಾಗಿ ಅಧ್ಯಯನ ಮಾಡುವುದು, ಅಭಿರುಚಿ ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ.

ಪ್ರಸ್ತುತ ಈ ಡಿಜಿಟಲೈಸ್ಡ್ ಕೆಲಸ ಸಮಗ್ರವಾಗಿ ಆಗದೇ ಇರುವುದಕ್ಕೆ ಕಾರಣ ಸಂಬಂಧಿಸಿದ ಸಂಸ್ಥೆಗಳ ಹೆಚ್ಚಿನ ಮುಖ್ಯಸ್ಥರು ಈ ನಿಟ್ಟಿನಲ್ಲಿ ಅಪ್ ಡೇಟ್ ಆಗದೇ ಇರುವುದು. ಇವರಲ್ಲಿ ಹೆಚ್ಚಿನವರಿಗೆ ಇಮೈಲ್ ಇದೆ. ಆದರೆ ಬಳಸುವುದಿಲ್ಲ. ಇವರುಗಳಿಗೆ ಇಮೈಲ್ ಮಾಡಿ ತಿಂಗಳುಗಳು ಕಳೆದರೂ ಪ್ರತಿಕ್ರಿಯೆ ಬಾರದಿದ್ದಾಗ ಪೋನ್ ಮಾಡಿ ಕೇಳಿದರೆ “ ಹೌದಾ, ಇಮೈಲ್ ಕಳಿಸಿದ್ದೀರಾ, ನೋಡುತ್ತೇನೆ’ ಎನ್ನುತ್ತಾರೆ. ಹೀಗಾದರೆ ಡಿಜಿಟಲೈಸ್ಡ್ ಕಥೆಯೇನು ???

ಮುಂದುವರಿಯುತ್ತದೆ …

ಈ ಬ್ಲಾಗಿನಲ್ಲಿರುವ ಯಾವುದೇ ಲೇಖನವನ್ನು ಇತರ ವೆಬ್ ಸೈಟ್ / ಪತ್ರಿಕೆಗಳಲ್ಲಿ ಪ್ರಕಟಿಸುವ ಮುನ್ನ ದಯವಿಟ್ಟು ನನ್ನ ಗಮನಕ್ಕೆ ತರಲು ವಿನಂತಿ

Exit mobile version