Site icon ಕುಮಾರರೈತ

ಉಣ್ಣುವ ಅನ್ನದಲ್ಲಿಯೂ ರಾಜಕೀಯವೇ ?

ಯಾವುದೇ ರಾಜಕೀಯ ಪಕ್ಷವಾಗಿರಲಿ ಆರ್ಥಿಕ ದುರ್ಬಲರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ಅವರು ಹಸಿವಿನಿಂದ ಮಲಗುವ ಪರಿಸ್ಥಿತಿಗಳನ್ನು ತಪ್ಪಿಸಬೇಕು. ಈ ದಿಶೆಯಲ್ಲಿ ಆಡಳಿತ ಪಕ್ಷ ತೆಗೆದುಕೊಳ್ಳುವ ಕಾರ್ಯಕ್ರಮಗಳನ್ನು ವಿರೋಧ ಪಕ್ಷಗಳು ಬೆಂಬಲಿಸಬೇಕು. ರಾಜಕಾರಣ ಮಾಡದೇ ಆಡಳಿತ ಪಕ್ಷವನ್ನೇ ಬೆಂಬಲಿಸುತ್ತಿರಬೇಕೇ ಎಂಬ ಪ್ರಶ್ನೆ ಉದ್ಬವಿಸಬಹುದು. ರಾಜಕಾರಣವೇ ಬೇರೆ ಜನಪರ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದೇ ಬೇರೆ. ರಾಜಕಾರಣ ಮಾಡುವುದಕ್ಕೆ ವಿಷಯಗಳಿರುತ್ತವೆ.

ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಉಣ್ಣುವ ಅನ್ನದ ವಿಷಯವಾಗಿಯೂ ರಾಜಕಾರಣ ನಡೆಯುತ್ತಿದೆ. ಈ ದಿಶೆಯಲ್ಲಿ ಅಧಿಕಾರಸ್ಥ ರಾಜಕಾರಣಿಗಳು, ವಿರೋಧ ಪಕ್ಷದ ರಾಜಕಾರಣಿಗಳು ನೀಡುತ್ತಿರುವ ಹೇಳಿಕೆಗಳನ್ನು ಜನತೆ ಗಮನಿಸುತ್ತಿದ್ದೇವೆ. ವಿರೋಧ ಪಕ್ಷವಾದ ಬಿಜೆಪಿ ವಿರೋಧಕ್ಕಾಗಿ ವಿರೋಧ ಎಂಬ ನೀತಿ ಅನುಸರಿಸುತ್ತಿರುವುದು ಎದ್ದು ಕಾಣುತ್ತಿದೆ.

ಭರವಸೆ

ರಾಜಕೀಯ ಪಕ್ಷವೊಂದು ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಈಡೇರಿಸುವುದಕ್ಕೆ ಒಂದಿಷ್ಟಾದರೂ ಸಮಯಾವಕಾಶ ಬೇಕಾಗುತ್ತದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎಂಬ ಭೇದಭಾವ ಇರುವುದಿಲ್ಲ. ಜುಲೈ 1ರಿಂದ ತನ್ನ ಐದು ಘೋಷಣೆಗಳಲ್ಲಿ ಒಂದಾದ “ಅನ್ನಭಾಗ್ಯ”ವನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿದೆ.

ಅಕ್ಕಿ ದಾಸ್ತಾನು
ಕೇಂದ್ರ ಸರ್ಕಾರ, ಭತ್ತವನ್ನು ಅಧಿಕವಾಗಿ ಬೆಳೆಯುವ ರಾಜ್ಯಗಳಿಂದ ಲೆವಿ ಮುಖಾಂತರ ಅಕ್ಕಿ ಸಂಗ್ರಹಣೆ ಮಾಡುತ್ತದೆ. ಇದು ಕೇಂದ್ರ ಸರ್ಕಾರದ ಅಧೀನದ “ಭಾರತೀಯ ಆಹಾರ ನಿಗಮ” ಗೋದಾಮುಗಳಲ್ಲಿ ಸಂಗ್ರಹಣೆಯಾಗಿರುತ್ತದೆ. ಇದು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಬೇಡಿಕೆ ಸಲ್ಲಿಸಿದ ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಸುತ್ತದೆ.

ಒಪ್ಪಿಗೆ ನೀಡಿದ್ದ ನಿಗಮ
ಅಕ್ಕಿ ಖರೀದಿಗಾಗಿ ರಾಜ್ಯ ಸರ್ಕಾರ ನೀಡುವುದು ಜನರ ತೆರಿಗೆ ಹಣವೇ ಹೊರತು ಪಾರ್ಟಿ ಫಂಡ್ ಅಲ್ಲ. ಆದ್ದರಿಂದ ಕಡಿಮೆ ದರದಲ್ಲಿಯೇ ಗುಣಮಟ್ಟದ ಅಕ್ಕಿ ಖರೀದಿಗೆ ಯೋಚಿಸುತ್ತದೆ. ಈ ದಿಶೆಯಲ್ಲಿ ಕರ್ನಾಟಕ ಸರ್ಕಾರ ಬರೆದ ಪತ್ರಕ್ಕೆ ಭಾರತೀಯ ಆಹಾರ ನಿಗಮದ ಅಧಿಕಾರಿಗಳು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಅಕ್ಕಿ ಕೊಡುವುದಾಗಿ ಹೇಳಿದ್ದಾರೆ.

“ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡುವ ಯೋಜನೆ ಪ್ರಕಟಿಸಿದ ನಂತರ ಭಾರತೀಯ ಆಹಾರ ನಿಗಮಕ್ಕೆ ನಮ್ಮ ಅಧಿಕಾರಿಗಳು ಪತ್ರ ಬರೆದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನಿಗಮದ ಅಧಿಕಾರಿಗಳು ನಿಗಮದ ಬಳಿ ಅಕ್ಕಿ ಇದೆ. ಪ್ರತಿ ಕ್ವಿಂಟಾಲಿಗೆ ರೂಪಾಯಿ 3400 ರಂತೆ ಎಲೆಕ್ಟ್ರಾನಿಕ್ ಹರಾಜು ಇಲ್ಲದೇ 2.8 ಲಕ್ಷ ಟನ್ ಅಕ್ಕಿ ನೀಡಲು ಅಭ್ಯಂತರವಿಲ್ಲ ಎಂದು ಹೇಳಿದ್ದರು” ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಿಗಮದೊಂದಿಗೆ ನಡೆಸಿದ ಪತ್ರ ವ್ಯವಹಾರ, ಅದು ನೀಡಿದ ಉತ್ತರಗಳ ಪ್ರಕ್ರಿಯೆಯ ಪತ್ರಗಳನ್ನೂ ಸಾರ್ವಜನಿಕವಾಗಿ ಪ್ರದರ್ಶಿಸಿಯೂ ಇದ್ದಾರೆ.

ಒಪ್ಪಿಗೆ ಕೊಟ್ಟ ಮೇಲೆ ಕೊಡಬೇಕಲ್ಲವೇ
ಈ ಬಳಿಕ ಜೂನ್ 13 ರಂದು ರಾಜ್ಯಗಳಿಗೆ ಭಾರತೀಯ ಆಹಾರ ನಿಗಮದ ಮೂಲಕ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈಗಾಗಲೇ ಅಕ್ಕಿ ಕೊಡುವುದಾಗಿ ಲಿಖಿತವಾಗಿ ತಿಳಿಸಿದ್ದರೆ ಕೊಡಿ ಎಂದೇನೂ ಹೇಳಿಲ್ಲ. ಭಾರತೀಯ ಆಹಾರ ನಿಗಮದ ಉನ್ನತ ಅಧಿಕಾರಿಗಳು ಆಶ್ವಾಸನೆ ಕೊಟ್ಟ ಬಳಿಕ ಅದನ್ನು ಈಡೇರಿಸುವುದು ಕೇಂದ್ರ ಸರ್ಕಾರದ ಹೊಣೆ. ಇದರಿಂದ ಜಾರಿಕೊಳ್ಳುವುದು ಎಂದರೆ ಏನರ್ಥ ? “ಅದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ”

ಈ ಸಮರ್ಥನೆ ಸರಿಯೇ ?
“ಅನ್ನಭಾಗ್ಯ” ಯೋಜನೆಗೆ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರದ ಕ್ರಮವನ್ನು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಸಮರ್ಥನೆ ಮಾಡಿಕೊಂಡಿದ್ದಾರೆ. “ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಹೆಚ್ಚಾಗದಂತೆ ನೋಡಿಕೊಳ್ಳಲು ಮತ್ತು ಜನರು ಅದನ್ನು ಕೈಗೆಟುಕುವ ದರದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ತನ್ನ ದಾಸ್ತಾನುಗಳಿಂದ ಈಶಾನ್ಯ ರಾಜ್ಯ ಹೊರತುಪಡಿಸಿ ಇತರ ರಾಜ್ಯಗಳಿಗೆ ಅಕ್ಕಿ ನೀಡಲು ನಿರಾಕರಿಸಿದೆ. ದೇಶದ ಜನರಿಗೆ ನೀಡುವುದಕ್ಕಾಗಿ ಅಕ್ಕಿ ದಾಸ್ತಾನು ಮಾಡಲು ಕಾರ್ಯದರ್ಶಿಗಳ ಸಮಿತಿ ನಿರ್ಧರಿಸಿದೆ. ರಾಜ್ಯಗಳು ಅಗತ್ಯ ಬಿದ್ದರೆ ಮಾರುಕಟ್ಟೆಯಿಂದ ಅಕ್ಕಿಯನ್ನು ಖರೀದಿ ಮಾಡಬಹುದು” ಎಂದು ಹೇಳಿದ್ದಾರೆ. ಪಿಯೂಷ್ ಗೋಯಲ್ ಅವರ ಈ ಸಮರ್ಥನೆ ಎಷ್ಟು ಸರಿ ? ಭಾರತೀಯ ಆಹಾರ ನಿಗಮ ಅಕ್ಕಿ ಕೊಡುತ್ತೇನೆಂದು ಹೇಳಿದ ಮೇಲೆ ಕೇಂದ್ರ ಸರ್ಕಾರವೂ ಅದಕ್ಕೆ ಬದ್ಧರಾಗುವ ಅಗತ್ಯವಿಲ್ಲವೇ ? “ಇದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ”

ಮುಂಗಾರು ವಿಫಲವಾಗಿದೆಯೇ ?
ಬಿಪೊರ್ ಜಾಯ್ ಚಂಡಮಾರುತ ಕಾರಣದಿಂದ ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸುವುದು ತಡವಾಗಿತ್ತು. ಎಲ್ ನಿನೋ ಕಾರಣದಿಂದ ವಾಡಿಕೆಯ ಮುಂಗಾರು ಮಳೆ ಆಗದಿರಬಹುದು ಎಂದು ಅಂದಾಜಿಸಲಾಗಿದೆ ಹೊರತು ದೇಶದಲ್ಲಿ ಮುಂಗಾರು ವಿಫಲವಾಗಿದೆ ಎಂದು ಯಾವ ತಜ್ಞರೂ ಹೇಳಿಲ್ಲ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮುಂಗಾರು, ಭಾರತದ ದಕ್ಷಿಣ, ಕೇಂದ್ರ ವಲಯ ಮತ್ತು ಪಶ್ವಿಮದ ವಿವಿಧ ರಾಜ್ಯಗಳನ್ನು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹೀಗಿರುವಾಗ ಕೇಂದ್ರ ಯಾವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಅಕ್ಕಿ ಪೂರೈಕೆ ಕ್ರಮವನ್ನು ನಿರ್ಬಂಧಿಸಿದೆ ?” “ಇದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ”

ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವೆ ?
ಭಾರತೀಯ ಆಹಾರ ನಿಗಮದಿಂದ ಒಂದು ಕೆಜಿಗೆ 34 ರೂಪಾಯಿಗಳಂತೆ ಕ್ವಿಂಟಾಲಿಗೆ 3400 ರೂಪಾಯಿ ಕೊಟ್ಟು ಖರೀದಿ ಮಾಡಬಹುದು. ರಾಜ್ಯದಲ್ಲಿಯೇ ನಿಗಮದ ದಾಸ್ತಾನು ಗೋದಾಮುಗಳು ಇರುವುದರಿಂದ ಸಾಗಣೆ ವೆಚ್ಚವೂ ದುಬಾರಿಯಾಗುವುದಿಲ್ಲ. ಕೇಂದ್ರದ ಸಚಿವ ಪಿಯೂಷ್ ಗೋಯಲ್ ಹೇಳಿದಂತೆ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಿದರೆ ಸಾಗಣಿಕೆ ವೆಚ್ಚವೂ ಸೇರಿ ಒಂದು ಕೆಜಿಗೆ ಸುಮಾರು 60 ರೂಪಾಯಿಗಳಾಗುತ್ತದೆ. ಹೆಚ್ಚುವರಿ 26 ರೂಪಾಯಿಯನ್ನು ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆಯೇ ? “ಇದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ”

ಅಕ್ಕಿ ನೀಡುವುದಿಲ್ಲ ಎಂದು ಹೇಳಲಾಗಿದೆಯೇ
ಅಕ್ಕಿ ನೀಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದೆಯೇ ? “ಅಕ್ಕಿ ದಾಸ್ತಾನು ಲಭ್ಯವಿರುವ ಬೇರೆಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಪ್ರಕ್ರಿಯೆ ನಡೆಯುತ್ತಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಪ್ರಕ್ರಿಯೆ ವಿಚಾರದಲ್ಲಿ ಪಾರದರ್ಶಕವಾಗಿಯೂ ಇದ್ದಾರೆ. ಆದರೂ ಬಿಜೆಪಿ ನಾಯಕರು ಮುಗಿಬಿದ್ದಿರುವುದೇಕೆ ? ಕೇಂದ್ರ ಅಕ್ಕಿ ಕೊಡಲು ನಿರಾಕರಿಸಿರುವುದರಿಂದ ಬೇರೆಡೆಯಿಂದ ಅಕ್ಕಿ ಖರೀದಿಸಿ ಹಂಚಲು ಹೆಚ್ಚಿನ ಸಮಯಾವಕಾಶ ಬೇಕು. ಇದು ನನ್ನಂಥ ಜನ ಸಾಮಾನ್ಯರಿಗೆ ಅರ್ಥವಾಗುತ್ತದೆ ಎಂದ ಮೇಲೆ ರಾಜ್ಯದ ಬಿಜೆಪಿಯ ನಾಯಕರಿಗೆ ಅರ್ಥವಾಗುವುದಿಲ್ಲವೇ ? “ಇದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ”

ಕೇಂದ್ರದಿಂದ ಐದು ಕೆಜಿ ಅಕ್ಕಿ ಪೂರೈಕೆ ಯಾರ ನಿರ್ಧಾರ ?
ಆಹಾರ ಭದ್ರತೆ ನೀತಿಯಡಿ ಕೇಂದ್ರ ಸರ್ಕಾರ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಳ ಸದಸ್ಯರಿಗೆ ತಲಾ ಐದು ಕೆಜಿ ಅಕ್ಕಿ ನೀಡುತ್ತಿದೆ. ಇದಕ್ಕೆ ಕಾರಣ 2013ರಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ. ಅಂದು ಸರ್ಕಾರದಲ್ಲಿದ್ದ ಕಾಂಗ್ರೆಸ್ ಮತ್ತಿನಿತರ ಮಿತ್ರ ಪಕ್ಷಗಳ ಒಕ್ಕೂರಲ ತೀರ್ಮಾನದಿಂದ ಪಡಿತರ ವ್ಯವಸ್ಥೆ ಮೂಲಕ ಉಚಿತವಾಗಿ ಅಕ್ಕಿ ವಿತರಿಸುವುದು ಶುರುವಾಯಿತು. ರಾಜ್ಯದ ಮಟ್ಟದಲ್ಲಿ ಇದನ್ನು ಮೊದಲು ಶುರು ಮಾಡಿದ್ದು ಕರ್ನಾಟಕದ ಕಾಂಗ್ರೆಸ್ ಸರ್ಕಾರ. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ”ಅನ್ನಭಾಗ್ಯ” ಯೋಜನೆ ಮೂಲಕ ಕೇಂದ್ರದಿಂದ ಬರುವ ಮೂರುವರೆ ಕೆಜಿ ಅಕ್ಕಿ (ಆಗ ಕೇಂದ್ರ ನೀಡುತ್ತಿದ್ದ ಅಕ್ಕಿ ಪ್ರಮಾಣ) ಜೊತೆಗೆ ತನ್ನ ಪಾಲಿನ ಮೂರುವರೆ ಕೆಜಿ ಅಕ್ಕಿ ಸೇರಿಸಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ ನೀಡುವ ನಿರ್ಧಾರ ತೆಗೆದುಕೊಂಡಿತು.

ಅಕ್ಕಿ ಪ್ರಮಾಣ ಕಡಿಮೆ ಮಾಡಿದ್ದ ಬಿಜೆಪಿ ಸರ್ಕಾರ

ರಾಜ್ಯದ ಕಾಂಗ್ರೆಸ್ ಸರ್ಕಾರದ ನಂತರ 2019ರಲ್ಲಿ ಬಂದ ಬಿಜೆಪಿ ಸರ್ಕಾರ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಬಿಪಿಎಲ್ ಕುಟುಂಬದ ಎಲ್ಲ ಸದಸ್ಯರಿಗೂ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಐದು ಕೆಜಿಗೆ ಇಳಿಸಿತು. 10 ಕೆಜಿಯಲ್ಲಿ ಒಂದು ಗ್ರಾಮ್ ಕಡಿಮೆಯಾದರೂ ಸಹಿಸುವುದಿಲ್ಲ ಎಂದು ಹೇಳುವ ಬಿಜೆಪಿ ನಾಯಕರಿಗೆ ಇವೆಲ್ಲ ನೆನಪಾಗುವುದಿಲ್ಲವೇ ? “ಇದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ”

ದ್ವಂದ್ವ ಏಕೆ
ಕಾಂಗ್ರೆಸ್ “ಪಂಚ ಗ್ಯಾರಂಟಿ” ಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದು ಹೇಳುವ ಬಿಜೆಪಿ ನಾಯಕರು ಕಾಂಗ್ರೆಸ್ ನೀಡಿದ ಭರವಸೆಯಂತೆ ಎಲ್ಲಿದಾದರೂ ಅಕ್ಕಿ ಖರೀದಿಸಿ ತಂದು ನೀಡಲಿ ಎನ್ನುವುದೇಕೆ ? ಇದರಿಂದ ಖರೀದಿ ವೆಚ್ಚ ಹೆಚ್ಚುತ್ತದೆ. ಅದು ರಾಜ್ಯ ಸರಕಾರದ ಮೇಲೆ ಬೀಳುವ ಹೆಚ್ಚುವರಿ ವೆಚ್ಚ ಎನ್ನುವುದು ಅರಿವಿಲ್ಲವೇ ? ಜನರ ತೆರಿಗೆ ಹಣಕ್ಕೆ ವಿರೋಧ ಪಕ್ಷ ಉತ್ತರದಾಯಿ ಅಲ್ಲವೇ ? ಈ ಥರದ ದ್ವಂದ್ವ ಏಕೆ ? ಅದು ಉಣ್ಣುವ ಅನ್ನದ ವಿಷಯದಲ್ಲಿ ಮಾಡುವ ರಾಜಕೀಯವಲ್ಲವೇ” ಪಕ್ಷ ಯಾವುದೇ ಆಗಿರಲಿ ಇರುವುದನ್ನು ಹೇಳುವುದು ನನ್ನಂಥ ನಾಗರಿಕರ ಕರ್ತವ್ಯವಲ್ಲವೇ.

Exit mobile version