Site icon ಕುಮಾರರೈತ

ಒತ್ತು ಶ್ಯಾವ್ಗೆಯೂ … ಅದರ ಸಿಗ್ನಲ್ಲು …

ನಾ ಸಣ್ಕಿದ್ದಾಗ ನೆಂಟ್ರು ಬಂದ್ರು ಅಂದ್ರೆ ಅಮ್ಮಮ್ಮ (ಅಮ್ಮನ ಅಮ್ಮ) ಬೋ ಖುಷಿಯಾಗೋರು. “ನೀವ್ ಬರ್ದೇ ಎಷ್ಟ್ ದಿನ ಆಯ್ತು…ಕೈಕಾಲ್ ತೊಳ್ಕಂಡು ಬನ್ನಿ, ಊಟಕ್ಕಿಕ್ಕೀನಿ ಬಿಸಿಬಿಸಿ ಉಣ್ಣೋರಂತೆ” ಅಂತ ಸಂಭ್ರಮಿಸೋರು. “ಇವ್ರು ನಾಲ್ಕ್ ತಿಂಗಳ ಹಿಂದೆ ಮಾರ್ನಮಿಗೆ ಬಂದಿದ್ರಲ್ವ” ಅಂತ ನಾನು ತಲೆ ಕೆರ್ಕತಿದ್ದೆ…ಬಂದವ್ರಿಗೆ ಉಪ್ಚಾರವೋ ಉಪ್ಚಾರ.. ಹೆಂಗುಸ್ರಂತೂ ಬೆಳಗಾನ ಮಾತನಾಡೋರು. ನಮ್ಮಜ್ಜ “ ಏನ್ ವಟಗುಟ್ತಾರಪ್ಪಾ” ಅನ್ನೋರಷ್ಟೇ, ಜೋರಾಗಿ ಕೆಮ್ಮೊ ದಮ್ಮು ಇರ್ಲಿಲ್ಲ. ನಮ್ ಅಮ್ಮಮ್ಮ ಅಂದ್ರೆ ಅವರೆಂಡ್ತಿ ಕಂಡ್ರೆ ಅವ್ರಿಗೆ ನಡ್ಕ. ಅಮ್ಮಮ್ಮ, ನಮ್ ಅಮ್ಮ, ಚಿಕ್ಕವ್ವದಿರೂ ಯಾವ್ ಕಿರಗೂರಿನ ಗಯ್ಯಾಳಿಗಳಿಗೂ ಕಮ್ಮಿ ಇಲ್ಲ. ಅವ್ರು ಬಾಯ್ಬುಟ್ರೆ ಅಷ್ಟೆ. ಅದಿರಲಿ ಬಂದ್ ನೆಂಟ್ರು ವಿಷ್ಯ ಮಾತಾಡಣ…
ಒಂದಿನ ವಡೆ (ತೂತ್ ವಡೆ ಅಲ್ಲ) ಪಾಯ್ಸ, ಇನ್ನೊಂದಿನ ಒಬ್ಬಿಟ್ಟು, ಇನ್ನೊಂದಿನ ದ್ವಾಸೆ – ಇಡ್ಲಿ ಹಿಂಗೆ ಬಗೆಬಗೆ ತಿಂಡಿ ಮಾಡೋರು. ಬಂದವ್ರು “ನಿಮ್ಮವ್ವ, ನಿಮ್ಮತ್ತೆ (ಅಮ್ಮಮ್ಮಮ್ಮ ಅಂದ್ರೆ ಅಜ್ಜಿಯ ಅವ್ವ. ಅವ್ರೂ ಇನ್ನೂ ಗಟ್ಟಿಮುಟ್ಟಿಯಾಗಿದ್ರು) ಯೂ ಹಿಂಗೆ ಕಣವ್ವ, ಬಂಧುಬಳ್ಗ ಅಂದ್ರೆ ಬೋ ಪ್ರೀತಿ – ಉಪ್ಚಾರ ಅಂತ ಹೊಗುಳುದ್ರೆ ಅಮ್ಮಮ್ಮನ ಮ್ವಾರೆ ಖುಷಿಯಿಂದ ಮೊರದಗಲ ಆಯ್ತಿತ್ತು.
ಒಂದಿನ, ಎರಡ್ದಿನ ಮೂರ್ದಿನ ಚೆಂದ, ನಾಕ್ನೇ ದಿನಕ್ಕೂ ನೆಂಟ್ರು ವಡ್ನಿಲ್ಲ ಅಂದ್ರೆ ಅಮ್ಮಮ್ಮನಿಗೆ ಇರ್ಸುಮುರ್ಸು ಸುರುವಾಗದು. ಹಸ, ಎಮ್ಮೆಕರ, ಹೊಲಗದ್ದೆ ಬುಟ್ಬುಟ್ಟು ಬಂದವ್ರ ಉಪ್ಚಾರ ಮಾಡ್ತಾ ಕುಂತ್ಕಣಕ್ಕಾಗಲ್ಲ. ಅಮ್ಮಮ್ಮ ಶ್ಯಾವ್ಗೆ ಮಾಡಾಕೆ ಸಿದ್ದ ಮಾಡ್ಕೊಳ್ಳೋರು. ಆ ಥರದ ಶ್ಯಾವ್ಗೇ ವತ್ತೊ ಮಿಚೀನ್ ಈಗ ಮ್ಯೂಸಿಯಂನಲ್ಲಿ ಮಾತ್ರ ಕಾಣ್ಬೋದು.
ನಾನೇ ದೊಡ್ ಮೊಮ್ಮಗ. ಅದ್ಕೆ ಅಮ್ಮಮ್ಮನಿಗೆ ಬಲ್ ಪಿರುತಿ. ಆ ಶ್ಯಾವ್ಗೆ ಮಿಚಿನ್ ಒತ್ತೋವಷ್ಟು ಶಕ್ತಿ ಇರ್ಲಿಲ್ಲ. ಒತ್ತೋಕ್ಕೆ ಮುಕ್ಕಿರಿತ್ತಿದ್ದೆ. ಶ್ಯಾವ್ಗೇ – ಕೋಳಿಸಾರು ಆಯ್ತಿದಂಗೆ ಥೇಟ್ ಕ್ವಾಟೆಯಂಥ ಹಟ್ಟಿ, ಅದ್ರ ದೊಡ್ಡ ಹೆಬ್ಬಾಗಿಲು ದಾಟಿ, ಓಣಿ ತುಂಬ ಅದ್ರ ಘಮಲು ಹಬ್ಬೋದು. ಅಡ್ಗೇ ಆದ್ ಕೂಡ್ಲೇ “ನಿಮ್ ತಾತನ್ ಕರೀಲಾ ಮೊಗ ಅನ್ನೋರು. ವರಾಂಡದ ಈಜೀ ಚೇರ್ನಲ್ಲಿ ಎರಡ್ಮೂರು ದಿನದ ಹಿಂದ್ಲ ಪೇಪರ್ ಓದ್ತಾ ಕುಂತಿರ್ತಿದ್ದ ತಾತ ” ಮೊದ್ಲು ಬಂದ್ ನೆಂಟ್ರುಗಾಕು, ಆಮೇಲ್ ಉಣ್ತೀನೀ” ಅನ್ನೋರಾ. ಅಮ್ಮಮ್ಮನ ಪಿತ್ತ ನೇತ್ತಿಗೇರೊದು. “ಆರೋದ ಮೇಲೆ ಉಂಡ್ರೆ ಹೆಂಗೆ, ಬಾ ಸುಮ್ಕೇ” ಅಂದ್ ಕೂಡಲೇ ಪಂಕ್ತಿ ಮೊದ್ಲ ಸಾಲಿನಲ್ಲಿ ತಾತ, ಅವ್ರ ಮಗ್ಲುಗೆ ಮೊಮ್ಮಗ ಅಂದ್ರೆ ನಾನು, ಅಮ್ಯಾಕೆ ನೆಂಟ್ರು.
ಮುದ್ದೆ ತಣ್ಗೆಗೆ ಬಂದು ಬೀಳೋಕು ಮೊದ್ಲು ” ಊರ್ ಕಡೆ ಮಳೆಬೆಳೆ, ದನಕರ್ಗಳ ಬಗ್ಗೆ ಇನ್ನೊಂದ್ಸಲ ವಿಚಾರಿಸೋರು.ಬಂದೋರು ಏನೋ ಒಂದ್ ಹೇಳೋರು. ಊಟ ಆದ್ಮೇಲೆ ಮೈಸೂರ್ ಚಿಗುರೆಲೆ, ಸ್ಟೂಡೆಂಟ್ ಅಡ್ಕೆ ಪೊಟ್ಲ, ಅದೆಂತೆದೋ ಫೇಮಸ್ ಬ್ರಾಂಡಿನ ಸುಣ್ಣ ಬಳ್ಕಂಡು ಬಾಯ್ನೆಲ್ಲ ಕೆಂಪುಗೆ ಮಾಡ್ಕಂಡು ಮಾತಾಡಕೆ ಸುರು ಹಚ್ಕಳೋರು, ವಳೀಕೆ ಹೆಂಗಸ್ರು ಊಟಕ್ಕೆ ಕುಂತ್ಕತ್ತಿದ್ರಲ್ಲ ಆಗ ಬಂದ್ ನೆಂಟ್ರಲ್ಲಿ ಹಿರೀ ಹೆಂಗ್ಸು “ಮಧ್ಯಾನ್ನದ ಬಸ್ಸಿಗೆ ವಂಡ್ತೀವಿ ಕಣಕ್ಕ, ಹಟ್ಟೀಲಿ ಶ್ಯಾನೆ ಕೆಲ್ಸ ಅವೆ” ಅನ್ನೋರಾ, ಅತ್ತ ಜಗ್ಲಿನ್ನಾಗೆ ತಾತನ ಜತೆ ಮಾತಾಡ್ತಿದ್ದ ಗಂಡ್ನೆಂಟ್ರು “ಅಣ್ಣಾ ಮಧ್ಯಾನ್ನ ವಡ್ತೀವಿ” ಅಂದ್ರೆ “ಇನ್ನೆರಡು ದಿನ ಇದ್ದೋಗಿ, ಏಬ್ ಅವಸ್ರ” ಅನ್ನೋ ಮಾರುತ್ರ ಬತ್ತಿತ್ತು. ಇದು ಬಾಯ್ ಉಪ್ಚಾರಕ್ಕೆ ಅಂತ್ಲೂ, ಒತ್ತು ಶ್ಯಾವ್ಗೇ ಮಾಡುದ್ರೆ ಬಂದ್ ನೆಂಟ್ರು ಹೊರಡಬೇಕು ಅನ್ನೋದಿಕ್ಕೆ ಸಿಗ್ನಲ್ಲು ಅಂತ್ಲೂ ಆಗ ಗೊತ್ತಿರಲಿಲ್ಲ


ಚಿತ್ರಕೃಪೆ: ಅಂತರ್ಜಾಲ

Exit mobile version