Site icon ಕುಮಾರರೈತ

ಕ್ರೌರ್ಯದ ನಾನಾಮುಖಗಳ ಅನಾವರಣ

“ಮನುಷ್ಯ ಮೂಲಭೂತವಾಗಿ ಇವಿಲ್ ಅಂದರೆ ದುಷ್ಟ” ಎಂಬ ಮಾತನ್ನು ಕನ್ನಡದ ಖ್ಯಾತ ಸಾಹಿತಿ, ಪತ್ರಕರ್ತ ಲಂಕೇಶ್ ಹೇಳುತ್ತಲೇ ಇದ್ದರು. ಅವರ ಕಥೆಗಳಲ್ಲಿಯೂ ಇಂಥ ಪಾತ್ರಗಳ ಚಿತ್ರಣವಿದೆ. ಮೂಲತಃ ಪೊಲೆಂಡ್ ದೇಶದ ಜಾರ್ಜಿ ಕೊಸಿನಸ್ಕಿ ಇದೇ ಪ್ರಜ್ಞೆಯನ್ನು ಆಧಾರವಾಗಿಟ್ಟುಕೊಂಡ ಇಂಗ್ಲಿಷಿನಲ್ಲಿ ದ ಪೈಟೆಂಡ್ ಬರ್ಡ್ಸ್ ಕಾದಂಬರಿ ಬರೆದಿದ್ದಾರೆ. ಇದನ್ನೇ ಆಧರಿಸಿ ಇದೇ ಹೆಸರಿನಲ್ಲಿ ವಾಲ್ಕವ್ ಮಾರೌಲ್ ಅವರು ಸಿನೆಮಾ ಮಾಡಿದ್ದಾರೆ.
ಕ್ರೌರ್ಯದ ಸ್ಥಾಯಿಗುಣ ಒಂದೆಯಾದರೂ ಅದರ ಹಲವು ಮುಖಗಳಿವೆ. ಧರ್ಮಧಾರಿತವಾದ ಕ್ರೌರ್ಯ, ಮೂಢನಂಬಿಕೆ ಆಧರಿಸಿದ ಕ್ರೌರ್ಯ, ಸಿರಿತನದ ಕ್ರೌರ್ಯ, ಅಸಹಾಯಕತೆಯಿಂದ ಉಂಟುವ ಕ್ರೌರ್ಯ, ಹಸಿವಿನಿಂದ ಹುಟ್ಟುವ ಕ್ರೌರ್ಯ, ಬಲದಿಂದ ಉಂಟುವ ಕ್ರೌರ್ಯ, ಕಾಮದ ಕ್ರೌರ್ಯ ಹೀಗೆ ಅನೇಕ ಕ್ರೌರ್ಯಗಳ ಬಗ್ಗೆ “ದ ಪೈಟೆಂಡ್ ಬರ್ಡ್” ಹೇಳುತ್ತಾ ಹೇಳುತ್ತಾ ಬದುಕಿನ ನರಕದ ದರ್ಶನ ಮಾಡಿಸುತ್ತದೆ.
ಯುದ್ಧವೆಂದರೆ ಅದು ಸಾವು –ನೋವುಗಳ ಸರಮಾಲೆ. ಇದು ಯುದ್ಧರಂಗದಲ್ಲಿಯಷ್ಟೇ ನಡೆಯುವುದಿಲ್ಲ. ಸಾಮಾನ್ಯ ಜನಜೀವನದ ನಡುವೆಯೂ ತನ್ನ ಕರಾಳ ನಾಲಿಗೆ ಚಾಚುತ್ತಲೇ ಇರುತ್ತದೆ. ಈಗಾಗಲೇ ಒಂದನೇ ಮಹಾಯುದ್ಧ, ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಅವುಗಳ ಸ್ವರೂಪದ ದರ್ಶನವಾಗಿದೆ. ಛಿದ್ರವಾಗದೇ ಇದ್ದ ರಷ್ಯಾದ ಮೂಲದ ಪೋಷಕರು ಜನಾಂಗೀಯ ಕ್ರೌರ್ಯದಿಂದ ಮಗ ಜೊಸ್ಕಾನನ್ನು ಪಾರು ಮಾಡಲು ಈಶಾನ್ಯ ಯುರೋಪಿಗೆ ಕಳಿಸುತ್ತಾರೆ. ಅಲ್ಲಿ ಈತನನ್ನು ನೋಡಿಕೊಳ್ಳುತ್ತಿದ್ದ ಅಜ್ಜಿ ಸತ್ತ ಕೂಡಲೇ ದಿಗ್ಬ್ರಾಂತಿ ಕವಿದಂತೆ ಆದ ಜೋಸ್ಕ ಕಂಗಲಾಗಿ ಪಯಣ ಆರಂಭಿಸುತ್ತಾನೆ.
ಈ ಪಯಣದ ಹಾದಿಯುದ್ದಕ್ಕೂ ಆತ ಅನೇಕ ಬಾರಿ ಸಾವಿನ ದವಡೆಯಿಂದ ಪಾರಾಗುತ್ತಾನೆ. ಭಯಾನಕ ದೈಹಿಕ ಹಿಂಸೆಗೆ ಒಳಗಾಗುತ್ತಾನೆ. ಹೆಣ್ಣು – ಗಂಡುಗಳ ಕಾಮದ ಲಾಲಸೆಗೆ ಬಳಕೆಯಾಗುತ್ತಾನೆ. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಓಡುತ್ತಾನೆ… ದಣಿವು ಆವರಿಸಿದರೂ ಓಟ ನಿಲ್ಲುವುದಿಲ್ಲ.
ಈತನ ಪಯಣದಲ್ಲಿ ಕ್ರೌರ್ಯತೆಯೇ ಜನ್ಮತಾಳಿ ಬಂದಂತಿರುವ ಅನೇಕ ಪಾತ್ರಗಳು ಬಂದು ಹೋಗುತ್ತವೆ. ಇವುಗಳ ಸಂಖ್ಯೆಗೆ ಹೋಲಿಸಿದರೆ ಒಳ್ಳೆಯತನದ ಪಾತ್ರಗಳು ಅತ್ಯಲ್ಪ. ಜೋಸ್ಕನ ಬದುಕಿನ ನರಕದ ಉದ್ದಕ್ಕೂ ಈತನನ್ನೇ ಮುಖ್ಯವಾಗಿರಿಸಿಕೊಂಡು ನಿರ್ದೇಶಕ – ಚಿತ್ರಕಥೆಗಾರ ವಾಲ್ಕವ್ ಮಾರೌಲ್ ನರಕಲೋಕದ ಪರಿಚಯವನ್ನು ಸಮರ್ಥವಾಗಿ ಮಾಡುತ್ತಾರೆ.
ಈ ಬದುಕಿನ ನರಕದಲ್ಲಿ ನರಳುತ್ತಲೇ ಸಾಗುವ ಬಾಲಕ ಜೋಸ್ಕಾ, ತಾನು ಬದುಕಲು ಹಿಂಸೆ ಅನಿವಾರ್ಯ ಎಂಬ ಸ್ಥಿತಿಗೆ ತಲುಪುತ್ತಾನೆ. ಜೀವಗಳನ್ನೇ ತೆಗೆದುಬಿಡುವ ಕಾರ್ಯವನ್ನೂ ಮಾಡಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ. ಈ ಮೂಲಕ ನಿರ್ದೇಶಕ “ಕಣ್ಣಿಗೆ ಕಣ್ಣು- ಹಲ್ಲಿಗೆ ಹಲ್ಲು” ಎಂಬ ತಾತ್ವಿಕತೆ ಪ್ರತಿಪಾದಿಸುತ್ತಿದ್ದಾರೆ ಎಂಬ ಭಾವನೆ ನೋಡುಗರಲ್ಲಿ ಉಂಟಾಗುತ್ತದೆ.
ಇಲ್ಲಿನ ಪಾತ್ರಗಳು ಮೂಲಭೂತವಾಗಿ ಕೆಜೆಕ್ ಗಣರಾಜ್ಯ, ಸ್ಲೊವಾಕಿಯಾ ಮತ್ತು ಉಕ್ರೇನ್ ಪ್ರದೇಶಕ್ಕೆ ಸೇರಿವೆ. ನಿರ್ದೇಶಕ ವಾಲ್ಕವ್ ಮಾರೌಲ್ ಇಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಇಂಟರ್ ಸ್ಲಾವಿಕ್ ಭಾಷೆ ಬಳಸಿಕೊಂಡಿದ್ದಾರೆ.. ಇವರೇ ಸಮರ್ಥ ಚಿತ್ರಕಥೆ ರಚಿಸಿ, ಬಹು ಶಕ್ತಿಶಾಲಿ ಸಂಭಾಷಣೆ ಬರೆದಿರುವುದು ಗಮನಾರ್ಯ.
ಈ ಸಿನೆಮಾದಲ್ಲಿ ಯಾವುದೇ ಪಾತ್ರಗಳು ಎಲ್ಲಿಯೂ ಅನಗತ್ಯವಾಗಿ ಮಾತನಾಡುವುದಿಲ್ಲ. ಬಾಲಕ ಜೋಸ್ಕಾ ಕಣ್ಣುಗಳಲ್ಲೇ ಮಾತನಾಡುತ್ತಾನೆ. ಕ್ರೌರ್ಯದ ಜಗತ್ತಿಗೆ ಆತನದು ಮೌನ ಪ್ರತಿಭಟನೆ, ಪ್ರತಿಯೊಂದು ಪಾತ್ರಕ್ಕೂ ಹೊಂದಾಣಿಕೆಯಾಗುವ, ಪರಕಾಯ ಪ್ರವೇಶ ಮಾಡಬಲ್ಲ ಕಲಾವಿದರು ಅಭಿನಯಿಸಿದ್ದಾರೆ.


ಆಕಸ್ಮಿಕವಾಗಿ ಗುಬ್ಬಚ್ಚಿ ಮುಟ್ಟಿದ್ದರೆ ಉಳಿದ ಗುಬ್ಬಚ್ಚಿಗಳು ಅದನ್ನು ಮತ್ತೆ ತಮ್ಮ ಗುಂಪಿಗೆ ಸೇರಿಸಿಕೊಳ್ಳುವುದಿಲ್ಲ. ಪಕ್ಷಿಗಳನ್ನು ಹಿಡಿಯುವುದೇ ಕಸುಬಾಗಿರುವ ವೃದ್ಧನೊಬ್ಬ ಪಕ್ಷಿಯೊಂದರ ರೆಕ್ಕೆಗೆ ಬಣ್ಣ ಬಳಿದು ಹಾರಿ ಬಿಡುತ್ತಾನೆ. ಅದು ಹಾರುತ್ತಿರುವಾಗಲೇ ಅದರ ಉಳಿದ ಸಂಗಾತಿ ಪಕ್ಷಿಗಳು ಕುಕ್ಕಿಕುಕ್ಕಿ ಸಾಯಿಸುವುದನ್ನು ನೋಡಿ ಆನಂದಿಸುತ್ತಾನೆ. ಇಂಥ ಕ್ರೌರ್ಯ ಹೇಗೆ ಬಂತು ಎಂದು ಯೋಚಿಸುವಂತಾಗುತ್ತದೆ.
ಈ ಜಗತ್ತಿನಲ್ಲಿ ಹಿಂಸೆಯೇ ಮೂಲಭೂತ ಗುಣವಾಗಿದೆ ಎನ್ನುವ ನಿರ್ದೇಶಕ, ಇದನ್ನು ಸಾಕೇತಿಕವಾಗಿಸಲು 2019ರಲ್ಲಿ ಬಿಡುಗಡೆಯಾದ ದ ಪೈಂಟೆಡ್ ಬರ್ಡ್ ಅನ್ನು ಕಪ್ಪು – ಬಿಳುಪಿನಲ್ಲಿ ಚಿತ್ರೀಕರಿಸಿದ್ದಾರೆ. ಇದು ಬಹು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಛಾಯಾಗ್ರಾಹಕ ವ್ಲಾದಿಮೀರ್ ಸ್ಮೂಟಿ ಅವರ ಕಾರ್ಯ ಅತ್ಯಂತ ನಿಖರವಾಗಿದೆ. ಪ್ರತಿಯೊಂದು ಫ್ರೇಮು ಪರಿಣಾಮಕಾರಿ. ಆಯಾ ಪರಿಸರದಲ್ಲಿ ಕೇಳುವ ಸದ್ದುಗಳೇ ಹಿನ್ನೆಲೆಯಲ್ಲಿ ಕೇಳುತ್ತವೆ. ಸಂಕಲನವೂ ಚುರುಕು.
ಪೈಟೆಂಡ್ ಬರ್ಡ್ ಸಿನೆಮಾದ ಕೇಂದ್ರಪ್ರಜ್ಞೆ ಕ್ರೌರ್ಯ. ಕೇಂದ್ರ ಪಾತ್ರ ಬಾಲಕ ಜೋಸ್ಕ. ಈತನ ಮೂಲಕ ಪರಿಪರಿಯಾಗಿ ಜಗತ್ತಿನಲ್ಲಿ ಇರುವ ಹಿಂಸೆಗಳನ್ನು ನಿರ್ದೇಶಕ ನಮ್ಮ ಮುಂದೆ ತೆರೆದಿರಿಸುತ್ತಾ ಹೋಗುತ್ತಾನೆ. ವಿದೇಶಗಳಲ್ಲಿ ಪ್ರದರ್ಶನ ಕಂಡ ವೇಳೆ ವೇಳೆ ಸಾಕಷ್ಟು ಪ್ರೇಕ್ಷಕರು ವಿಚಲಿತರಾಗಿ ಪೂರ್ಣ ಸಿನೆಮಾ ನೋಡದೇ ಎದ್ದು ಹೋಗಿದ್ದಾರೆ. ಬೆಂಗಳೂರು ಚಿತ್ರೋತ್ಸವದಲ್ಲಿ ನೋಡಿದ ಈ ಸಿನೆಮಾ ನನ್ನಲ್ಲಿ ಭಾರಿ ತಲ್ಲಣ ಉಂಟು ಮಾಡಿತು. ಸಿನೆಮಾ ನಂತರ ಒರಾಯನ್ ಕಾರಂಜಿ ಕೊಳದ ಬಳಿ ಹೋಗಿ ಎರಡು ತಾಸು ಮೌನವಾಗಿ ಕುಳಿತಿದ್ದೆ,

Exit mobile version