ಭಾರತದಲ್ಲಿ ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಮತ್ತು ಅರಣ್ಯ ಅಪರಾಧ ಪತ್ತೆಗಾಗಿ ಅತ್ಯುತ್ತಮ ರಾಜ್ಯ ಯಾವುದು ಎಂದು  ನಿರ್ಧರಿಸುವುದು ಸಂಕೀರ್ಣ ವಿಷಯ. ಏಕೆಂದರೆ ಇದು ಅರಣ್ಯ ವ್ಯಾಪ್ತಿ, ಜೀವವೈವಿಧ್ಯ, ಸಂರಕ್ಷಿತ ಪ್ರದೇಶಗಳು, ಜಾರಿ ಕಾರ್ಯವಿಧಾನಗಳು, ಸಮುದಾಯದ ಒಳಗೊಳ್ಳುವಿಕೆ ಮತ್ತು ತಾಂತ್ರಿಕ ಅಳವಡಿಕೆಯಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ.

ಇಷ್ಟಿದ್ದರೂ ಲಭ್ಯವಿರುವ ದತ್ತಾಂಶ ಮತ್ತು ಇತ್ತೀಚಿನ ಮೌಲ್ಯಮಾಪನಗಳ ಆಧಾರದ ಮೇಲೆ ಯಾವ ರಾಜ್ಯ ಮಾದರಿಯಾಗಿದೆ ಎಂಬುದನ್ನು ನಿರ್ಧರಿಸಬಹುದು. ಇಡೀ ದೇಶದಲ್ಲಿಯೇ  ಕೇರಳವು ಈ ವಿಷಯದಲ್ಲಿ ಗಮನಾರ್ಹ ಸ್ಥಾನದಲ್ಲಿದೆ. ವಿಶೇಷವಾಗಿ 2020–2025ರ ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಂರಕ್ಷಿತ ಪ್ರದೇಶಗಳ ನಿರ್ವಹಣಾ ಪರಿಣಾಮಕಾರಿತ್ವ ಮೌಲ್ಯಮಾಪನ (MEE) ನಲ್ಲಿನ ಕೇರಳ ರಾಜ್ಯದ  ಕಾರ್ಯಕ್ಷಮತೆ,  ಅದರ ದೃಢವಾದ ನೀತಿಗಳು ಮತ್ತು ತೆಗೆದುಕೊಂಡಿರುವ ಕ್ರಮಗಳು ಗಮನಾರ್ಹ. ಅರಣ್ಯ, ವನ್ಯಜೀವನ ಸಂರಕ್ಷಣೆಯಲ್ಲಿ ಕೇರಳವನ್ನು ಅತ್ಯುತ್ತಮ ಎಂದು ಪರಿಗಣಿಸಲು ಕಾರಣಗಳಿವೆ.

1. ನಿರ್ವಹಣಾ ಪರಿಣಾಮಕಾರಿತ್ವ ಮೌಲ್ಯಮಾಪನದಲ್ಲಿ (MEE) ಸಾಧನೆ

ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಂರಕ್ಷಿತ ಪ್ರದೇಶಗಳಿಗೆ ಸಂಬಂಧಿಸಿದಂತೆ MEE 2020–2025 ರಲ್ಲಿ ಕೇರಳವು ಭಾರತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯವೆಂದು ಶ್ರೇಣೀಕರಿಸಲ್ಪಟ್ಟಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಡೆಸಿದ ಈ ಮೌಲ್ಯಮಾಪನವು, ಯೋಜನೆ, ಜಾರಿ, ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಜೀವವೈವಿಧ್ಯ ಸಂರಕ್ಷಣೆ ಸೇರಿದಂತೆ ಸಂರಕ್ಷಿತ ಪ್ರದೇಶಗಳಲ್ಲಿ ನಿರ್ವಹಣೆಯ ಪರಿಣಾಮಕಾರಿತ್ವ ಹೇಗಿದೆ ಎಂದು ನಿರ್ಣಯಿಸುತ್ತದೆ.

2. ಗಮನಾರ್ಹ ಅರಣ್ಯ ವ್ಯಾಪ್ತಿ ಮತ್ತು ಜೀವವೈವಿಧ್ಯ

ಕೇರಳವು ಸರಿಸುಮಾರು 21,144 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಹೊಂದಿದೆ, ಇದು ಅದರ ಭೌಗೋಳಿಕ ಪ್ರದೇಶದ ಸುಮಾರು ಶೇಕಡ 54.4% ರಷ್ಟಿದೆ (ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2023 ರ ಪ್ರಕಾರ). ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ  ದೊಡ್ಡದಲ್ಲದಿದ್ದರೂ, ರಾಜ್ಯದ ದಟ್ಟವಾದ ಅರಣ್ಯ ಪರಿಸರ ವ್ಯವಸ್ಥೆಗಳು, ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ, ಜೀವವೈವಿಧ್ಯದ ತಾಣಗಳು,  ನೀಲಗಿರಿ ತಹರ್, ಸಿಂಹ ಬಾಲದ ಮಕಾಕ್ ಮತ್ತು ಏಷ್ಯನ್ ಆನೆಗಳಂತಹ ವನ್ಯಪ್ರಾಣಿಗಳಿವೆ.

ಕೇರಳದಲ್ಲಿ 6 ರಾಷ್ಟ್ರೀಯ ಉದ್ಯಾನವನಗಳು, 17 ವನ್ಯಜೀವಿ ಅಭಯಾರಣ್ಯಗಳು ಮತ್ತು ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಮತ್ತು ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವಾರು ಸಂರಕ್ಷಣಾ ಮೀಸಲು ಪ್ರದೇಶಗಳಿವೆ.  ಇವುಗಳು ಅಲ್ಲಿನ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರಂತರ  ಸಂರಕ್ಷಣಾ ಪ್ರಯತ್ನಗಳಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಈ ಸಂರಕ್ಷಿತ ಪ್ರದೇಶಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತದೆ.  ಬೇಟೆಯಾಡುವಿಕೆ ವಿರೋಧಿ ಕ್ರಮಗಳು ಮತ್ತು ಆವಾಸಸ್ಥಾನ ಪುನಃಸ್ಥಾಪನೆ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ.

3. ಪರಿಣಾಮಕಾರಿ ವನ್ಯಜೀವಿ ಅಪರಾಧ ಪತ್ತೆ ಮತ್ತು ಜಾರಿ

ಕೇರಳವು ವನ್ಯಜೀವಿ ಅಪರಾಧ ಪ್ರಕರಣಗಳ ತಡೆಗಟ್ಟುವಿಕೆ ಮತ್ತು ಪತ್ತೆ ಹಚ್ಚುವಿಕೆ ಪ್ರಕರಣಗಳಲ್ಲಿ ಹೆಚ್ಚಳವನ್ನು ಕಂಡಿದೆ (ಎನ್ಸಿಆರ್ಬಿ ದತ್ತಾಂಶದ ಪ್ರಕಾರ 2018 ರಿಂದ 2020 ರವರೆಗೆ 100% ಹೆಚ್ಚಳ), ಇದು ಮುಖ್ಯವಾಗಿ ಅರಣ್ಯ ಅಪರಾಧಗಳ ಹೆಚ್ಚಳಕ್ಕಿಂತ ಬಲವಾದ ಪತ್ತೆ ಮತ್ತು ವರದಿ ಮಾಡುವ ಕಾರ್ಯವಿಧಾನಗಳನ್ನು ಬಿಂಬಿಸುತ್ತದೆ. ಇದರ ಜೊತೆಗೆ ಕೇರಳ ರಾಜ್ಯ ಸರ್ಕಾರವು ಅರಣ್ಯ ಅಧಿಕಾರಿಗಳಿಗೆ ತರಬೇತಿ ನೀಡುವಲ್ಲಿ ಮತ್ತು ಕಾಡುಗಳನ್ನು ಮೇಲ್ವಿಚಾರಣೆ ಮಾಡುವಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದೆ.  ಬೇಟೆಯಾಡುವಿಕೆ ಮತ್ತು ಅತಿಕ್ರಮಣದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು ಜಿಐಎಸ್ ಮತ್ತು ಡ್ರೋನ್ಗಳಂತಹ ತಂತ್ರಜ್ಞಾನಗಳನ್ನು ಬಳಸಲು ಹಣಕಾಸು ಸಂಪನ್ಮೂಲಗಳನ್ನು ಒದಗಿಸಿದೆ.

ಕೇರಳ ಅರಣ್ಯ ಇಲಾಖೆಯು ಕಣ್ಗಾವಲು ಮತ್ತು ವರದಿ ಮಾಡುವಿಕೆಯನ್ನು ಹೆಚ್ಚಿಸಲು, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಅರಣ್ಯ ಅಪರಾಧಗಳನ್ನು ಕಡಿಮೆ ಮಾಡಲು ಸ್ಥಳೀಯ ಸಮುದಾಯಗಳು ಮತ್ತು ಎನ್ಜಿಒಗಳ ಸಹಭಾಗಿತ್ವ ಹೊಂದಿರುವುದು ಸಹ ಗಮನಾರ್ಹ ಸಂಗತಿ.

4. ಸ್ಥಳೀಯ ಸಮುದಾಯಗಳನ್ನು ತೊಡಗಿಸಿಕೊಳ್ಳುವಿಕೆ ಮತ್ತು ನೇಮಕಾತಿ

ನಾನು ಪೆರಿಯಾರ್ ಹುಲಿ ಕಾಡಿನಲ್ಲಿ ಕೇರಳ ಅರಣ್ಯ ಇಲಾಖೆ ಆಯೋಜಿಸುವ ದೀರ್ಘ ಚಾರಣ (ಟ್ರೆಕ್) ನಲ್ಲಿ ಭಾಗವಹಿಸಿದ್ದೇನೆ. ದಟ್ಟ ಕಾಡಿನ ನಡುವೆ ಬೆಳಗ್ಗೆ 8ರ ಸುಮಾರಿಗೆ ಕಾಲ್ನಡಿಗೆ ಆರಂಭವಾದರೆ ಸಂಜೆ 4 ರಿಂದ 5 ಗಂಟೆಗೆ ಮುಕ್ತಾಯವಾಗುತ್ತದೆ. ಅಡಿಗಡಿಗೂ ವನ್ಯಪ್ರಾಣಿಗಳು ಎದುರಾಗುತ್ತವೆ. ವಿಶೇಷವಾಗಿ ಗುಂಪುಗುಂಪಾಗಿರುವ ಕಾಡಾನೆಗಳು, ಒಂಟಿ ಸಲಗಗಳು, ಕಾಡುಹಂದಿಗಳು, ಒಂಟಿ ಗಂಡು ಕಾಡಂದಿ, ಅಪರೂಪಕ್ಕೆ ಹುಲಿ ಕಾಣುತ್ತವೆ. ಇವುಗಳ ಇರುವನ್ನು ಮೊದಲಿಗೆ ಪತ್ತೆಹಚ್ಚಿ ಅವುಗಳು ಕಾಣುವ ಜಾಡಿನೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವುದು ಅಲ್ಲಿನ ಸ್ಥಳೀಯ ಅರಣ್ಯ ಬುಡಕಟ್ಟಿನ ಯುವಕರು. ಇವರ ಕಾಡಿನ ಜ್ಞಾನ ನಿಬ್ಬೆರಗುಗೊಳಿಸುತ್ತದೆ. ಚಾರಣಿಗರಿಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.

ಕರ್ನಾಟಕ ಅರಣ್ಯ ಇಲಾಖೆಯು ವಾಚರ್ಸ್ ಗಳನ್ನು ಹೊರ ಗುತ್ತಿಗೆ ಮುಖಾಂತರ ದಿನಗೂಲಿ ನೌಕರರನ್ನಾಗಿ ನೇಮಿಸಿಕೊಳ್ಳುತ್ತದೆ.  ವಿಶೇಷ ಎಂದರೆ ಕೇರಳ  ಅರಣ್ಯ ಇಲಾಖೆಯು ಸ್ಥಳೀಯ ಅರಣ್ಯ ಬುಡಕಟ್ಟು ಯುವಜನತೆಯನ್ನು  ವಾಚರ್ಸ್ ನೌಕರಿಗಳಿಗೆ ಖಾಯಂ ಸಿಬ್ಬಂದಿಯಾಗಿ ನೇಮಿಸಿಕೊಂಡಿದೆ. ಇವರಲ್ಲಿ ಹಲವರು ಅರಣ್ಯ ಇಲಾಖೆಯ ವಾಚರ್ಸ್, ಗಾರ್ಡ್ ಮತ್ತು ಆಫೀಸರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಪರಿಪಾಟವಿಲ್ಲ.

5. ರಾಷ್ಟ್ರೀಯ ಅರಣ್ಯ ನೀತಿ

1988 ರ ರಾಷ್ಟ್ರೀಯ ಅರಣ್ಯ ನೀತಿಯಡಿಯಲ್ಲಿ ಪರಿಚಯಿಸಲಾದ ಜಂಟಿ ಅರಣ್ಯ ನಿರ್ವಹಣೆ (JFM) ಮಾದರಿಯೊಂದಿಗೆ ಹೊಂದಿಕೆಯಾಗುವ ಕೇರಳದ ಅರಣ್ಯ ನಿರ್ವಹಣೆಯು ಸಮುದಾಯದ ಭಾಗವಹಿಸುವಿಕೆಯನ್ನು ಒತ್ತಿಹೇಳುತ್ತದೆ. ಕಾಡಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ  ಬುಡಕಟ್ಟು ಸಮುದಾಯಗಳನ್ನು ಸಂರಕ್ಷಣಾ ಪ್ರಯತ್ನಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರ ಪರಿಣಾಮವೆಂದರೆ ಬುಡಕಟ್ಟು ಜನತೆಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಇರುವ ಜ್ಞಾನದಿಂದ  ಮಾನವ-ವನ್ಯಜೀವಿ ಸಂಘರ್ಷ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿವೆ.

ಪೆರಿಯಾರ್ ಮತ್ತು ವಯನಾಡಿನಲ್ಲಿರುವಂತಹ ಪರಿಸರ-ಪ್ರವಾಸೋದ್ಯಮ ಉತ್ತೇಜನಾ ಕ್ರಮಗಳು ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ.  ರಕ್ಷಣಾ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಸ್ಥಳೀಯರ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುತ್ತಿದೆ.

6. ತಂತ್ರಜ್ಞಾನಗಳ ಸಮರ್ಥ ಬಳಕೆ

ಕೇರಳ ಅರಣ್ಯ ಇಲಾಖೆಯು ಅರಣ್ಯ ಆರೋಗ್ಯ, ವನ್ಯಜೀವಿ ಆವಾಸಸ್ಥಾನಗಳು ಮತ್ತು ಅತಿಕ್ರಮಣಗಳನ್ನು ನಕ್ಷೆ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಭೌಗೋಳಿಕ ಮಾಹಿತಿ ವ್ಯವಸ್ಥೆಗಳು (GIS) ನಂತಹ ಸುಧಾರಿತ ಸಾಧನಗಳನ್ನು ಬಳಸುತ್ತಿದೆ.  ಉಪಗ್ರಹ ದತ್ತಾಂಶ ಮತ್ತು ಡ್ರೋನ್ಗಳು ಕಾಡಿನ ಬೆಂಕಿ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತಿವೆ.

Similar Posts

Leave a Reply

Your email address will not be published. Required fields are marked *