‘ಹರಿಹರಪುರ ಸಮೀಪ ಅನಂತಯ್ಯ ಅವರ ತೋಟ ಇದೆ. ಹೋಗೋಣ’ ಎಂದು ಪದೇಪದೇ ಗೆಳೆಯ ರಾಮಪ್ಪ ಹೇಳುತ್ತಲೇ ಇದ್ದರು. ಅದಕ್ಕೆ ಮುಹೂರ್ತ ಕೂಡಿಬಂತು. ಅಲ್ಲಿನ ಮುಖ್ಯ ಬೆಳೆ ಅಡಿಕೆ. ಉಪ ಬೆಳೆ ಕಾಫಿ. ದೇಶ-ವಿದೇಶಗಳ ಹಣ್ಣಿನ ಗಿಡ-ಮರಗಳೂ ಇಲ್ಲಿವೆ. ಅನಂತಯ್ಯ ಅವರು ಕೃಷಿ ವಿಶ್ವಕೋಶ ಎಂದರೆ ಬಹುಶಃ ಉತ್ಪ್ರೇಕ್ಷೆ ಅಲ್ಲ. ಹೋಗಿದ್ದು ಬೆಳಗ್ಗೆ. ಮರಳುವಾಗ ಮಧ್ಯಾಹ್ನ 3ರ ಸಮೀಪ. ಪುರುಸೊತ್ತು ಇಲ್ಲದೆ ಕೃಷಿ ವಿಚಾರ ಚರ್ಚಿಸುತ್ತಿದ್ದಾಗ ಹಸಿವು ಮರೆತಿತ್ತು. ಬೀಳ್ಕೊಡುವಾಗ ಹೊಟ್ಟೆ ಚುರುಗುಟ್ಟುತ್ತಿತ್ತು. ‘ಊರಿನಲ್ಲಿ ಮುಖ್ಯರಸ್ತೆ ಬದಿ ಚಿಕ್ಕ ಹೋಟೆಲ್ ಇದೆ. ಇನ್ನೇನು ಮುಚ್ಚುವ ಹೊತ್ತು. ಅಲ್ಲಿ ಹೋಗಿ ಊಟ ಮಾಡಿ’ ಎಂದರು. ಜೀಪ್ ಇದ್ದ ಕಾರಣ ಕೆಲವೇ ನಿಮಿಷದಲ್ಲಿ ಅಲ್ಲಿ ಹಾಜರು.
ಜೊತೆಯಲ್ಲಿ ರಾಮಪ್ಪ, ಪಾಲರಾಜ್, ಗಂಗಾಧರ ಮತ್ತು ಚಾಲಕ ಬಸವರಾಜ್ ಇದ್ದರು. ಎದುರಾದವರು ‘ಊಟ ಇದೆ ಕುಳಿತುಕೊಳ್ಳಿ’ ಎಂದರು. ನಳ ತಿರುಗಿಸಿದರೆ ಧುಮ್ಮಿಕುತ್ತಿದ್ದ ತಣ್ಣನೆ ನೀರಿನಲ್ಲಿ ಕೈಕಾಲು-ಮುಖ ತೊಳೆದಾಗ ಹಾಯ್ ಎನಿಸಿತು. ಹಿಂದಿನ ದಿನವಷ್ಟೆ ಮಳೆ ಭರ್ಜರಿಯಾಗಿ ಸುರಿದಿತ್ತು. ಇನ್ನೂ ಮೋಡ ಕವಿದ ವಾತಾವರಣ. ತಂಗಾಳಿ ಬೀಸುತ್ತಿತ್ತು. ಗಂಗಾಧರ ಅವರು ಮುದ್ದೆ ಇದೆಯಾ ಎಂದರೆ ಪಾಲರಾಜ್ ಅವರದು ಚಪಾತಿ ಇದೆಯಾ ಎಂಬ ಪ್ರಶ್ನೆ. ‘ ಎರಡೂ ಇಲ್ಲ, ಅನ್ನ, ಮೀನು, ಚಿಕನ್ ಮತ್ತು ತರಕಾರಿ ಸಾರು ಇದೆ ‘ ಉತ್ತರ ಬಂತು.
ಕಾದು ಕುಳಿತ್ತಿದ್ದು ಹತ್ತು ನಿಮಿಷ. ಹೊತ್ತಾಯ್ತಲ್ರಿ ಎಂದ ರಾಮಪ್ಪ ಅವರಿಗೆ ‘ಅನ್ನ ಸಿದ್ಧವಾಗುತ್ತಿದೆ; ಇನ್ನೆರಡು ನಿಮಿಷ’ ಎಂದು ಮಾರುತ್ತರ. ಹೀಗೆ ಹೇಳಿದರ ಬೆನ್ನ ಹಿಂದೆಯೆ ಸ್ವಚ್ಛ ತಟ್ಟೆಗಳು ಎಲ್ಲರ ಮುಂದು ಬಂದವು. ಮೊಸರು ಬಜ್ಜಿ, ಉಪ್ಪಿನಕಾಯಿ, ಹಪ್ಪಳ ಬಡಿಸಿದರು. ನಂತರ ಹಬೆಯಾಡುತ್ತಿದ್ದ ಅನ್ನ, ಅದನ್ನು ನೋಡಿದ ಕೂಡಲೆ ರಾಮಪ್ಪ ‘ದಾವಣಗೆರೆ ಸೋನಾ ಮಸೂರಿ’ ಎಂದರು. ಉದುರುದುರಾಗಿದ್ದ ಅನ್ನ. ಮೊಸರಿನಂತೆ ಇದ್ದ ಮೀನು ಸಾರು, ಅನ್ನದ ಜೊತೆ ಕಲಸಿ ಬಾಯಿಗಿಡುತ್ತಿದಂತೆಯೇ ಅಹಾ ಎಂಬ ಉದ್ಗಾರ. ಅಷ್ಟು ರುಚಿ.
ಹೇಳಿದ್ದ ಮೀನು ಇನ್ನೂ ಬಂದಿರಲಿಲ್ಲ. ‘ಮೀನೇ ಕೊಡಲಿಲ್ಲವಲ್ರಿ’ ಎಂದು ಗಂಗಾಧರ ರಾಗ ಎಳೆದರು. ಈಗ ತಂದೆ ಎನ್ನುತ್ತಲೆ ಸರಬರಾಜುದಾರ , ಮೀನಿನ ತಟ್ಟೆಗಳನ್ನು ಎಲ್ಲರೆದುರು ಇಟ್ಟರು. ರವಾ ಫ್ರೈ ಆಗಿದ್ದ ಬಂಗ್ಡೆ ಮೀನು. ಎಷ್ಟು ಹದವಾಗಿ ಬೆಂದಿತ್ತು ಎಂದರೆ ಪದರ ಪದರವಾಗಿ ಕೈಗೆ ಸಿಕ್ಕುತ್ತಿತ್ತು. ಹೆಚ್ಚೇನೂ ಮುಳ್ಳುಗಳು ಇರಲಿಲ್ಲ. ತಿನ್ನತೊಡಗಿದರೆ ಸಮ ಪ್ರಮಾಣದಲ್ಲಿ ಮಸಾಲೆ ಬಿದ್ದಿದೆ ಎಂದು ನಾಲಿಗೆ ಹೇಳಿತು.
ಹೆಚ್ಚು ಅನ್ನ ತಿನ್ನದ ನಾನು ಎರಡನೇ ಸುತ್ತು ಅನ್ನ ತರಲು ಹೇಳಿದೆ. ಎಲ್ಲರ ತಟ್ಟೆಗೂ ಬಿಸಿ ಅನ್ನ. ಮೊದಲೆ ಹೇಳಿದ್ದ ಕಾರಣ ರವಾ ಫ್ರೈ ಆಗಿದ್ದ ಬಂಗ್ಡೆ ಮೀನು ಸಿದ್ಧ ಆಗಿತ್ತು. ತರಕಾರಿ ಸಾರು ತರಲೇ ಎಂದವರಿಗೆ ಎಲ್ಲರದು ‘ ಬೇಡ, ಮೀನು ಸಾರು ತಾ ‘ ಒಕ್ಕೂರಲ ಪ್ರತಿಕ್ರಿಯೆ. ಅನ್ನ ಬಡಿಸಲು ಮಿತಿ ಇರಲಿಲ್ಲ. ‘ಅನ್ ಲಿಮಿಡೆಟ್ ಪುಡ್’ ಅಂತಾರಲ್ಲ ಅದು. ಎಲ್ಲರದೂ ಭರ್ಜರಿ ತೇಗು.
ಎಂಥಾ ರುಚಿ ನೀರು !
ಹೋದ ಕಡೆ ತೊಂದರೆ ತೆಗೆದುಕೊಳ್ಳಲು ಇಚ್ಛಿಸದೆ ಬಾಟಲಿ ನೀರು ಕುಡಿಯುವ ಅಭ್ಯಾಸ ಇರಿಸಿಕೊಂಡಿರುವ ನಾನು ‘ ಮಿನರಲ್ ವಾಟರ್ ಬಾಟಲ್ ಕೊಡಿ’ ಎಂದೆ. ಸರಬರಾಜುದಾರ ‘ ಅದಿಲ್ಲ, ಬಾವಿ ನೀರು ಚೆನ್ನಾಗಿದೆ. ಕುಡಿಯಿರಿ’ ಎಂದರು. ನೀರು ಕುಡಿದಾಗ ಅದು ಅಮೃತವೇ ಇರಬೇಕು ಎನ್ನಿಸಿತು. ಅಷ್ಟು ರುಚಿ, ಸಿಹಿ ನೀರು. ಎಷ್ಟು ಕುಡಿದರೂ ಮತ್ತೆಮತ್ತೆ ಕುಡಿಯಬೇಕು ಎನ್ನಿಸುವಷ್ಟೂ ರುಚಿ. ಸಾಕಷ್ಟು ಕುಡಿದು ಜೀಪಿನಲ್ಲಿ ಇದ್ದ ಖಾಲಿ ಮಿನರಲ್ ಬಾಟಲಿಗಳನ್ನು ತಂದು ತುಂಬಿಸಿಕೊಂಡಾಯಿತು.
ಬಿಲ್ ಕೂಡ ಹೆಚ್ಚಿರಲಿಲ್ಲ. ಬಹಳ ರುಚಿ, ಶುಚಿಯಾಗಿ ಅಡುಗೆ ಮಾಡಿದ್ದವರಿಗೆ ಧನ್ಯವಾದ ಹೇಳಿದೆ. ‘ ನಾನು ಮತ್ತು ನಮ್ಮ ಮನೆಯವರೆ ಅಡಿಗೆ ಮಾಡಿದ್ದು. ಈ ಹೋಟೆಲ್ ಮಾಲೀಕ ನಾನೇ’ ಎಂದು ಸರಬರಾಜುದಾರ ಪರಿಚಯಿಸಿಕೊಂಡರು. ಇವರ ಹೆಸರು ಸುಧಾಕರ. ನಮ್ಮ ವಿವರಗಳನ್ನೂ ಕೇಳಿಕೊಂಡರು. ‘ನೀವು ಬರುವುದು ಇನೈದು ನಿಮಿಷ ತಡ ಆಗಿದ್ದರೂ ಹೋಟೆಲ್ ಬಾಗಿಲು ಹಾಕಿರುತ್ತಿದ್ದೆವು ಎಂದರು.
‘ಬೆಳಗ್ಗೆ ಇಡ್ಲಿ, ಚಿತ್ರಾನ್ನ, ಪುಳಿಯೋಗರೆ, ವಡೆ. ಮಧ್ಯಾಹ್ನ ಮತ್ತು ರಾತ್ರಿ ಸಸ್ಯಹಾರಿ, ಮಾಂಸಾಹಾರಿ ಊಟ ಇರುತ್ತದೆ. ಹೆಚ್ಚು ಜನರಿಗೆ ಮಾಡಿರುವುದಿಲ್ಲ. ಪ್ರವಾಸಿಗರ ಜೊತೆಗೆ ಸ್ಥಳೀಯ ಪೊಲೀಸ್, ಅರಣ್ಯ ತಪಾಸಣಾ ಠಾಣೆಗಳ ಬ್ರಹ್ಮಚಾರಿ ಸಿಬ್ಬಂದಿ ಕಾಯಂ ಗ್ರಾಹಕರು. 5ಕ್ಕೂ ಹೆಚ್ಚಿನ ಜನ ಬರುವ ಹಾಗಿದ್ರೆ ಮೊದಲೇ ತಿಳಿಸಿದ್ರೆ ಅನುಕೂಲ. ಚಪಾತಿ, ಮುದ್ದೆ ಬೇಕು ಎಂದರೂ ಮಾಡುತ್ತೇವೆ. ಆದರೆ ಮೊದಲೇ ಹೇಳಿರಬೇಕು’ ಎಂದರು.
ಸಂಜೆ ಕಾನೂರಿನಲ್ಲಿ ಕೃಷಿ ಸಭೆ. ನನ್ನ ಉಪನ್ಯಾಸವೂ ಇತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊರಟಾಗ ಸಂಜೆ 7. ‘ರಾತ್ರಿ ಊಟಕ್ಕೆ ಹರಿಹರಪುರಕ್ಕೆ ಹೋಗೋಣ’ ಎಂದರು ರಾಮಪ್ಪ. ಅಲ್ಲೇ ಹೋಗಿ ಊಟ ಮಾಡುವ ಮನಸಿದ್ದರೂ ಬೆಂಗಳೂರಿಗೆ ಬಸ್ ಹತ್ತಬೇಕಿತ್ತು. ಆದ್ದರಿಂದ ಜೀಪ್ ಕೊಪ್ಪದತ್ತ ಮುನ್ನುಗಿತು.