Site icon ಕುಮಾರರೈತ

ಗುಳಿಗ ದೈವ ಮೆಲ್ಲನೆ ನಗತೊಡಗಿತು

ದೇವನೊಬ್ಬ ನಾಮ ಹಲವು ಎನ್ನುವಂತೆ ಸೂರ್ಯ ಒಬ್ಬನೇ ಆದರೂ ಆತನ ರೂಪ ಹಲವೆಡೆ ಹಲವು ರೀತಿ. ಕೆಲವೆಡೆ ಗಾಢವರ್ಣ, ಕೆಲವೆಡೆ ತೆಳು, ಕೆಲವೆಡೆ ಬೃಹದಾಕಾರದಲ್ಲಿ ಗೋಚರ, ಇನ್ನೂ ಕೆಲವೆಡೆ ಕಿರುಗಾತ್ರದಲ್ಲಿ ಗೋಚರ. ಹೀಗಾಗಿ ಯಾವುದೇ ಊರಿಗೆ ಹೋದರೂ ಸಾಮಾನ್ಯವಾಗಿ ಸೂರ್ಯೋದಯ, ಸೂರ್ಯಾಸ್ತ ನೋಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

ಕಾಸರಗೋಡಿನ ಗುಡ್ಡಗಳಲ್ಲಿ ಅಲೆಯುತ್ತಿದ್ದೆ.  ಪಡುವಣ ಗುಡ್ಡಗಳ ಎಡೆಯಲ್ಲಿ ಸೂರ್ಯ ಕಂತುವುದರಲ್ಲಿದ್ದ… ಸೂರ್ಯಸ್ತದ ಸೊಬಗು ಕಣ್ತುಂಬಿಕೊಳ್ಳಲು ಗುಡ್ಡ ಏರಿದವನಿಗೆ ಅಬ್ಬರದ ಕೂಗು ಕೇಳಿತು. ಕ್ಷಣ ಮೈ ಅದುರಿತು.

ನಾಳೆ ನಿನ್ನನ್ನುಮತ್ತೆ ನೋಡುವುದಾಗಿ ಸೂರ್ಯನಿಗೆ ಹೇಳಿ ಕೂಗು ಕೇಳಿದ ದಿಕ್ಕಿನೆಡೆಗೆ ಬಿರುಸಿನ ಹೆಜ್ಜೆ ಹಾಕತೊಡಗಿದೆ. ಗುಡ್ಡದ ತಳದ ಮನೆಯೊಂದರ ಅಂಗಳದಲ್ಲಿ  ಕೋಲದ ಆಚರಣೆ ಕ್ರಿಯೆಗಳೆಲ್ಲವೂ ಆಗಷ್ಟೆ ಮುಕ್ತಾಯಗೊಳ್ಳುತ್ತಿದ್ದವು.

ಅಲ್ಲಿಗೆ ನಾನೋರ್ವ ಅಪರಿಚಿತ. ಆದ್ದರಿಂದ ಕೋಲಕ್ಕೆ  ನೆರದವರ ಕಂಗಳು ಕ್ಷಣಕಾಲ ನನ್ನತ್ತ ನೆಟ್ಟವು. ಯಾರು ಸಹ ನೀವ್ಯಾರು ಎಂದೇನೂ ಕೇಳಲಿಲ್ಲ. ಅವರವರು ಅವರದೇ ಲೋಕದಲ್ಲಿದ್ದರು. ಅಂತಿಮ ಘಟ್ಟದಲ್ಲಿದ್ದ ಕೋಲ ಆಚರಣೆಗಳನ್ನು ಕುತೂಹಲದಿಂದ ನೋಡತೊಡಗಿದೆ.

ಆಗ ನನ್ನೆಡೆ ನೋಡಿದ ಗುಳಿಗ ದೈವ ಮುಗುಳ್ನಕಿತು. ಎದುರು ಬಂದು ನಿಂತಿತು.

“ಇರೆಗ್ ತುಳು ಬರ್ಪುಂಡೇ” ಪ್ರಶ್ನೆ ಹಾಕಿತು

“ಎಂಕು ತುಳು ಅರ್ಥ ಆಪ್ಪುಂಡು, ಪಾತಿರ್ಯೆರೇ ಗೊತ್ತುಜ್ಜಿ”

ಎಂದುತ್ತರಿಸಿದವನ ಮಾತಿಗೆ ದೈವ ಮೆಲ್ಲನೆ ನಗತೊಡಗಿತು

Exit mobile version