Site icon ಕುಮಾರರೈತ

ಉಪಗ್ರಹ ಚಿತ್ರ ಬೇರೆಯೇ ಹೇಳುತ್ತಿದೆಯೇ ?

“ಚೈನಾ ಸೈನ್ಯ ಭಾರತದ ಗಡಿಯೊಳಗೆ ನುಸುಳಿ ಯಾವುದೇ ಪೋಸ್ಟ್ ವಶಪಡಿಸಿಕೊಂಡಿಲ್ಲ. ನಮ್ಮ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಭಾರತ ಮಾತೆಯನ್ನು ಕೆಣಕಲು ಬಂದವರಿಗೆ ತಕ್ಕ ಪಾಠ ಕಲಿಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಅವರ ಹೇಳಿಕೆ ನಂಬೋಣ ಮತ್ತು ಗೌರವಿಸೋಣ. ಆದರೆ ಪ್ರಜೆಗಳಾಗಿ ಇದರ ಬಗ್ಗೆ ನಮ್ಮ ಪ್ರಶ್ನೆಗಳೇನಿದ್ದರೂ ಕೇಳಬಹುದಲ್ಲವೇ ?
ಚೈನಾ ಸೈನ್ಯ ನಮ್ಮ ಗಡಿಯೊಳಗೆ ನುಗ್ಗಿಲ್ಲ ಎಂದು ಪ್ರಧಾನಿ ಅವರು ಹೇಳುವುದಾದರೆ ನಮ್ಮ ಸೈನಿಕರ ಸಾವು ಹೇಗಾಯ್ತು. ಇವರೇ ಚೈನಾದವರ ಗಡಿಯೊಳಗೆ ನುಗ್ಗಿದರೆ ? ವಾಸ್ತವಾಂಶಗಳು ಬೇರೆಯೇ ಹೇಳುತ್ತವೆ. ಭಾರತೀಯ ಸೈನಿಕರು ಎಂದೂ ತಾವಾಗಿ ನೆರೆಹೊರೆಯ ಗಡಿಗಳವರನ್ನು ಕೆಣಕುವ, ತಂಟೆಗೆ ಹೋಗುವ ಕಾರ್ಯ ಮಾಡಿಲ್ಲ. ಆದರೆ ತಮ್ಮ ತಂಟೆಗೆ ಬಂದವರಿಗೆ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಪ್ರತ್ಯುತ್ತರ ಕೊಡಲು ಮುಂದಾಗುತ್ತಾರೆ. ಗಾಲ್ವನ್ ಕಣಿವೆಯಲ್ಲಿ ಆಗಿರುವುದು ಇದೇ ಸಂಗತಿ.
ದೈನಂದಿನ ಪೆಟ್ರೋಲಿಂಗ್ ಗಾಗಿ ತೆರಳಿದ್ದ 20 ಮಂದಿ ಸೈನಿಕರ ಮೇಲೆ ಚೈನಾ ಸೈನಿಕರು ಕೈಗೆ ಸಿಕ್ಕ ಕಲ್ಲು, ದೊಣ್ಣೆ, ಕಬ್ಬಿಣದ ರಾಡುಗಳಿಂದ ದಾಳಿ ಮಾಡಿ ಕೊಂದಿದ್ದಾರೆ. ಗಡಿಗಳ ನಿರ್ವಹಣೆ ಕುರಿತು ಅಂತರಾಷ್ಟ್ರೀಯ ಒಪ್ಪಂದಗಳ ಪ್ರಕಾರ ನಿಶಸ್ತ್ರ ಸೈನಿಕರ ಮೇಲೆ ದಾಳಿ ಮಾಡಬಾರದು. ಆದರೂ ಈ ಸಂಹಿತೆಯನ್ನು ಮುರಿದಿರುವ ಚೈನಾದವರನ್ನು ಪ್ರಧಾನಿ ಏಕೆ ಪ್ರಶ್ನಿಸುತ್ತಿಲ್ಲ.
ಪ್ಲಾನೆಟ್ ಲ್ಯಾಟ್ ಉಪಗ್ರಹ ಇಮೇಜುಗಳ ಪ್ರಕಾರ ವಾಸ್ತವ ಗಡಿರೇಖೆಯನ್ನು ದಾಟಿ ಚೈನಾ ಸೈನ್ಯ ಮುಂದೆ ಬಂದಿದೆ. ಗಾಲ್ವನ್ ಕಣಿವೆಯಲ್ಲಿ ಗಡಿಯಿಂದ ಮುಂದಕ್ಕೆ ಸುಮಾರು ಐದು ಕಿಲೋ ಮೀಟರ್ ಮುಂದಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಾದ ನಂತರವೇ ಚೀನಾ ಗಾಲ್ವನ್ ಕಣಿವೆ ತನಗೆ ಸೇರಿದ್ದು ಎಂದು ಹೇಳುತ್ತಿದೆ. ಆದರೆ ಇತಿಹಾಸ ಇದಕ್ಕೆ ಭಿನ್ನವಾಗಿದೆ. ಲಡಾಕ್ ಪ್ರಾಂತ್ಯದ ಗಾಲ್ವನ್ ಕಣಿವೆ ಪಾರಂಪಾರಿಕವಾಗಿ ಬಾರತೀಯ ನೆಲ. ಅದರ ಮೇಲೆ ಚೈನಾಕ್ಕೆ ಯಾವುದೇ ಅಧಿಕಾರವೂ ಇಲ್ಲ.
ಸುಳ್ಳು ಹೇಳುವುದು ಚೈನಾಕ್ಕೆ ಹೊಸದೇನೂ ಅಲ್ಲ. ಭಾರತ – ಚೀನಾ ಗಡಿ ವಿಚಾರದಲ್ಲಿ ಅದು ಸುಳ್ಳು ಹೇಳುತ್ತಲೇ ಇದೆ. ಈ ಬಾರಿಯೂ ಹೊಸ ಸುಳ್ಳನ್ನು ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೊ ಜೊವೊ ಲಿಜಿಯಾನ್ : ಪೂರ್ವ ಲಡಾಕಿನ ಗಾಲ್ವಾನ್ ಕಣಿವೆ ಚೀನಾ – ಭಾರತ ಗಡಿಯ ಪಶ್ಚಿಮ ವಿಭಾಗದಲ್ಲಿ ವಾಸ್ತವ ನಿಯಂತ್ರಣ ರೇಖೆಯ (ಎಲ್.ಎ.ಸಿ.) ಚೀನಾದ ಬದಿಯಲ್ಲಿದೆ. ಗಾಲ್ವನ್ ಕಣಿವೆಯ ಎಲ್.ಎ.ಸಿ.ಯಲ್ಲಿ ಭಾರತೀಯ ಗಡಿಪಡಿಗಳು ರಸ್ತೆಗಳು, ಸೇತುವೆಗಳನ್ನು ನಿರ್ಮಿಸುತ್ತಿವೆ. ಚೀನಾದ ಗಡಿ ಪ್ರದೇಶಗಳು ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಗಸ್ತು ತಿರುಗುತ್ತಿವೆ. ಮೇ ಮುಂಜಾನೆ ಎಲ್.ಎ.ಸಿ.ಯನ್ನು ದಾಟಿ ಚೀನಾ ಭೂ ಪ್ರದೇಶ ಅತಿಕ್ರಮಣ ಮಾಡಿದ ಭಾರತೀಯ ಗಡಿ ಪಡೆಗಳು ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನದಲ್ಲಿ ಉದ್ದೇಶಪೂರ್ವಕವಾಗಿ ಪ್ರಚೋದನೆ ಮಾಡಿದರು. ಜೂನ್ 15ರ ಸಂಜೆ ಭಾರತದ ಮುಂಚೂಣಿ ಪಡೆಗಳು, ಕಮಾಂಡರ್ ಮಟ್ಟದ ಸಭೆಯಲ್ಲಿನ ಒಪ್ಪಂದ ಉಲ್ಲಂಘಿಸಿ, ಉದ್ದೇಶಪೂರ್ವಕ ಪ್ರಚೋದನೆಗಾಗಿ ಮತ್ತೊಮ್ಮೆ ವಾಸ್ತವಿಕ ಗಡಿರೇಖೆ ದಾಟಿವೆ. ಮಾತುಕತೆಗಾಗಿ ಅಲ್ಲಿಗೆ ಹೋದ ಚೀನಾದ ಅಧಿಕಾರಿಗಳು ಮತ್ತು ಸೈನಿಕರ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿತು. ಇದು ಭೀಕರ ದೈಹಿಕ ಘರ್ಷಣೆಗಳು, ಸಾವುನೋವುಗಳಿಗೆ ಕಾರಣವಾಯಿತು”

ಇಂಥ ಹಸಿಹಸಿ ಸುಳ್ಳನ್ನು ಚೀನಾದವರಿಗಷ್ಟೆ ಹೇಳಲು ಸಾಧ್ಯ. ವಾಸ್ತವ ಗಡಿರೇಖೆಯಿಂದ ಸುಮಾರು ಎಂಟು ಕಿಲೋ ಮೀಟರ್ ಅಂತರದಲ್ಲಿ ಭಾರತ, ರಸ್ತೆ, ಸೇತುವೆ ನಿರ್ಮಿಸುತ್ತಿದೆ. ನಮ್ಮ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವುದು ನಮ್ಮ ಹಕ್ಕು. ಇದರ ಬಗ್ಗೆ ಚೀನಾ ಯಾವುದೇ ಕಾರಣಕ್ಕೂ ಮಾತನಾಡಬಾರದು. ಆದರೂ ಅದು ಉದ್ಧಟತನ ಮೆರೆಯುತ್ತಿದೆ.
ಸಂಘರ್ಷದಲ್ಲಿ ಚೀನಾದ 43 ಮಂದಿ ಸೈನಿಕರು ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಬಗ್ಗೆ ಪ್ರತಿಕ್ರಯಿಸಲು ವಕ್ತಾರ ಲಿಜಿಯಾನ್ ನಿರಾಕರಿಸಿದ್ದಾರೆ. ಯಾವುದೇ ಆಯುಧವಿಲ್ಲದೇ ತಮ್ಮ ಗಡಿಪ್ರದೇಶದಲ್ಲಿ ಪರಿಸ್ಥಿತಿ ಅವಲೋಕನಕ್ಕಾಗಿ ತೆರಳಿದ ಭಾರತೀಯ ಸೈನಿಕರು ಶಸ್ತ್ರಸಜ್ಜಿತರಾಗಿರುವ ಚೈನಾಪಡೆಗಳ ಮೇಲೆ ದಾಳಿ ಮಾಡುವುದು ಸಾಧ್ಯವೇ ? ಖಂಡಿತ ಇಲ್ಲ. ಇದನ್ನು ನಾವು ಮತ್ತೆಮತ್ತೆ ಪ್ರಶ್ನಿಸಬೇಕಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ಯಾವುದೇ ಗಡಿ ತಕರಾರು ಇರಲಿಲ್ಲ. ಇದಕ್ಕಿದ್ದ ಹಾಗೆ ಈ ಘರ್ಷಣೆ ಹೇಗೆ ಸಂಭವಿಸಿತು ಎಂಬ ವರದಿಗಾರರ ಪ್ರಶ್ನೆಗಳಿಗೆ ಚೀನಿ ವಕ್ತಾ ಲಿಜಿಯಾನ್ ಸಮರ್ಪಕ ಉತ್ತರ ನೀಡಿಲ್ಲ. ಗಾಲ್ವಾನ್ ಕಣಿವೆಗೆ ಸಂಬಂಧಪಟ್ಟಂತೆ ಚೀನಾದವರು ಸೇನೆ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ವ್ಯವಹರಿಸುತ್ತಿದ್ದೇವೆ. ಇದರಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬುದು ಸ್ಪಷ್ಟವಾಗಿದೆ. ಆದರೆ ಈ ವಿಷಯದಲ್ಲಿ ಮತ್ತಷ್ಟು ಸಾವುನೋವು ಉಂಟಾಗಬಾರದು ಎಂಬುದು ಚೈನಾದ ಅಪೇಕ್ಷೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಟೋನ್ ನೋಡಿದರೆ ಭಾರತವನ್ನು ಬೆದರಿಸುವ ರೀತಿ ಇರುವುದು ಕಾಣುತ್ತದೆಯಲ್ಲವೇ ?
ಭಾರತೀಯರ ಆಕ್ರೋಶ:
ವಿನಾಃ ಕಾರಣ ಗಡಿತಂಟೆಗೆ ಬಂದು ಭಾರತೀಯ ಸೈನಿಕರ ಸಾವುನೋವಿಗೆ ಕಾರಣರಾದ ಮೇಲೆ ಭಾರತೀಯ ಪ್ರಜೆಗಳೆಲ್ಲರೂ ಒಕ್ಕೂರಲಿನಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯದಲ್ಲಿ ಇಡೀ ದೇಶವೇ ಒಂದಾಗಿದೆ. ಮತ್ತೆಮತ್ತೆ ಗಡಿತಂಟೆಗೆ ಬರುತ್ತಿರುವ ಚೈನಾದವರಿಗೆ ಆರ್ಥಿಕ – ಅಂತರಾಷ್ಟ್ರೀಯ ವೇದಿಕೆ – ರಾಜಕೀಯ – ಜೊತೆಗೆ ಮಿಲಿಟರಿ ಆಯಾಮಗಳಿಂದಲೂ ಬುದ್ದಿ ಕಲಿಸಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ.


ಇವೆಲ್ಲದರ ನಡುವೆ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಅವರು ಹೇಳಿದ ಮಾತುಗಳ ಬಗ್ಗೆಯೂ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ತಮ್ಮ ನೋವು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಅವರು ನಾವು ಭಾರತದ ಗಡಿಯೊಳಕ್ಕೆ ಹೋಗಿಲ್ಲ ಎಂದು ಚೀನಾ ಹೇಳಿದೆ. ಚೀನಾ ಭಾರತದ ಗಡಿಯೊಳಕ್ಕೆ ಬಂದಿಲ್ಲ ಎಂದು ಭಾರತವೂ ಹೇಳಿದೆ. ಮತ್ತೆ ನಮ್ಮ ೨೦ ಸೈನಿಕರು ತಾಯ್ನಾಡಿಗಾಗಿ ಪ್ರಾಣ ನೀಡಿದ್ದು,43 ಚೀನಾ ಯೋಧರು ಅವರ ದೇಶಕ್ಕಾಗಿ ಪ್ರಾಣ ಕಳಕೊಂಡದ್ದು, ಚೀನಾದವರ ಸೆರೆಯಾಳುಗಳಾಗಿದ್ದ ನಮ್ಮ 10 ಸೈನಿಕರು ಬಿಡುಗಡೆಯಾದದ್ದು- ಇವೆಲ್ಲ ಯಾಕಾಯ್ತೆಂದೇ ಗೊತ್ತಿಲ್ಲ. ನಮ್ಮ ಕಣ್ಣೆದುರೇ ನಡೆದ ಘಟನೆಗಳ ಸತ್ಯಾಸತ್ಯತೆ ನಮಗೆ ತಿಳಿದಿಲ್ಲ. ತಿಳಿಯಲೇಬೇಕೆಂಬ ಹಠವೂ ನಮಗಿಲ್ಲ. ಮತ್ತೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವನ್ನು ಹೇಳುವುದಾದರೂ ಹೇಗೆ? ಆಳುವವರು ತಮಗೆ ಬೇಕಾದಂತೆ ಕಟ್ಟುವ ಕತೆಗಳೇ ಇತಿಹಾಸ” ಎಂದು ತಮ್ಮ ಕಳವಳ ದಾಖಲಿಸಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಯಿಸಿರುವ ಗುರುಬಸಪ್ಪ ಕೊಂಪಿ ಅವರು “ಯಾವುದೇ ಇತಿಹಾಸವನ್ನು ಆಳುವವರು ಹೇಳುವುದು ಬೇಡ, ಅಲ್ಲಿಯ ಉಭಯ ದೇಶದ ಸೈನಿಕರು ಸತ್ಯಾ ಸತ್ಯತೆಯನ್ನು ಜಂಟಿ ಹೇಳಿಕೆ ಮೂಲಕ ವ್ಯಕ್ತ ಪಡಿಸಲಿ” ಎಂದಿದ್ದಾರೆ.
ಹಿರಿಯ ಪತ್ರಕರ್ತ ಹೆಚ್.ಸಿ. ದಿನೇಶ್ ಕುಮಾರ್ ಅವರು “ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಹೇಳುತ್ತಿರುವ ಪ್ರಕಾರ ಲಾಡಾಕ್ ನಲ್ಲಿ ಯಾವುದೇ ದೇಶ ನಮ್ಮ ಗಡಿಯೊಳಗೆ ಬಂದು ಅತಿಕ್ರಮಣ ಮಾಡಿಲ್ಲ, ಬೇರೆ ದೇಶದವರು ನಮ್ಮ ಗಡಿಯೊಳಗೆ ಯಾವುದೇ ಪೋಸ್ಟ್ ವಶಪಡಿಸಿಕೊಂಡಿಲ್ಲ. ಇದು ಅತ್ಯಂತ ಗಂಭೀರವಾದ ಹೇಳಿಕೆ. ಪ್ರಧಾನಿ ಹೇಳಿದ ಮೇಲೆ ನಾವು ನಂಬಲೇಬೇಕು. ಹಾಗಿದ್ದರೆ ನಮ್ಮ ವೀರಯೋಧರು ಯಾಕೆ ಜೀವತೆತ್ತರು? ಹಾಗಿದ್ದರೆ ಪಿ. ಎಲ್. ಎ. ಸೈನಿಕರ ಜತೆ ನಮ್ಮ ಸೈನಿಕರ ಸಂಘರ್ಷ ಎಲ್ಲಿ ನಡೆಯಿತು? ಯಾಕಾಗಿ ನಡೆಯಿತು? ಚೀನೀಯರು ನಮ್ಮ ಗಡಿಯ ಒಳಗೆ ಬಂದಿಲ್ಲವೆಂದರೆ ನಮ್ಮ ಸೈನಿಕರು ಚೀನಾ ಗಡಿಯೊಳಗೆ ಹೋಗಿದ್ದರಾ? ಪ್ರಧಾನಿ ಹೇಳಿಕೆ, ಚೀನಾ ಸರ್ಕಾರದ ಸಮರ್ಥನೆಗಳನ್ನು ಎತ್ತಿ ಹಿಡಿಯುವುದಿಲ್ಲವಾ? ಅಸಲಿಗೆ ಅಲ್ಲಿ ನಡೆದಿದ್ದಾರೂ ಏನು? ಎಂದು ಪ್ರಶ್ನಿಸಿದ್ದಾರೆ.
ವಾಸ್ತವ ಗಡಿರೇಖೆ ದಾಟಿರುವ ಚೀನಿ ಸೇನಾಪಡೆಗಳು ಗಾಲ್ವನ್ ಕಣಿವೆಯಲ್ಲಿ ಚಟುವಟಿಕೆ ನಡೆಸುತ್ತಿವೆ ಎಂದು ಕೆಲವು ರಾಷ್ಟ್ರೀಯ ವಾಹಿನಿಗಳಲ್ಲಿ ನಿರಂತರವಾಗಿ ವರದಿ ಬರುತ್ತಿದೆ. ಭಾರತದ ಸಮಗ್ರತೆ, ಸುರಕ್ಷತೆ ಮತ್ತು ನೆಲದ ರಕ್ಷಣೆ ವಿಷಯದಲ್ಲಿ ಯಾವುದೇ ಹಿಂಜರಿತವೂ ಬೇಡ ಎಂಬುದೇ ಭಾರತೀಯರೆಲ್ಲರ ಒಕ್ಕೂರಲಿನ ಧ್ವನಿಯಾಗಿದೆ.

ಚಿತ್ರಕೃಪೆ: ಅಂತರ್ಜಾಲ

Exit mobile version