ಪವಾಡಗಳೆಲ್ಲ ಪೌರಾಣಿಕ – ಐತಿಹಾಸಿಕ ಕಾಲಘಟ್ಟದ್ದು ಎಂದು ಹೇಳಿದವರು ಯಾರು ? 21ನೇ ಶತಮಾನದಲ್ಲಿಯೂ ಪವಾಡ ನಡೆದಿದೆ ! ಅದಕ್ಕೆ ಮುಂದಿನ ಘಟನೆಯೂ ಒಂದು ನಿದರ್ಶನ ! !
ಲಕ್ಷ್ಮಿನಾರಾಯಣ ಅವರು ಹಿರಿಯ ವಿಡಿಯೋ ಎಡಿಟರ್! ಕನ್ನಡದ ಟಿವಿ ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದಾರೆ. ನನ್ನ ಸ್ನೇಹಿತರು. ಅವರು ಇರುವ ತನಕ ನಾನು ನಿರ್ಮಿಸಿದ ಎಲ್ಲ ಕೃಷಿ – ಪರಿಸರ ಸಂಬಂಧಿತ ವಿಡಿಯೋ ಡಾಕ್ಯುಮೆಂಟರಿಗಳನ್ನು ಎಡಿಟ್ ಮಾಡಿದವರು. ಕೆಲವು ಪ್ರಾಜೆಕ್ಟ್ ಗಳಿಗೆ ಕ್ಯಾಮೆರಾಮೆನ್ ಆಗಿಯೂ ಕೆಲಸ ಮಾಡಿದ್ದಾರೆ. ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟು. ತಾನು ಸೀನಿಯರ್ ಎಂಬ ಅಹಂ ಇರಲಿಲ್ಲ. ಹೀಗೆ ಮಾಡಿದರೆ ಹೇಗೆ? ಹಾಗೆ ಮಾಡಿದರೆ ಫ್ರೇಮ್‌ ಇನ್ನು ಆಕರ್ಷಕವಾಗಿ ಬರುತ್ತದೆ ನೋಡಿ ಎಂದು ಚರ್ಚಿಸುತ್ತಿದ್ದರು.
ವಿಡಿಯೋ ಎಡಿಟಿಂಗ್‌ ಟೇಬಲ್‌ ಮುಂದೆ ಕುಳಿತಾಗ ನಮ್ಮಿಬ್ಬರ ಮಾತುಗಳಲ್ಲಿ ಹಲವು ಸಿನೆಮಾಗಳ ಎಡಿಟಿಂಗ್‌ ಕುರಿತ ಚರ್ಚೆಗಳು ಉಂಟಾಗುತ್ತಿದ್ದವು. ದೃಶ್ಯ ರಿಣಾಮಕಾರಿಯಾಗಿ ಇರುವಂತೆ ಕೆಲವೊಮ್ಮೆ ಎಡಿಟಿಂಗ್‌ ಎಫೆಕ್ಟ್‌, ಮ್ಯೂಸಿಕ್‌ ಬಗ್ಗೆ ಗಂಟೆಗಟ್ಟಲೆ ಚರ್ಚಿಸಿದ್ದೂ ಇದೆ.
ಇಂಥವರು ಕೋವಿಡ್ ಕಾಲದಲ್ಲಿ ಮೃತರಾದರು. ಅದು ಅವರ ಕುಟುಂಬದವರಿಗೆ ಮಾತ್ರ ಅಲ್ಲ, ಅವರ ಸ್ನೇಹವಲಯದಲ್ಲಿದ್ದವರಿಗೂ ಅಪಾರ ದುಃಖ ಉಂಟು ಮಾಡಿದೆ. ಅವರ ಎಡಿಟಿಂಗ್‌ ಶೈಲಿಯನ್ನು ಮೆಚ್ಚಿದ್ದ ನಾನು ಆ ನಂತರವೂ ಅದೇ ರೀತಿ ಬರಬೇಕೆಂದು ಬೇರೆ ವಿಡಿಯೋ ಎಡಿಟರ್‌ ಗಳ ಜೊತೆ ಚರ್ಚಿಸಿದ್ದೇನೆ. ಇದರಿಂದ ಹೊಸ ಎಡಿಟರುಗಳಿಗೆ ಬೇಸರವೂ ಆಗಿರಬಹುದು !‌
ಲಕ್ಷ್ಮೀನಾರಾಯಣ ಅವರ ಪೋಟೋ ಹಾಕಿ, ಫೇಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿರುವುದು
ಇಂದು ಸಂಜೆ ಫೇಸ್ಬುಕ್ ತೆರೆದರೆ ಲಕ್ಷ್ಮಿನಾರಾಯಣ ಅವರೇ ಫ್ರೆಂಡ್ ರಿಕ್ವೇಸ್ಟ್ ಕಳಿಸಿದ ಪವಾಡ ನಡೆದಿದೆ. ಈ ಫೇಕ್ ಪವಾಡದ ಅಕೌಂಟ್ ಕ್ರಿಯೇಟ್ ಮಾಡಿದವರಿಗೆ ಲಕ್ಷ್ಮಿನಾರಾಯಣ ಮೃತರಾಗಿದ್ದಾರೆ ಎಂಬುದು ಗೊತ್ತಿಲ್ಲ. ವಂಚಕರು ಎಷ್ಟೇ ಬುದ್ದಿವಂತರಾಗಿದ್ದರೂ ಅವರ ನಿಜಬಣ್ಣ ಬಯಲಾಗುತ್ತದೆ. ಅದಕ್ಕೆ ಇದೊಂದು ಪುಟ್ಟ ನಿದರ್ಶನ.
ಫೇಕ್‌ ಅಕೌಂಟ್‌ ನಿಂದ ಕಳಿಸಿದ ಫ್ರೆಂಡ್‌ ರಿಕ್ವೆಸ್‌ ಸ್ವೀಕರಿಸಿದ ತಕ್ಷಣವೇ ಢಣ್‌ ಎಂದು ಫೇಸ್ಬುಕ್‌ ಮೆಸೆಂಜರ್‌ ತೆರೆದುಕೊಳ್ಳುತ್ತದೆ. ಹಾಯ್‌, ಹಲೋ ಹೇಳಿದ ನಂತರ ” ತುರ್ತಾಗಿ ಹಣ ಬೇಕಾಗಿದೆ. ಇಂತಿಷ್ಟು ಹಣ ಕಳಿಸಿ” ಎಂಬ ಮೆಸೇಜ್‌ ಬರುತ್ತದೆ ! ಇಂಥ ಮೆಸೇಜ್‌ ಬಂದಾಗ ತಕ್ಷಣ ಆನ್‌ ಲೈನ್‌ ಮೂಲಕ ಹಣ ಕಳಿಸಿ ಮೋಸ ಹೋದವರೂ ಇರಬಹುದು !
ಇಂಥ ವಂಚನೆಗಳನ್ನು ತಡೆಯಲು ಫೇಸ್ಬುಕ್‌ ಏನೂ ಮಾಡುತ್ತಿಲ್ಲ. ಭಾರತ ಸರ್ಕಾರದವರು ಭಾರತದಲ್ಲಿ ಸೋಶಿಯಲ್‌ ಮೀಡಿಯಾಗಳಲ್ಲಿ ಅಕೌಂಟ್‌ ತೆರೆಯಲು ಆಧಾರ್‌ ಕಾರ್ಡ್‌, ವೋಟರ್‌ ಐಡಿ ಅಥವಾ ಪಾಸ್‌ ಪೋರ್ಟ್‌ ಕಡ್ಡಾಯ ಮಾಡಬೇಕು. ಆಗ ಒಬ್ಬರು ಒಂದೇ ಅಕೌಂಟ್‌ ತೆರೆಯಲು ಸಾಧ್ಯವಾಗುತ್ತದೆ. ಭಾರತದಲ್ಲಿ ಕಾರ್ಯಾಚರಿಸುವ ಸೋಶಿಯಲ್‌ ಮೀಡಿಯಾಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಬೇಕು. ಇದರಿಂದ ಫೇಕ್‌ ಅಕೌಂಟ್‌ ಗಳ ಹಾವಳಿಯನ್ನು ಸಾಧ್ಯವಾದಷ್ಟೂ ತಪ್ಪಿಸಬಹುದು ಅಲ್ಲವೇ ?
Similar Posts

Leave a Reply

Your email address will not be published. Required fields are marked *