“ಆಡು ಮುಟ್ಟದ ಸೊಪ್ಪಿಲ್ಲ” ಇದು ಆಡುಮಾತು. ಕೆಲವರಿಗಂತೂ ಬಲು ಅನ್ವಯ. ಅಂಥವರಲ್ಲಿ ಕಯ್ಯಾರ ಕಿಞ್ಞಣ್ಣ ರೈ ಒಬ್ಬರು. ಅವರು ಕೃಷಿಕ, ಕವಿ, ಸಾಹಿತಿ, ಅಧ್ಯಾಪಕ, ಬಹುಭಾಷಾ ವಿದ್ವಾಂಸ, ಹೋರಾಟಗಾರ, ರಾಜಕಾರಣಿ, ಆಡಳಿಗಾರ. ಇಷ್ಟು ಹೆಗ್ಗಳಿಕೆ ಎಷ್ಟು ಜನರಿಗಿದ್ದೀತು.
ಹುಟ್ಟೂರು ಪೆರಡಾಲ. ಕಾಸರಗೋಡು ತಾಲ್ಲೂಕು ಬದಿಯಡ್ಲ ಬದಿಯ ಹಳ್ಳಿ. ತುಂಬು ಮನೆತನ. ಶಿಕ್ಷಣದತ್ತ ಒಲವು. ಮನೆಮಾತು ತುಳು. ಕನ್ನಡ – ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಾಂಡಿತ್ಯ. ಇಂಗ್ಲಿಷ್ ಮೇಲೆಯೂ ಹಿಡಿತ. ಅವರೆಂದೂ ಅನ್ಯಾಯ ಸಹಿಸಿದವರಲ್ಲ. ಸಿಡಿಗುಂಡು. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾಗಿ. ರಾಷ್ಟ್ರದ ಉನ್ನತಿಗೆ ಕಂಡ ಕನಸು ಅಪಾರ.
ಸ್ವಾತಂತ್ರ್ಯ ಸಂದು ಕೆಲವೇ ವರ್ಷ. ಭಾಷಾವಾರು ಪ್ರಾಂತ್ಯ ರಚನೆ. ಕನ್ನಡದ ಸಿಂಹಕ್ಕೆ ಸಿಡಿಲೆರಗಿತ್ತು. ಕಾಸರಗೋಡು ಕೇರಳಕ್ಕೆ ಸೇರಿತ್ತು. ಅದ್ಹೇಗೆ ಸಾಧ್ಯ ? ಎಲ್ಲೋ ಎಡವಟ್ಟಾಗಿದೆ ಅಂದುಕೊಂಡರು. ಶಾಸಕರಿಂದ ರಾಷ್ಟ್ರಪತಿ ತನಕ ಮನವಿ. ಎಲ್ಲರಿಂದ ನೋಡೋಣ ಆಶ್ವಾಸನೆ. ಅದು ವಾಸನೆಯಷ್ಟೆ. ಆಶ್ವಾಸನೆ ಈಡೇರಲಿಲ್ಲ. ಕಯ್ಯಾರರ ಧೈರ್ಯ ಕುಂದಲಿಲ್ಲ. ಸಮಾನಮನಸ್ಕರೊಂದಿಗೆ ಹೋರಾಟ. ಮಹಾಜನ್ ಆಯೋಗ ರಚಿತ. ಕಯ್ಯಾರರು ಸಮಿತಿ ಮುಂದೆ ವಾದ ಮಾಡಿದರು. ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ ಎಂದರು. ದಾಖಲೆ ಒಪ್ಪಿಸಿದರು. ಇವರ ವಾದ ವೈಖರಿಗೆ ನ್ಯಾಯಮೂರ್ತಿ ಮಹಾಜನ್ ತಲೆದೂಗಿದರು. ವರದಿ ಬಂತು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದು ಅಡಕ.
ಕಯ್ಯಾರರಿಗೆ ಅಪಾರ ಸಂತಸ. ಇನ್ನೇನು ಕರ್ನಾಟಕಕ್ಕೆ ಸೇರಿದೆವು. ಕನ್ನಡತಾಯಿ ಒಡಲ ಮಡಿಲಿಗೆ ಸೇರುವೆವು. ಖುಷಿ. ಸಂಭ್ರಮಿಸಿದರು. ರಾಜಕೀಯ ಇಚ್ಚಾಶಕ್ತಿ ಕೊರತೆ. ಕರ್ನಾಟಕದ ರಾಜಕಾರಣಿಗಳು ಒತ್ತಡ ಹಾಕಲಿಲ್ಲ. ವರದಿ ನೆನೆಗುದಿಗೆ ಬಿತ್ತು. ಆದರೂ ಕನ್ನಡದ ಜೀವ ಸುಮ್ಮನಾಗಲಿಲ್ಲ. ಮನವಿ ಮೇಲೆ ಮನವಿ. ಬಂದವರಿಗೆಲ್ಲ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದೇ ಮಂತ್ರ
೨೦೧೦. ನಾನು ಕವಿತಾ ಕುಟೀರಕ್ಕೆ ಭೇಟಿ ಕೊಟ್ಟಿದ್ದೆ. ಕಯ್ಯಾರರಿಗೆ ನೂರರ ಗಡಿ ಸಮೀಪ. ಕನ್ನಡ ಎಂದೊಡನೆ ಅಪಾರ ಉತ್ಸಾಹ. ಕುಂದಿದಂತಿದ್ದ ಉತ್ಸಾಹ ಗರಿಗೆದರಿತು. ಒಂದಷ್ಟು ಹೊತ್ತು ಮಾತು.. ಅದೇ ಮಂತ್ರ. ಕಾಸರಗೋಡು ಕರುನಾಡಿಗೆ ಸೇರಬೇಕು. ಸೇರಲೇಬೇಕು. ಇದು ನನ್ನ ಪೂರಕ ದನಿ. ಅವರ ಕಣ್ಣಲ್ಲಿ ಕಂಬನಿ.
ಇಂದು ಜೂನ್ ೮. ಕನ್ನಡ ಕಲಿ ಕಯ್ಯಾರರ ಜನ್ಮದಿನ. ಅವರ ನಿರಂತರ ಹೋರಾಟ ನಾಡಿಗೆ ನೆನಪಿದೆ. ಅನೇಕರು ಸ್ಮರಿಸಿದ್ದಾರೆ. ಆದರಿಷ್ಟೆ ಸಾಲದು. ಅವರ ಹೋರಾಟ ಮುಂದುವರಿಯಬೇಕು. ಕಾಸರಗೋಡು, ಕರ್ನಾಟಕಕ್ಕೆ ಸೇರಬೇಕು. ಹೀಗಾದರೆ ಮಾತ್ರ ಅವರ ಚೇತನ ನಗೆ ಚೆಲ್ಲೀತು. ಅವರ ಕನಸು ನನಸಾದೀತು.
೧೯೫೭. ಧಾರವಾಡದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ. ಕುವೆಂಪು ಅಧ್ಯಕ್ಷತೆ. ಅಷ್ಟರಲ್ಲಾಗಲೇ ಭಾಷಾವಾರು ಪ್ರಾಂತ್ಯ ರಚನೆ. ಕೇರಳಕ್ಕೆ ಕಾಸರಗೋಡು ಸೇರಿತ್ತು. ಕನ್ನಡ ಮನಸುಗಳಿಗೆ ನೋವು. ಕಯ್ಯಾರರ ಆಕ್ರೋಶ ಗುಂಡಿನಂತೆ ಸಿಡಿಯಿತು.
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ
ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!
ಹಾರೆಗುದ್ಲಿ ಕೊಡಲಿ ನೊಗ ನೇಗಿಲೆತ್ತುತಲಿ
ನೆಲದಿಂದ ಹೊಲದಿಂದ ಹೊರಟು ಬನ್ನಿ
ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ
ಕಡಲಿಂದ, ಸಿಡಿಲಿಂದ ಗುಡುಗಿಬನ್ನಿ ಬೆಂಕಿಬಿದ್ದಿದೆ ಮನೆಗೆ!
ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ
ಬೆಂಕಿಯನ್ನಾರಿಸಲು ಬೇಗ ಬನ್ನಿ
ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ
ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!
ಕಾಸರಗೋಡು ಇನ್ನೂ ಕರುನಾಡಿಗೆ ಸೇರಿಲ್ಲ. ಅರ್ಥಾತ್ ಬಿದ್ದ ಬೆಂಕಿ ಇನ್ನೂ ಆರಿಲ್ಲ. ಆರುವ ತನಕವೂ ಕಯ್ಯಾರರ ಈ ಕವನ ಪ್ರಸ್ತುತ. ಕಯ್ಯಾರರ ಆರ್ತತೆ ನಮ್ಮನ್ನು ಎಬ್ಬಿಸಲಾರದೇ ? ಅವರ ಆಶಯ ಈಡೇರುವುದೆಂದು ? ಕನಸು ನನಸಾದ ದಿನ ಕಯ್ಯಾರರ ಚೇತನ ಮುಗುಳ್ನಗಬಹುದು