ಗುಜರಾಜ್ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಕರ್ನಾಟಕದಲ್ಲಿ ಸುರಕ್ಷಿತವಾಗಿ ಇರಿಸಿದೆ. ಹೀಗೆ ತನ್ನ ಪಾರ್ಟಿಯವರನ್ನು ಎದುರು ಪಾರ್ಟಿಯ ತಂತ್ರಗಾರಿಕೆಯಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಇಂಥ ಸಂದರ್ಭದಲ್ಲಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಎದುರು ಪಕ್ಷದವರನ್ನು ಬೆದರಿಸುವ ಕಾರ್ಯ ಸಣ್ಣಮಟ್ಟದ ರಾಜಕಾರಣ.
ಪ್ರಸ್ತುತ ಇಂಥ ಕೀಳುಮಟ್ಟದ ರಾಜಕಾರಣವನ್ನು ಬಿಜಿಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿದೆ. ರಾಜಕೀಯ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಅಧಿಕಾರಿಗಳಿಂದ ಸ್ವಯಂಪ್ರೇರಿತ ಐಟಿ ದಾಳಿಗಳು ನಡೆಯುವುದಿಲ್ಲ. ಉನ್ನತ ಸಚಿವರ ಇಶಾರೆ ಇದ್ದರೆ ಮಾತ್ರ ಅವರು ಈ ಧೈರ್ಯ ಮಾಡುತ್ತಾರೆ. ಆದ್ದರಿಂದ ರಾಜ್ಯದ ಸಚಿವ ಡಿ.ಕೆ, ಶಿವಕುಮಾರ್ ಅವರ ಮೇಲೆ ನಡೆದಿರುವ ದಾಳಿ ಹಿಂದೆ ಕೇಂದ್ರದ ಬಿಜೆಪಿ ಸಚಿವರ ಅದರಲ್ಲಿಯೂ ಹಣಕಾಸು ಸಚಿವರ ಇಶಾರೆ ಇಲ್ಲ ಎಂದು ನಂಬಲು ಸಾಧ್ಯವೆ….
‘ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲಲು ಬಿಜೆಪಿ ಏನು ಬೇಕಾದರೂ ಮಾಡುತ್ತದೆ’ ಇದು ಕಾಂಗ್ರೆಸ್‌ ಹಿರಿಯ ನಾಯಕ ಅಹ್ಮದ್‌ ಪಟೇಲ್ ಅವರು ಮಾಡಿರುವ ಟ್ವೀಟ್‌. ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆದ ನಂತರ ಅವರು ಈ ಸಂದೇಶ ಹರಿಯಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಗುರಿ, ಡಿಕೆಶಿ ಮಾತ್ರ ಅಲ್ಲ. ಅದು ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿಕೊಂಡಿದೆ. ಈ ಮೂಲಕ ಆ ಪಕ್ಷದ ಗುಜರಾತ್ ಘಟಕದ ಶಾಸಕರನ್ನೂ ಬೆದರಿಸುವ ಮಾರ್ಗವನ್ನು ಅದು ಅನುಸರಿಸುತ್ತಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಈ ಪಕ್ಷದ ಶಾಸಕರನ್ನು ರಾಜಕೀಯ ವಾಮಮಾರ್ಗಕ್ಕೆ ಬಲಿಯಾಗದಂತೆ ರಕ್ಷಿಸಿಕೊಳ್ಳುವ ಸಾಹಸಕ್ಕೆ ಹಿರಿಯ ನಾಯಕರು ಮುಂದಾಗದಂತೆ ಮಾಡಲು ಹೆದರಿಸುವ ಕಾರ್ಯವೂ ಇದಾಗಿದೆ.

ತನ್ನ ಒಂದು ರಾಜ್ಯ ಘಟಕದ ಶಾಸಕರನ್ನು ಮತ್ತೊಂದು ರಾಜ್ಯದ ಘಟಕದ ಮೂಲಕ ಸುರಕ್ಷಿತವಾಗಿ ಇಡುವ ಕಾರ್ಯ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಎಲ್ಲ ಪಕ್ಷಗಳು ಹೀಗೆಯೇ ಮಾಡುತ್ತವೆ. ಪ್ರಸ್ತುತ ಗುಜರಾತ್ ಶಾಸಕರನ್ನು ಅಲ್ಲಿನ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೈಜಾಕ್ ಮಾಡದಂತೆ ನೋಡಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಇವರ ಆತಿಥ್ಯದ ಉಸ್ತುವಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ. ಇದೇ ಬಿಜೆಪಿ ಹಿರಿಯ ನಾಯಕರ ಕಣ್ಣು ಕೆಂಪಗಾಗಲು ಕಾರಣ.
ಬಿಜೆಪಿಯೇ ಸಾಕಷ್ಟು ಬಾರಿ ರೆಸಾರ್ಟ್ ರಾಜಕಾರಣ ಮಾಡಿದೆ. ಆದರೆ ಇಂಥ ಸಂದರ್ಭದಲ್ಲಿ ಆಡಳಿತದಲ್ಲಿ ಇದ್ದ ಪಕ್ಷ ಆಡಳಿತ ಯಂತ್ರವನ್ನು ಬಿಟ್ಟು ಹೆದರಿಸುವ ಕಾರ್ಯ ಮಾಡಿಲ್ಲ. ಆದರೆ ಇಂಥ ದುಷ್ಟ ಪರಂಪರೆಯನ್ನು ಬಿಜೆಪಿ ಹುಟ್ಟು ಹಾಕಿದೆ. ಇದು ದೇಶವನ್ನು ಏಕಪಕ್ಷಮಯಗೊಳಿಸುವ ಕಾರ್ಯದಲ್ಲಿನ ಹೆಜ್ಜೆ. ಇಂಥ ಯತ್ನಗಳು ಮುಂದೊಂದು ದಿನ ಪ್ರಜಾಪ್ರಭುತ್ವವನ್ನೇ ಅಪಾಯಕ್ಕೆ ಸಿಲುಕಿಸಬಲ್ಲದು

Similar Posts

Leave a Reply

Your email address will not be published. Required fields are marked *