ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದೆ. ಇದರ ಹಿಂದೆ ಎಸ್.ಎಂ.ಕೃಷ್ಣ ಅವರ ಕೊಡುಗೆಯೂ ಇದೆ!!
ಹೀಗೆಂದರೆ ಹಲವರಿಗೆ ಅಚ್ಚರಿಯಾಗಬಹುದು. ರಾಜ್ಯ ಸರ್ಕಾರಕ್ಕೆ ಸುಸ್ಥಿರ ಮತ್ತು ನಿಶ್ವಯವಾದ ತೆರಿಗೆ ಮೂಲಕ ಉತ್ತಮ ಆದಾಯ ಇರಬೇಕು. ಆಗ ಮಾತ್ರ ಸರ್ಕಾರದ ಚುಕ್ಕಾಣಿ ಹಿಡಿದವರು ಉಚಿತ ಯೋಜನೆಗಳನ್ನು ನೀಡುವ ಎದೆಗಾರಿಕೆ ತೋರಿಸಲು ಸಾಧ್ಯ !!
2008ರಿಂದಷ್ಟೇ ರಾಜ್ಯದ ವಾರ್ಷಿಕ ಬಜೆಟ್ ಮೊತ್ತ ಒಂದು ಲಕ್ಷ ಕೋಟಿ ರೂಪಾಯಿ ದಾಟಿತು. ಪ್ರತಿವರ್ಷ ಇದರ ಮೊತ್ತ ಹೆಚ್ಚಾಗುತ್ತದೆ ಬಂದಿದೆ. ಇದರಲ್ಲಿ ಬಹುಪಾಲು ಮೊತ್ತ ವಾಣಿಜ್ಯ ತೆರಿಗೆ ( ಜಿ.ಎಸ್.ಟಿ.)ಯಿಂದ ಬರುತ್ತದೆ. ಎರಡನೇ ಅತೀ ಹೆಚ್ಚು ಆದಾಯ ಬರುವುದು ಅಬಕಾರಿ ಅಂದರೆ ಎಕ್ಸೈಸ್ ನಿಂದ ! ಉಳಿದಂತೆ ಬೇರೆಬೇರೆ ಇಲಾಖೆಗಳಿಂದಲೂ ತೆರಿಗೆ ಸಂಗ್ರಹಣೆಯಾಗುತ್ತದೆ ! ಆದರದು ಗಣನೀಯವಲ್ಲ !
ನಿಮಗೆ ಗೊತ್ತಿರಲಿ, 2003ರ ತನಕ ಮದ್ಯಪಾನೀಯಗಳ ಮಾರಾಟದಿಂದ ಸಂಗ್ರಹವಾಗುತ್ತಿದ್ದ ತೆರಿಗೆಯು ರಾಜ್ಯ ಸರ್ಕಾರ ಮಜ್ಜಿಗೆ ಕಾಸಿಗೂ ಸಾಲುತ್ತಿರಲಿಲ್ಲ. ಕೆಲವೇ ನೂರು ಕೋಟಿ ರೂಪಾಯಿಗಳಷ್ಟೆ ಸಂಗ್ರಹಣೆಯಾಗುತ್ತಿತ್ತು ! ಹಾಗೆಂದ ಮಾತ್ರಕ್ಕೆ ಮದ್ಯ ಮಾರಾಟ ಕ್ಷೇತ್ರದಲ್ಲಿ ಆದಾಯ ಇರಲಿಲ್ಲ ಎಂದಲ್ಲ ! ಇದರ ಶೇಕಡ 90ಕ್ಕೂ ಹೆಚ್ಚು ಭಾಗ ಮದ್ಯ ಮಾರಾಟದ ದೊರೆಗಳಿಗೆ ಸಂದಾಯವಾಗುತ್ತಿತ್ತು. ಈ ಹಣದ ಬಲದಿಂದಲೇ ಅವರು ರಾಜ್ಯ ಸರ್ಕಾರವನ್ನು ತಮಗೆ ಬೇಕಾದಂತೆ ಆಟವಾಡಿಸುತ್ತಿದ್ದರು. ತೆರೆಯ ಹಿಂದಿನ ಸೂತ್ರಧಾರಿಗಳಂತೆ ಸರ್ಕಾರ ಕಟ್ಟುವ, ಕೆಡುವುವ ಕಾರ್ಯ ಮಾಡುತ್ತಿದ್ದರು. ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ಬಂಗಾರಪ್ಪ ಅಂಥವರೂ ಸಹ ಮದ್ಯದ ದೊರೆಗಳು ಕೊಬ್ಬಲು, ಉಬ್ಬಲು ಪ್ರಮುಖ ಕಾರಣಕರ್ತರಾಗಿದ್ದರು !!
ಯಾವುದೇ ರಾಜ್ಯ ಸರ್ಕಾರವೂ ಮದ್ಯದ ದೊರೆಗಳನ್ನು ಕೆಣಕುವ ಕಾರ್ಯಕ್ಕೆ ಹೋಗಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ವಿರೇಂದ್ರ ಪಾಟೀಲರು ಮತ್ತು ಹಣಕಾಸು ಖಾತೆ ಸಚಿವರಾಗಿದ್ದ ರಾಜಶೇಖರಮೂರ್ತಿ ಅವರು ಮಾತ್ರ ಮದ್ಯದ ಲಾಬಿ ವಿರುದ್ಧ ಕಠಿಣವಾಗಿ ವರ್ತಿಸಿದರು. 1989ರಲ್ಲಿ ಜನತಾದಳ ಸರ್ಕಾರ ಕೊನೆಯಾದಾಗ ಕರ್ನಾಟಕ ಸರ್ಕಾರದ ಖಜಾನೆಯಲ್ಲಿ ಹಣವೇ ಇರಲಿಲ್ಲ. ಇಂಥ ದುಸ್ಥಿತಿಯನ್ನು ವೀರೇಂದ್ರ ಪಾಟೀಲರು ಮತ್ತು ರಾಜಶೇಖರಮೂರ್ತಿ ನಿವಾರಿಸಿದರು. ಕೇವಲ 11 ತಿಂಗಳಿನಲ್ಲಿಯೇ ಸುಮಾರು 900 ಕೋಟಿ ರೂಪಾಯಿಗಳ ತೆರಿಗೆ ಹಣವನ್ನು ವಿವಿಧ ಮೂಲಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರುವಂತೆ ಮಾಡಿದರು. ಆಗಿನ ಸಂದರ್ಭಕ್ಕೆ ಇದು ಬಹುದೊಡ್ಡ ಮೊತ್ತ !!
ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಸರ್ಕಾರಗಳಲ್ಲಿ ಮಂತ್ರಿಯಾಗಿದ್ದರು, ಉಪ ಮುಖ್ಯಮಂತ್ರಿಯಾಗಿದ್ದರು. ತಮ್ಮ ಕೈಗೆ ಹೆಚ್ಚಿನ ಅಧಿಕಾರ ಬರುವ ತನಕ ಅವರು ಮದ್ಯದ ದೊರೆಗಳ ತಂಟೆಗೆ ಹೋಗಿರಲಿಲ್ಲ. 1999ರಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಂಡ ಬಹುಮತ ಗಳಿಸಿತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು. ಹಣಕಾಸು ಇಲಾಖೆ, ಅಬಕಾರಿ ಇಲಾಖೆಗಳ ನೇತೃತ್ವವನ್ನು ಹಿರಿಯ, ದಕ್ಷ ಅಧಿಕಾರಿಗಳಿಗೆ ವಹಿಸಿದರು. ಮದ್ಯದ ಲಾಬಿ ಬಗ್ಗುಬಡಿಯುವ ಬ್ಲೂ ಪ್ರಿಂಟ್ ತಯಾರಿಸುವಂತೆ ಸೂಚಿಸಿದರು. ಇದರ ಪರಿಣಾಮವಾಗಿಯೇ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಪಾನಿಯ ನಿಗಮ ನಿಯಮಿತ ರಚನೆಯಾಯಿತು. ಡಿಸ್ಟಿಲರಿಗಳಲ್ಲಿ ತಯಾರಾಗುತ್ತಿದ್ದ ಪ್ರತಿ ಮದ್ಯದ ಬಾಟಲಿನ ಲೆಕ್ಕ ದೊರೆಯತೊಡಗಿತು. ಹೋಲ್ ಸೇಲ್ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚಿಸಲಾಯಿತು. ಇದರಿಂದ ಸೆಕೆಂಡ್ಸ್ (ತೆರಿಗೆ ತಪ್ಪಿಸಿಕೊಂಡಂಥವು) ಮಾರಾಟ ನಿಂತು ಹೋಯಿತು.
ನೋಡುನೋಡುತ್ತಿದ್ದಂತೆ ಅಬಕಾರಿ ಇಲಾಖೆಯಿಂದ ಬರುವ ತೆರಿಗೆ ಪ್ರತಿವರ್ಷ ಹೆಚ್ಚಾಗತೊಡಗಿತು. ಕಳೆದ ವರ್ಷ ಇದರಿಂದ ಬಂದ ಆದಾಯ 36 ಸಾವಿರ ಕೋಟಿಗಳಿಗೂ ಹೆಚ್ಚು ! ಈ ವರ್ಷ 40 ಸಾವಿರ ಕೋಟಿ ನಿರೀಕ್ಷಿಸಲಾಗಿದೆ. ಎಸ್.ಎಂ.ಕೃಷ್ಣ ಅವರು ಮದ್ಯದ ದೊರೆಗಳ ಸೊಕ್ಕನ್ನು ಶೇಕಡ 75ರಷ್ಟು ಮುರಿದರು. ರಾಜ್ಯ ಸರ್ಕಾರಕ್ಕೆ ಪ್ರತಿವರ್ಷ ಗಣನೀಯವಾಗಿ ಏರಿಕೆಯಅಗುವ ತೆರಿಗೆ ಮೂಲಗಳನ್ನು ಭದ್ರ ಮಾಡಿದರು. ನೀವು ಗಮನಿಸಿ ನೋಡಿ; ವೀರೇಂದ್ರ ಪಾಟೀಲರು ಮತ್ತು ಎಸ್ ಎಂ ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಉತ್ತಮ ತೆರಿಗೆ ಮೂಲಗಳಾಗಿರುವ ಇಲಾಖೆಗಳು ಸಂಗ್ರಹಿಸಿದ ತೆರಿಗೆ ಅತೀಹೆಚ್ಚು !
ಎಸ್ ಎಂ ಕೃಷ್ಣ ಅವರು ಮದ್ಯದ ಲಾಬಿಯ ಸೊಕ್ಕನ್ನು ಶೇಕಡ ೭೫ರಷ್ಟು ಮುರಿದರು. ಉಳಿದ ಶೇಕಡ 25ರಷ್ಟು ಸೊಕ್ಕನ್ನು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮಟ್ಟ ಹಾಕಿದರು. ಇದು ಹೇಗೆಂದು ಮುಂದೆ ವಿವರಿಸುತ್ತೇನೆ.
ಕುಮಾರ ರೈತ