ಕನ್ನಡಿಗರು ಸಾಮರಸ್ಯ – ಸೌಹಾರ್ದ ಪ್ರಿಯರು. ಕನ್ನಡ ಎಂಬುದು ಬರೀ ಭಾಷೆ ಮಾತ್ರ ಅಲ್ಲ ಅದೊಂದು ಸಂಸ್ಕೃತಿ – ನಾಗರೀಕತೆ. ನಮ್ಮ ರಾಜ್ಯಕ್ಕೆ ಬಂದ ನೆರೆರಾಜ್ಯ, ಹೊರದೇಶಗಳವರನ್ನು ಅತಿಥಿದೇವೋಭಾವ ಎಂದೇ ನೋಡುತ್ತೇವೆ. ಅವರ ಹಬ್ಬ – ಹರಿದಿನ, ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಪಾಲ್ಗೊಳ್ಳುತ್ತೇವೆ.
ಕೇರಳ ರಾಜ್ಯದವರು ಚೆಂಗಮ್‌ ತಿಂಗಳು ( ಆಗಸ್ಟ್ – ಸೆಪ್ಟೆಂಬರ್ನಲ್ಲಿ ಓಣಂ ಆಚರಿಸುತ್ತಾರೆ. ಚಕ್ರವರ್ತಿ ಮಹಾಬಲಿ ಭುಲೋಕಕ್ಕೆ ಬಂದ ಸಂಭ್ರಮದ ಅಂಗವಾಗಿ ಮಹಾಹಬ್ಬವನ್ನೇ ಮಾಡುತ್ತಾರೆ. ಕೇರಳದವರು ಯಾವುದೇ ರಾಜ್ಯ – ದೇಶದಲ್ಲಿರಲ್ಲಿ, ಇದನ್ನು ಆಚರಿಸುತ್ತಾರೆ. ಇಬ್ಬರೇ ಇಬ್ಬರು ಇದ್ದರೂ ಕೂಡ ಮಾಡುತ್ತಾರೆ. ಕರ್ನಾಟಕದ ಶಾಲಾ-ಕಾಲೇಜು, ವಿವಿಧ ಉದ್ಯೋಗ ಸಂಸ್ಥೆಗಳಲ್ಲಿ ಇರುವವರೂ ಪ್ರವೇಶ ದ್ವಾರದಲ್ಲಿ ಬಹುದೊಡ್ಡ ಪುಷ್ಪ ರಂಗವಲಿ ಪೂಕ್ಕಳಂ ರಚಿಸುತ್ತಾರೆ. ಕನ್ನಡಿಗರು ನಾವು ಕೂಡ ಅವರ ಜೊತೆ ಪಾಲ್ಗೊಂಡು ಪೂಕ್ಕಳಂ ಮುಂದೆ ಪೋಟೋ ತೆಗೆಸಿಕೊಂಡು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತೇವೆ.
ಓಣಂ ಸಂದರ್ಭದ ಪುಷ್ಪ ರಂಗವಲ್ಲಿ ಪೂಕ್ಕಳಮ್
ಇಂಥ ಸಂಭ್ರಮ – ಸೌಹಾರ್ದತೆ – ಸಾಮರಸ್ಯ ಖಂಡಿತ ಅವಶ್ಯಕ ಅದರಲ್ಲಿ ಎರಡು ಮಾತಿಲ್ಲ. ಇದೇ ಮಾದರಿಯನ್ನು ನಾವು ಅವರಿಂದಲೂ ನಿರೀಕ್ಷಿಸಿದರೆ ತಪ್ಪಿಲ್ಲ ಅಲ್ಲವೇ. ಆದರೆ ನೆನಪಿರಲಿ ಕನ್ನಡ ನೆಲ ಕಾಸರಗೋಡಿನಲ್ಲಿ ಅವರಿಂದ ಇಂಥ ನಡೆ ಇಲ್ಲ.
ಕನ್ನಡಿಗರ ನಾಡಹಬ್ಬ ದಸರಾ. ಇದು ಬರೀ ಧಾರ್ಮಿಕ ಹಬ್ಬವಲ್ಲ. ಸಾಂಸ್ಕೃತಿಕ – ಜ್ಞಾನದ ಹಬ್ಬ. ವಿವಿಧ ಕಲೆಗಳು ಮೆಳೈಸಿ ಕಂಗೊಳಿಸುತ್ತವೆ. ಇದು ಕಲಾ ಜಾತ್ರೆಯೂ ಹೌದು. ನಾವು ಎಲ್ಲಿರುತ್ತೇವೆಯೋ ಅಲ್ಲಿ ಇದನ್ನು ಆಚರಿಸಿ ಸಂಭ್ರಮಿಸುತ್ತೇವೆ. ಕನ್ನಡ ನೆಲ ಕಾಸರಗೋಡಿನಲ್ಲಿಯೂ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಆದರೆ ಶಾಲಾ – ಕಾಲೇಜುಗಳಲ್ಲಿ ಕನ್ನಡ ವಿದ್ಯಾರ್ಥಿಗಳು ದಸರಾ ಆಚರಿಸಲು ಅಲ್ಲಿನ ಸರಕಾರ ಅವಕಾಶ ನೀಡುವುದಿಲ್ಲ. ಇದರ ಬಗ್ಗೆ ಸಂಬಂಧಪಟ್ಟವರಿಗೆಲ್ಲ ಮನವಿ ಮೇಲೆ ಮನವಿ ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಸತತ ಪ್ರಯತ್ನ, ಒತ್ತಡಗಳ ನಂತರ ಜಿಲ್ಲಾ ಭಾಷಾ ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದರು. ಈ ನಂತರವೂ ಇದು ಜಾರಿಗೆ ಬಂದಿರಲಿಲ್ಲ.‌
ಕಾಸರಗೋಡು ಶಿಕ್ಷಣ ಇಲಾಖೆಯ ಡಿಡಿಪಿಐ ಏನೋ ಭಾರೀ ಉಪಕಾರ ಮಾಡುವವರ ಹಾಗೆ ೨೦೧೮ರಲ್ಲಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ದಸರಾ ಹಬ್ಬ ಆಚರಿಸಬಹುದು ಎಂದು ಆದೇಶ ಹೊರಡಿಸಿದ್ದರು. ಶಿಕ್ಷಕರು – ವಿದ್ಯಾರ್ಥಿಗಳು ದಸರಾವನ್ನು ಆಚರಿಸಲು ಖುಷಿಖುಷಿಯಿಂದ ಸಿದ್ಧತೆ ಆರಂಭಿಸಿದ ನಾಲ್ಲೇ ದಿನದಲ್ಲಿ ಮತ್ತೊಂದು ಆದೇಶ ಬಂತು. ದಸರಾ ಆಚರಣೆಗೆ ಅವಕಾಶ ನಿರಾಕರಿಸಲಾಗಿದೆ ಎಂದು. ನೋಡಿ ನಮ್ಮ ನೆಲದಲ್ಲಿ ನಮ್ಮ ಹಬ್ಬ ಆಚರಿಸಲು ಅವರ ಅಡ್ಡಿ.
ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆ ಯಕ್ಷಗಾನ
ಹೀಗೇಕೆ ಆಯಿತು ಎಂದು ವಿಚಾರಿಸಿದರೆ “ಅಲ್ಲಿನ ಆಡಳಿತ ಪಕ್ಷಕ್ಕೆ ನಿಷ್ಠೆ ಹೊಂದಿರುವ ಅಧ್ಯಾಪಕರ ಸಂಘದ ಮಲೆಯಾಳಿ ಶಿಕ್ಷಕರು, ಕನ್ನಡಿಗರು ದಸರಾ ಆಚರಣೆ ಮಾಡುವ ಕುರಿತು ಆಕ್ಷೇಪಿಸಿ ದೂರು ಸಲ್ಲಿಸಿದ್ದರು, ಇದಲ್ಲದೇ ಕೆಲವು ಭಾಷಾ ದೂರಭಿಮಾನಿಗಳು ಸಹ ಅಲ್ಲಿನ ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು” ಎಂದು ಸ್ಥಳೀಯ ಕನ್ನಡಿಗರು ಅಳಲು ತೋಡಿಕೊಳ್ಳುತ್ತಾರೆ.  ಕೇರಳ ಸರಕಾರ ಒಂದು ಕಡೆ ಭಾಷಾ ರಾಜಕೀಯ ಮಾಡುತ್ತಾ ಕನ್ನಡವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ವಲಸೆ ಬಂದ ಕೇರಳಿಗರು ಮೂಲ ನಿವಾಸಿಗಳು ಮಾಡುವ ಸಾಂಸ್ಕೃತಿಕ ಆಚರಣೆಗಳಿಗೂ ಅಡ್ಡಿಯಾಗುತ್ತಿದ್ದಾರೆ. ಹೀಗಾದರೆ ಕನ್ನಡಿಗರು ನೆಮ್ಮದಿಯಾಗಿ ಇರುವುದಾದರೂ ಹೇಗೆ ?
ಹೀಗಾದರೆ ಅಲ್ಲಿನ ಕನ್ನಡ ಶಿಕ್ಷಕರು, ವಿದ್ಯಾರ್ಥಿಗಳ ಮನಸ್ಥಿತಿ ಏನಾಗಿರಬೇಡ. ಸಿದ್ಧತೆ ಆರಂಭಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಮಾನಸಿಕ ಆಘಾತ ಆಗಿರುವುದಿಲ್ಲವೇ ? ಬೆಳೆಯುವ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಕನ್ನಡ ಶಾಲೆಗಳಲ್ಲಿ ಮಲೆಯಾಳ ಕಡ್ಡಾಯ, ಕನ್ನಡದಲ್ಲಿ ಪಠ್ಯ ವಿಷಯ ಬೋಧಿಸಬೇಕಾದೆಡೆ ಮಲೆಯಾಳಿ ಶಿಕ್ಷಕರ ನೇಮಕ, ನಮ್ಮ ನೆಲದಲ್ಲಿ ನಮ್ಮ ಹಬ್ಬ ಆಚರಿಸಲು ನಿರಾಕರಣೆ.. ಈ ಅನ್ಯಾಯಗಳಿಗೆ ಮಿತಿ ಇಲ್ಲವೇ.. ಇದನ್ನೆಲ್ಲ ಕನ್ನಡಿಗರು ನೋಡಿಕೊಂಡು ಸುಮ್ಮನಿದ್ದೇವೆ ಎಂದರೆ ಏನರ್ಥ ? ಸಾಮರಸ್ಯ – ಸೌಹಾರ್ದತೆ ಏಕಮುಖಿಯಾಗಿದ್ದಾರೆ ಪ್ರಯೋಜನವಾದರೂ ಏನು ?
ಮೊದಲಿನ ಸಾಂಧರ್ಭಿಕ ಚಿತ್ರ: ಕರಾವಳಿ ಕರ್ನಾಟಕದ ಜನಪ್ರಿಯ ಕಲಾ ಮಾಧ್ಯಮ ಪುಲಿವೇಷ
Similar Posts

1 Comment

  1. ಕನ್ನಡಿಗರ ಹೃದಯವೈಶಾಲ್ಯ ಇತರೆ ರಾಜ್ಯಗಳ ಹಬ್ಬಗಳನ್ನು ಆಚರಿಸುವಂತೆ ಮಾಡುತ್ತದೆ. ಇದನ್ನು ಇನ್ನೊಂದು ರಾಜ್ಯದಿಂದ ನಿರೀಕ್ಷಿಸುವುದು ತಪ್ಪಲ್ಲ. ಅವರ ಸಂಕುಚಿತ ಮನಸ್ಥಿತಿ ಕನ್ನಡಿಗರು ಮತ್ತು ಮಕ್ಕಳನ್ನು ನಿರಾಶಾದಾಯಕತೆಯೆಡೆಗೆ ಈಡು ಮಾಡುತ್ತದೆ. ಅತ್ಯುತ್ತಮ ಲೇಖನಗಳು/ಬರಹಗಳು ಕನ್ನಡದ ಜನಸ್ಪಂದನೆಗೆ ಹಿಡಿದ ಕನ್ನಡಿ.

Leave a Reply

Your email address will not be published. Required fields are marked *