ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಕರ್ನಾಟಕದ ರಾಷ್ಟ್ರಕವಿ ಗೋವಿಂದ ಪೈಗಳ ಕಾವ್ಯದ ಸಾಲುಗಳನ್ನು ವಾಚಿಸಿದರು ” ನಾವು ನೀವೆಂಬ ಹಳೆಬೇರು ಅಳಿಸು, ಸರಿಸಮಾನ ಸೌಂದರ್ಯದಿ ಸೌಹಾರ್ದದಿ ಐಕ್ಯತೆಯಿಂದ ಐಕ್ಯಮಂತ್ರದಿ ಬಾಳುವುದೇ ತಾಯಿ ಇಳೆಯ ಹೆಬ್ವಯಕೆಯ ಮರ್ಮ” ಹೀಗೆ ಹೇಳುವ ಮೂಲಕ ಕರುನಾಡಿನ ಸಾಮರಸ್ಯದ ಮಂತ್ರ ಸಾರಿದರು. ಮತ ಸೌಹಾರ್ದ ಕಾಯ್ದುಕೊಳ್ಳುವಲ್ಲಿ ಕವಿಗಳ ಕಾವ್ಯದ ಸಾಲುಗಳು ಅಭಿಮಾನ ಮೂಡಿಸುತ್ತವೆ ಎಂದರು. ಇದರೊಂದಿಗೆ ಕಾಕಾ ಕಾಲೇಲ್ಕರ್ ಅವರ ಮೂಲಕ ಕನ್ನಡಕವಿ ಗೋವಿಂದ ಪೈ ಅವರು ಗಾಂಧೀಜಿ ಅವರಿಗೆ ನೀಡಿದ ‘ಊರುಗೋಲ’ನ್ನು ನೆನಪಿಸಿದರು.

ಗೋವಿಂದ ಪೈ ಅವರ ಕಾವ್ಯದ ಸಾಲು ಉಲ್ಲೇಖಿಸುವ ಮುನ್ನ ಅವರು ಹೇಳಿದ್ದು ಹೀಗೆ “ಕೇರಳ -ಕರ್ನಾಟಕ ಗಡಿ ಪ್ರದೇಶ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ನಮ್ಮದು ವೈವಿಧ್ಯ ಭಾಷೆ – ಸಂಸ್ಕೃತಿ – ಕಲೆಗಳ ನಾಡು.  ಕನ್ನಡ ರಾಷ್ಟ್ರಕವಿ ಗೋವಿಂದ ಪೈ ಇದ್ದ ನಾಡು ನನ್ನದು. ಇವರು ಬರೆದ ʼಹೆಬ್ಬೆರಳುʼ ನಾಟಕದ ಕವನದ ಸಾಲನ್ನು ಉಲ್ಲೇಖಿಸುತ್ತೇನೆ”ಇದನ್ನು ಹೇಳುವಾಗ ಅಶ್ರಫ್ ಭಾವುಕರಾಗಿದ್ದರು.

 
ಗೋವಿಂದ ಪೈ ಅವರು ಕರುನಾಡಿನ ಮೊದಲ ರಾಷ್ಟ್ರಕವಿ. ಮಂಜೇಶ್ವರ ಅವರ ಹುಟ್ಟೂರು. ದುರ್ದೈವ ಅದು ಕೇರಳಕ್ಕೆ ಸೇರಿಹೋಗಿದೆ. ಇಲ್ಲಿಯ ಕನ್ನಡಿಗರನ್ನು ಪ್ರತಿನಿಧಿಸುವ ಶಾಸಕ ಎಕೆಎಂ‌. ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂಲಕ ತಾನು ಕನ್ನಡಕ್ಕಾಗಿ ಧ್ವನಿ ಎತ್ತುತ್ತೇನೆ ಎಂದು ಭರವಸೆ ಮೂಡಿಸಿದ್ದರು.
 
ಈ ಬಾರಿಯ ಕೇರಳ ರಾಜ್ಯ ವಿಧಾನಸಭೆ ಚುನಾವಣೆ ನಡೆದ ನಂತರದ ಮೊದಲ ಅಧಿವೇಶನದಲ್ಲಿ ತಮ್ಮ ಕ್ಷೇತ್ರದ ಕುರಿತು ಮಾತನಾಡುವಾಗ ಗೋವಿಂದ ಪೈ ಅವರ ಹೆಬ್ಬೆರಳು ನಾಟಕದಿಂದ ಆಯ್ದ ಕಾವ್ಯದ ಸಾಲುಗಳನ್ನು ಉಲ್ಲೇಖಿಸಿದ್ದು ಸೂಕ್ತವಾಗಿದೆ.
ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಪಕ ರತ್ನಾಕರ ಮಲ್ಲಮೂಲೆ ನನ್ನ ಗೆಳೆಯ, ಸಮಾನಮನಸ್ಕ. ಮಂಜೇಶ್ವೆರ ಶಾಸಕ ಎಕೆಎಂ. ಅಶ್ರಫ್‌ ಇವರ ಸಹಪಾಠಿ ಮತ್ತು ಗೆಳೆಯ. ತಮ್ಮ ಸ್ನೇಹಿತನ ಕನ್ನಡಾಭಿಮಾನದ ಬಗ್ಗೆ ಇವರು ಹೇಳುವುದು ಹೀಗೆ  “ಕೇರಳ ವಿಧಾನಸಭೆಯಲ್ಲಿ, ಮಿತ್ರ ಶ್ರೀ ಅಶ್ರಫ್ ಅವರ ಮೊದಲ ಎರಡು ನಡೆ, ಅವರ ಕನ್ನಡದ ಪ್ರೀತಿಯನ್ನು ಕಾಳಜಿಯನ್ನು ತೋರಿಸಿದೆ. ನಾಳೆಯ ಇಲ್ಲಿನ ಕನ್ನಡಕ್ಕೆ ಉಸಿರಾಗಿರುವ ಕನ್ನಡ ಮಾಧ್ಯಮ ಶಾಲೆಗಳು ಬಲಪಡೆಯಲು, ಇಲ್ಲಿನ ಪದವೀಧರರಾದ ಅದೆಷ್ಟೋ ಕನ್ನಡ ಯುವಕ ಯುವತಿಯರ ಭವಿಷ್ಯ ಉಜ್ವಲವಾಗಲು  ಆಗಬೇಕಾದ ಕೆಲಸಕಾರ್ಯಗಳಿವೆ. ನೆನೆಗುದಿಗೆ ಬಿದ್ದಿರುವ ಅದೆಷ್ಟೊ ಕನ್ನಡದ  ಕಡತಗಳಿಗೆ, ಆದೇಶಗಳಿಗೆ ಜೀವಬರಬೇಕಾಗಿದೆ. ಇಂತಹ ಕ್ರಿಯಾತ್ಮಕ ಕನ್ನಡ ಕೆಲಸ ಕಾರ್ಯ ನೂತನ ಶಾಸಕರಿಂದ ಆಗಬೇಕಾಗಿದೆ. ಆಗುತ್ತದೆ ಎಂಬ ನಂಬಿಕೆ ನಮ್ಮದು. ಕಾಕಾ ಕಾಲೇಲ್ಕರ್ ಅವರ ಮೂಲಕ ಪೈಯವರು ಗಾಂಧೀಜಿಯವರಿಗೆ ನೀಡಿದ ‘ಊರುಗೋಲ’ನ್ನು  ನೆನಪಿಸಿದ್ದು, ಪೈ ಅವರ ‘ಹೆಬ್ಬೆರಳು’ ನಾಟಕದ ಕಾವ್ಯಾತ್ಮಕ ಸಾಲುಗಳನ್ನು ಹೇಳಿದ್ದು ಔಚಿತ್ಯಪೂರ್ಣ.
ಕಾವ್ಯ ಎಲ್ಲಿ ನುಡಿಯುತ್ತದೆ ಅಲ್ಲಿ ಆ ಕವಿ ಅವತರಿಸುತ್ತಾನೆ ಎಂಬ ಮಾತಿದೆ.ಕೇಳಿಸಿದ ಕಾವ್ಯದ ಮೂಲಕ ಮಲೆಯಾಳಂಮಯ ಕೇರಳ ವಿಧಾನಸಭೆಯಲ್ಲಿ ಕನ್ನಡಕವಿ ಗೋವಿಂದ ಪೈ ಅವತರಿಸಿದರು. ಇದಕ್ಕಾಗಿ ಶಾಸಕ ಅಶ್ರಫ್ ಅವರಿಗೆ ಅಭಿನಂದನೆ ಹೇಳೋಣ ಅಲ್ಲವೇ …
Similar Posts

Leave a Reply

Your email address will not be published. Required fields are marked *