ಭಾರತೀಯರಿಗೆ ಅಭಿವೃದ್ಧಿ ಬೇಕಾಗಿದೆ…. ಎಲ್ಲ ಸಂದರ್ಭಗಳಲ್ಲಿಯೂ ಧರ್ಮರಾಜಕಾರಣವನ್ನೇ ಮುಂದಿಟ್ಟುಕೊಂಡು ಹೋಗಲಾಗುವುದಿಲ್ಲ. ಇದನ್ನು ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಉಪಚುನಾವಣೆಗಳು ಸಾಬೀತುಪಡಿಸಿವೆ. ಇತ್ತೀಚೆಗಷ್ಟೆ ಈಶಾನ್ಯದ ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಬಿಜೆಪಿಗೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಬಿಜೆಪಿ ಪಠಿಸಿದ್ದು ಅಭಿವೃದ್ಧಿ ಮಂತ್ರ. ಇದರ ಜೊತೆಗೆ ವ್ಯವಸ್ಥಿತವಾದ ರಾಜಕೀಯ ತಂತ್ರ, ನಡೆಗಳು ಮತ್ತು ಕಾರ್ಯಕರ್ತರ ಅಸಾಧಾರಣ ಪರಿಶ್ರಮ ಗದ್ದುಗೆಯಲ್ಲಿ ಕೂರುವಂತೆ ಮಾಡಿತ್ತು. ಆದರೆ ಒಂದು ವರ್ಷದ ಹಿಂದೆ ಉತ್ತರಪ್ರದೇಶದಲ್ಲಿ ಇದೇ ಅಂಶಗಳನ್ನಿಟ್ಟುಕೊಂಡಿದ್ದರೂ ಅಲ್ಲಿ ಹಿಂದುತ್ವದ ಅಜೆಂಡಾವೇ ಪ್ರಮುಖವಾಗಿತ್ತು.

ಕೇವಲ ಒಂದೇ ವರ್ಷದಲ್ಲಿ ಉತ್ತರಪ್ರದೇಶದ ಪರಿಸ್ಥಿತಿ ಬದಲಾಗಿದೆ. ಯೋಗಿ ಆದಿತ್ಯನಾಥರು ಅಭಿವೃದ್ಧಿಯ ಹೊಸಶಕೆಯನ್ನೇ ಶುರು ಮಾಡುತ್ತಾರೆಂದು ಆಶಿಸಿದ್ದ ಸಾಮಾನ್ಯ ಜನತೆಗೆ ಭ್ರಮನಿರಸನವಾಗಿದೆ. ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳಲ್ಲಿ ಅತಿಯಾದ ಭ್ರಷ್ಟಚಾರ, ಅಲಕ್ಷ್ಯ ಅವರನ್ನು ಕಂಗೆಡಿಸಿದೆ. ಅವರ ಆಕ್ರೋಶ ಉಪಚುನಾವಣೆಯ ಫಲಿತಾಂಶದಲ್ಲಿ ಬಿಂಬಿತವಾಗಿದೆ.

ಉಪಚುನಾವಣೆ ನಡೆದಿದ್ದು ಸಾಧಾರಣ ಕ್ಷೇತ್ರಗಳಲ್ಲ. ಉತ್ತರಪ್ರದೇಶ ಸರ್ಕಾರದ ಬಂಡಿಯ ನೊಗಕ್ಕೆ ಹೆಗಲುಕೊಟ್ಟ ಇಬ್ಬರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕ್ಷೇತ್ರಗಳು ಎಂಬುದು ಬಹು ಗಮನಾರ್ಹ ಅಂಶ. ಇವರಿಬ್ಬರಲ್ಲದೇ ಬೇರೆ ಯಾರೇ ಆಗಿದ್ದರೂ ಅಲ್ಲಿನ ಫಲಿತಾಂಶ ಈ ಪರಿಯ ಗಮನವನ್ನು ಸೆಳೆಯುತ್ತಿರಲಿಲ್ಲ.

ಗೋರಖಪುರ ಲೋಕಸಭಾ ಕ್ಷೇತ್ರವನ್ನು ಯೋಗಿ ಆದಿತ್ಯನಾಥ ಒಂದಲ್ಲ, ಎರಡಲ್ಲ ಸತತ ಐದು ಬಾರಿ ಪ್ರತಿನಿಧಿಸಿದ್ದರು. ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬಂಥ ವಾತಾವರಣ ನಿರ್ಮಾಣವಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ, ಹಾಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪೂಲ್ ಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದರು.

ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವಿಗಾಗಿ ಶ್ರಮಿಸಿದ್ದ ಇವರಿಬ್ಬರಿಗೂ ಪ್ರಮುಖ ಅಧಿಕಾರಗಳೇ ಒಲಿದಿದ್ದವು. ರಾಜ್ಯವನ್ನೇ ಮುನ್ನಡೆಸುವ ಗದ್ದುಗೆಯಲ್ಲಿ ಕುಳಿತರೂ ಕೇವಲ ಒಂದೇ ವರ್ಷದಲ್ಲಿ ಇವರಿಬ್ಬರ ವರ್ಚಸ್ಸು ಕ್ಷೀಣಿಸಿದೆ ಎಂಬುದಕ್ಕೆ ಉಪಚುನಾವಣೆ ಸಾಕ್ಷಿಯಾಗಿದೆ.  ಗೋರಖಪುರದಲ್ಲಿ ಬಿಜೆಪಿಯ ಉಪೇಂದ್ರ ದತ್ ಶುಕ್ರಾ ಮತ್ತು ಪೂಲ್ ಪುರ ಕ್ಷೇತ್ರದಲ್ಲಿ ಕೌಶಲೇಂದ್ರ ಸಿಂಗ್ ಭಾರಿ ಪರಾಭವ ಅನುಭವಿಸಿದ್ದಾರೆ.

ಯೋಗಿ ಆದಿತ್ಯನಾಥ, ಕೇಶವ ಪ್ರಸಾದ್ ಮೌರ್ಯ ಅವರುಗಳ ವರ್ಚಸ್ಸು ತಮ್ಮನ್ನು ಗೆಲುವಿನ ದಡ ಸೇರಿಸುತ್ತದೆ ಎಂದೇ ಇವರಿಬ್ಬರು ನಂಬಿಕೊಂಡಿದ್ದರು. ರಾಜ್ಯ ಮತ್ತು ರಾಷ್ಟ್ರ ಬಿಜೆಪಿಯ ಘಟಕಗಳು ಇದೇ ಅಂಶವನ್ನೇ ನೆಚ್ಚಿಕೊಂಡಿದ್ದವು. ಆದರೆ ಈ ಅಂಶಗಳು ಬಿಜೆಪಿಯಲ್ಲಿ ಗೆಲುವಿನ ನಗೆ ಬೀರಿಸಲು ವಿಫಲವಾಗಿವೆ. ಇದರಿಂದಲೇ ಈ ಪಕ್ಷದ ಪ್ರಮುಖ ನಾಯಕರು ಕಂಗೆಟ್ಟಿದ್ದಾರೆ.

ಕೇವಲ ಒಂದು ವರ್ಷದ ಹಿಂದೆ ಸೋಲಿನ ಭಾರಿ ಕಹಿ ಉಂಡಿದ್ದ ಸಮಾಜವಾದಿ ಪಾರ್ಟಿ ಮತ್ತು ಬಿಎಸ್ಪಿ ಈ ಬಾರಿ ಗೆಲುವಿನ ನಗೆ ಬೀರಲು ಚುನಾವಣಾ ಮೈತ್ರಿಯೇ ಕಾರಣವಾಯಿತೇ…. ? ಇದು ಅರ್ಧಸತ್ಯ ಮಾತ್ರ. ಈ ಅಂಶಗಳು ಮತಗಳ ವಿಭಜನೆಯನ್ನು ಸಾಕಷ್ಟು ತಪ್ಪಿಸಿ  ಗೋರಕಪುರದಲ್ಲಿ ಎಸ್.ಪಿ.ಯ ಪ್ರವೀಣ್ ನಿಶಾದ್, ಪೂಲ್ ಪುರ ಕ್ಷೇತ್ರದಲ್ಲಿ ಇದೇ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಅವರಿಗೆ ವಿಜಯ ತಂದುಕೊಡುವಲ್ಲಿ ಸಫಲವಾಗಿವೆ.

ಆದರೆ ಚುನಾವಣಾ ಮೈತ್ರಿ ಜೊತೆಗೆ ಕೇವಲ ಒಂದೇ ವರ್ಷದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರದ ವಿಫಲ ಆಡಳಿತ, ಜನತೆಯಲ್ಲಿ ನಿರಾಶೆ ಮೂಡಿಸಿದೆ. ಇದು ಎಸ್.ಪಿ.ಯ ಗೆಲುವಿಗೆ ಕಾರಣವಾಗಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಭಾರಿ ಗೆಲುವಿನಿಂದ ಬೀಗುತ್ತಿದ್ದ ಬಿಜೆಪಿಗೆ ಇದು ಅತಿಂಥ ಹೊಡೆತವಲ್ಲ.

ಬಿಹಾರದಲ್ಲಿಯೂ ಉಪಚುನಾವಣೆ ಫಲಿತಾಂಶ, ಬಿಜೆಪಿ ಇಳಿಮುಖ ಹಾಕಿಕೊಳ್ಳುವಂತೆ ಮಾಡಿದೆ. ಅಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದಿರುವ ಜೆಡಿಯುನ ಪ್ರಮುಖ ನಾಯಕ ನಿತೀಶ್ ಕುಮಾರ್ ಮತ್ತು ಬಿಜೆಪಿ ನಡುವಣಾ ಮೈತ್ರಿಯೂ ವಿಫಲವಾಗಿದೆ. ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಆರ್.ಜೆ.ಡಿ.ಯ ಸರ್ಫರಾಜ್ ಗೆಲುವಿನ ಮುಗುಳ್ನಗೆ ಬೀರಿದ್ದಾರೆ. ಅಲ್ಲಿ ಇದೇ ಸಂದರ್ಭದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ.

ಭಭುವಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಂಭು ಸಿಂಗ್ ಪಟೇಲ್ ಅವರ ವಿರುದ್ಧ ಬಿಜೆಪಿಯ ರಿಂಕಿರಾಣಿ ಪಾಂಡೆ ವಿಜಯ ಸಾಧಿಸಿದ್ದಾರೆ. ಕಳೆದ ಬಾರಿ ಜೆಹನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದಆರ್.ಜೆ.ಡಿ. ಈ ಬಾರಿಯೂ ಆ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಫಲವಾಗಿದೆ. ಈ ಸೋಲುಗಳು ಪ್ರಮುಖವಾಗಿ ಜೆಡಿಯುವಿಗೆ ಮತ್ತು ಅದರ ನಾಯಕ ನಿತೀಶ್ ಕುಮಾರ್ ಗೆ ದೊಡ್ಡ ಪೆಟ್ಟನ್ನೇ ನೀಡಿವೆ.

 

ಈ ಉಪ ಚುನಾವಣೆಗಳಲ್ಲಿ ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಏಕೆ ಹೀಗಾಯಿತು, ಹೀಗಾಗುತ್ತಿದೆ ಎಂಬುದರ ಬಗ್ಗೆ ಅಲ್ಲಿನ ರಾಜ್ಯ ಘಟಕ ಚಿಂತಿಸಿದಂತೆ ಕಾಣುವುದಿಲ್ಲ. ನಾಯಕರುಗಳ ಸಂಯೋಜಿತ ಹೋರಾಟವೇ ಇಂಥ ಸೋಲಿಗೆ ಪ್ರಮುಖ ಕಾರಣ ಎಂಬುದನ್ನು ಆ ಪಕ್ಷ ನಿರಾಕರಿಸಲು ಆಗುವುದಿಲ್ಲ.

ಉತ್ತರ ಪ್ರದೇಶದ ಉಪಚುನಾವಣೆ ದೂರದ ಕರ್ನಾಟಕದ ಮೇಲೂ ಪ್ರಭಾವ ಬೀರಿದೆ.  ಬಹುಶಃ ಇಲ್ಲಿನ ಬಿಜೆಪಿ ಘಟಕ ಮತ್ತೆ ಚುನಾವಣಾ ಪ್ರಚಾರಕ್ಕಾಗಿ ಯೋಗಿ ಆದಿತ್ಯನಾಥರನ್ನು ಕರೆಯಿಸುವುದು ಅನುಮಾನದ ಸಂಗತಿ.

Similar Posts

Leave a Reply

Your email address will not be published. Required fields are marked *