ಅರುಣಾಚಲ ಪ್ರದೇಶದ ತುಲಾಂಗ್ ಲಾ ಪ್ರದೇಶದಲ್ಲಿ 1975ರಲ್ಲಿ ಭಾರತೀಯರ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಇದರ ದುಷ್ಪರಿಣಾಮ ನಾಲ್ವರು ಭಾರತೀಯ ಸೈನಿಕರು ಜೀವ ತೆತ್ತಿದ್ದರು. ರಾಜಕೀಯ ಮಾರ್ಗದ ಮಾತುಕತೆಗಳಿಂದಾಗಿ ಘರ್ಷಣೆ ಮುಂದುವರಿಯಲಿಲ್ಲ. ಇದಾಗಿ ಬರೋಬ್ಬರಿ 45 ವರ್ಷಗಳ ನಂತರ ಲಡಾಕ್ ಪ್ರಾಂತ್ಯದ ಗಾಲ್ವನ್ ಕಣಿವೆಗೆ ಅತಿಕ್ರಮವಾಗಿ ಪ್ರವೇಶಿಸಿ ಘರ್ಷಣೆಗಿಳಿದ ಚೀನಾ ಪಡೆ 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿದೆ. ಅತ್ತಲೂ ಸಾವುನೋವುಗಳಾಗಿವೆ ಎಂದು ಹೇಳಲಾಗಿದ್ದರೂ ಅದರ ವಿಶ್ವಾಸಾರ್ಹತೆ ಪ್ರಶ್ನಾರ್ಹ.
ಗಡಿಯಲ್ಲಿ ಚೈನಾವನ್ನು ಕೆರಳಿಸುವಂತ ಯಾವುದೇ ಚಟುವಟಿಕೆಯನ್ನೂ ಭಾರತ ನಡೆಸದಿದ್ದರೂ ಇಂಥ ಅಕ್ರಮಣಕಾರಿ ನಡವಳಿಗೆ ಕಾರಣವೇನು ಎಂಬುದು ಪ್ರಶ್ನೆಯಾಗಿದೆ. ಎರಡೂ ದೇಶಗಳ ವಾಸ್ತವ ಗಡಿರೇಖೆಯಲ್ಲಿ ತನ್ನ ಸೈನ್ಯ ಜಮಾಯಿಸಿ ಉದ್ವಿಗ್ನ ಸ್ಥತಿ ನಿರ್ಮಾಣ ಮಾಡಿದ್ದರೂ ಭಾರತ ದುಡುಕಿರಲಿಲ್ಲ, ರಾಜತಾಂತ್ರಿಕ ಮಾತುಕತೆಗಳ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ನಡೆಸಿತು ಎನ್ನುವುದನ್ನು ಗಮನದಲ್ಲಿಡಬೇಕು. ಈ ಮಾತುಕತೆ ಸಾಗಿರುವಾಗಲೇ ತಮ್ಮ ಕರ್ತವ್ಯವನ್ನು ಭಾರತೀಯ ಸೈನ್ಯದ ಪೆಟ್ರೋಲಿಂಗ್ ಪಡೆ ಪರಿಶೀಲನೆ ಮಾಡುತ್ತಿರುವಾಗಲೇ ದಾಳೆ ನಡೆದಿದೆ.
ಇದರ ಎಲ್ಲ ವಿವರಗಳು ನಿಚ್ಚಳವಾಗಿದ್ದರೂ ಚೀನಾ ಸರ್ಕಾರದ ವಕ್ತಾರರು ತಮ್ಮ ಪಡೆಗಳದ್ದು ಇದರಲ್ಲಿ ಏನೂ ತಪ್ಪಿಲ್ಲ. ಭಾರತೀಯ ಸೈನಿಕರೇ ಗಡಿ ಅತಿಕ್ರಮಿಸಿ, ದಾಳಿಗೆ ಮುಂದಾದರು ಎಂದು ಹಸಿಸುಳ್ಳು ಹೇಳಿದ್ದಾರೆ. ಇಂಥ ಲಜ್ಜೆಗೇಡಿತನದ ಹಸಿಸುಳ್ಳುಗಳನ್ನು ಹೇಳುತ್ತಿರುವುದು ಇದೇ ಮೊದಲಲ್ಲ. ಹಿಂದಿ – ಚೀನಿ ಭಾಯಿಭಾಯಿ ಎಂದು ಹೇಳುತ್ತಲೇ ಬೆನ್ನಿಗೆ ಚೂರಿ ಹಾಕಿದ ಕುಖ್ಯಾತಿ ಅದಕ್ಕಿದೆ.
ಕೊರೊನಾ ಭೀತಿ ನಡುವೆ ಇಂಥ ನಡೆಯೇಕೆ ?
ಇಡೀ ವಿಶ್ವವೇ ಕೊರೊನಾ ಸಾಂಕ್ರಮಿಕ ಸೋಂಕಿನಿಂದ ತತ್ತರಿಸಿದೆ. ಎರಡೂವರೆ ತಿಂಗಳಿಗೂ ಹೆಚ್ಚುಕಾಲದ ಲಾಕ್ಡೌನ್ ನಿಂದಾಗಿ ಬಹುತೇಕ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಆದರೆ ಚೈನಾದ ಆರ್ಥಿಕ ಪರಿಸ್ಥಿತಿಯಲ್ಲೇನೂ ವ್ಯತ್ಯಯವಾಗಿಲ್ಲ. ಅದರ ಜಿಡಿಪಿ ಕುಸಿದಿಲ್ಲ. ಯುರೋಪಿನ ಕೆಲಸ ಆರ್ಥಿಕ ಬಲಿಷ್ಠ ರಾಷ್ಟ್ರಗಳು ಸೇರಿದಂತೆ ಅಮೆರಿಕಾದ ಆರ್ಥಿಕತೆ ಕೂಡ ತತ್ತರಿಸಿವೆ. ಇಂಥ ಸಂದರ್ಭದಲ್ಲಿ ಭಾರತ ಲಾಕ್ಡೌನ್ ಸಡಿಲಗೊಳಿಸುತ್ತಾ ಸುಧಾರಿಸಿಕೊಳ್ಳಲು ಯತ್ನಿಸುತ್ತಿರುವಾಗಲೇ ಇಂಥ ಮಿಲಿಟರಿ ಆಘಾತ ಎದುರಾಗಿದೆ.


ಗಮನವನ್ನು ಬೇರೆಡೆ ತಿರುಗಿಸಲು ಯತ್ನವೇ ?
ಕೋವಿಡ್ – 19 ಪರಿಣಾಮವಾಗಿ ಹಲವು ರಾಷ್ಟ್ರಗಳಲ್ಲಿ ವಿಶೇಷವಾಗಿ ಇಟೆಲಿ – ಅಮೆರಿಕಾ ಬಳಲಿವೆ. ಗಣನೀಯ ಸಂಖ್ಯೆಯಲ್ಲಿ ಅಲ್ಲಿನ ಜನ ಸೋಂಕಿನ ಪರಿಣಾಮವಾಗಿ ಸಾವಿಗೀಡಾಗಿದ್ದಾರೆ. ಅನೇಕ ರಾಷ್ಟ್ರಗಳು ಸೂಕ್ತ ವೈದ್ಯಕೀ ವ್ಯವಸ್ಥೆಗಳನ್ನು ಕಲ್ಪಿಸಲು ಹೆಣಗುತ್ತಿವೆ. ಇಂಥ ದುಸ್ಥಿತಿ ನಿರ್ಮಾಣವಾಗಲು ಕಾರಣ ಚೀನಾದ ಬೇಜಾವಾಬ್ದಾರಿಯೇ ಕಾರಣ ಎಂಬ ಭಾವನೆ ಪ್ರಬಲವಾಗಿದೆ. ಅಮೆರಿಕಾದ ಅಧ್ಯಕ್ಷರು ಕೊರೊನಾ ವೈರಸ್ ಅನ್ನು ಪದೇಪದೇ ಚೈನಾ ವೈರಸ್ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇವೆಲ್ಲದರ ಪರಿಣಾಮ ಆತಂಕಗೊಂಡಿರುವ ಚೀನಾ ಜಗತ್ತಿನ ಗಮನ ಬೇರೆಡೆ ಸೆಳೆಯಲು ಅತಿಕ್ರಮಣಕಾರಿ ಕ್ರಮಕ್ಕೆ ಮುಂದಾಗಿರಬಹುದು.
ಭಾರತದ ಮಾರುಕಟ್ಟೆ ಕೈ ಜಾರುತ್ತಿದೆ ಎಂಬ ಆತಂಕವೇ
ಸ್ವದೇಶದಲ್ಲಿಯೇ ಅಗತ್ಯ ವಸ್ತುಗಳನ್ನು ತಯಾರಿಸುತ್ತಾ ಪರದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳುತ್ತಲೇ ಬಂದಿದ್ದಾರೆ. ಈ ದಿಶೆಯಲ್ಲಿ ಕೋವಿಡ್ – 19 ಸಂಬಂಧಿತ ಪಿಪಿಇ ಕಿಟ್ ಗಳು, ಎನ್ – ಮಾಸ್ಕ್ ಗಳು ಗಣನೀಯ ಸಂಖ್ಯೆಯಲ್ಲಿ ಭರದಿಂದ ತಯಾರಾಗುತ್ತಿವೆ. ಇದು ಮೊದಲು ಚೀನಾದಿಂದಲೇ ಆಮದಾಗುತ್ತಿತ್ತು. ನಿಧಾನವಾಗಿ ಅದರ ಅವಲಂಬನೆ ಕಡಿಮೆಯಾಗುತ್ತಿರುವುದು, ಸ್ಥಳೀಯವಾಗಿಯೇ ತಯಾರಿ ಎಂಬ ಘೋಷಣೆ ಪದೇಪದೇ ಮೊಳಗುತ್ತಿರುವುದು, ಇದೇ ಸ್ಥಿತಿ ಮುಂದುವರಿದರೆ ಭಾರತದಂಥ ಬಹುದೊಡ್ಡ ಮಾರುಕಟ್ಟೆ ತನ್ನ ಕೈತಪ್ಪಬಹುದು ಎಂಬ ಆತಂಕ ಕಾರಣವಾಗಿರಬಹುದು.
ಟ್ರಂಪ್ – ಮೋದಿ ಆಲಿಂಗನ ಹೆಚ್ಚಿದಷ್ಟೂ ಮುನಿಸು
ಭಾರತ – ಅಮೆರಿಕಾ ಸಂಬಂಧ ಬಲಗೊಂಡಿರುವುದು ಕೂಡ ಚೀನಾ ಮುನಿಸಿಗೆ ಪ್ರಬಲ ಕಾರಣ ಎಂಬುದಂತೂ ಬಲವಾದ ಕಾರಣ. ಹಿಂದೆ ರಷ್ಯಾ – ಅಮೆರಿಕಾ ನಡುವೆ ನಿರಂತರ ಶೀತಲ ಸಮರ ನಡೆಯುತ್ತಿತ್ತು. ರಷ್ಯಾದ ಗಣ ಒಕ್ಕೂಟ ಛಿದ್ರವಾದ ನಂತರ ಅಮೆರಿಕಾಕ್ಕೆ ವಿಶ್ವದಲ್ಲಿ ಸಮರ್ಥ ಎದುರಾಳಿ ರಾಷ್ಟ್ರವಿರಲಿಲ್ಲ. ಏಷ್ಯಾ ಖಂಡದಲ್ಲಿ ಚೀನಾ ಪ್ರಬಲವಾಗಿ ತಲೆಯೆತ್ತಿ ನಿಂತಿದ್ದು ಅದರ ಇರಿಸು – ಮುರಿಸಿಗೆ ಕಾರಣವಾಗಿದೆ. ಇದಲ್ಲದೇ ಚೈನಾದ ಉತ್ಪನ್ನಗಳು ಅಮೆರಿಕಾದಲ್ಲಿಯೂ ಗಣನೀಯ ಮಾರುಕಟ್ಟೆ ಕಂಡುಕೊಂಡಿವೆ. ಆರ್ಥಿಕವಾಗಿ – ಮಿಲಿಟರಿ ವಿಭಾಗಗಳಲ್ಲಿಯೂ ಚೀನಾ ಪ್ರಬಲವಾಗುತ್ತಿರುವುದು ದೊಡ್ಡಣ್ಣನಿಗೆ ಈರ್ಷ್ಯೆಯ ಸಂಗತಿ. ಇಂಥ ಪರಿಸ್ಥಿತಿಯಲ್ಲಿ ಭಾರತ – ಅಮೆರಿಕಾ ದೋಸ್ತಿ ಬಲಿಷ್ಠವಾಗಿರುವುದು ಚೀನಾ ಆತಂಕಕ್ಕೆ ಕಾರಣವಾಗಿದೆ. 2020ರ ಫೆಬ್ರವರಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದಲ್ಲಿ ಸಿಕ್ಕ ಸ್ವಾಗತ ಕಣ್ಣುರಿಯುಂಟು ಮಾಡಿದೆ. ಇದು ತನ್ನ ಸುಭದ್ರತೆಗೆ ಕಂಟಕವಾಗಬಹುದು ಎಂದು ಅದು ಭಾವಿಸಿದೆ. ಇದರ ಬಗ್ಗೆ ಎಚ್ಚರಿಕೆ ನೀಡಲು ಅತಿಕ್ರಮಣಕ್ಕೆ ಮುಂದಾಗಿರಬಹುದು.

ಯುದ್ಧವಾಗಬಹುದೇ ?
ಈ ಮೇಲಿನ ಮೂರು ಸಮ್ಮಿಶ್ರ ಕಾರಣದಿಂದಲೂ ಚೀನಾ ತನ್ನ ಪಡೆಗಳಿಗೆ ಗಾಲ್ವನ್ ಕಣಿವೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿರಬಹುದು. ಆದರೆ ಯುದ್ಧದಂಥ ಬಹುದೊಡ್ಡ ನಿರ್ಧಾರಕ್ಕೆ ಅದು ಮುಂದಾಗುವುದಿಲ್ಲ. ಬೆದರಿಕೆಯಷ್ಟೆ ಅದರ ತಂತ್ರವಾಗಿರಬಹುದು. ಏಕೆಂದರೆ ಭಾರತದಂಥ ದೊಡ್ಡ ಮಾರುಕಟ್ಟೆ ತನ್ನ ಹಿಡಿತದಿಂದ ಜಾರುವುದು ಅದಕ್ಕೆ ಇಷ್ಟವಿಲ್ಲ. ಬೆದರಿಸಿ ಮಣಿಸುವ ತಂತ್ರ ಮಾಡುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ “ ಭಾರತ ಶಾಂತಿ ಬಯಸುತ್ತದೆ. ಆದರೆ ಪ್ರಚೋದಿಸಿದರೆ ತಕ್ಕ ತಿರುಗೇಟು ನೀಡುತ್ತದೆ ಎಂದು ಹೇಳಿರುವುದು ಗಮನಾರ್ಹ.

ಚಿತ್ರಕೃಪೆ: ಅಂತರ್ಜಾಲ

ಮುಂದಿನ ಭಾಗದಲ್ಲಿ:
ಅತಿಕ್ರಮಣಕ್ಕೂ ಮುನ್ನ ಚೀನಾ ರಣವ್ಯೂಹ ಹೆಣೆದಿದೆಯೇ

Similar Posts

Leave a Reply

Your email address will not be published. Required fields are marked *