Site icon ಕುಮಾರರೈತ

ಜಮ್ತಾರ; ಬುದ್ದಿವಂತಿಕೆಯ ಮುಖವಾಡದ ದಡ್ಡರ ಅನಾವರಣ

ಕೆಲವು ವರ್ಷಗಳ ಹಿಂದೆ ರಾಜ್ಯವೊಂದರ ಪೊಲೀಸ್ ಮುಖ್ಯಸ್ಥರನ್ನೇ ಜಾಲವೊಂದು ವಂಚಿಸಿದ ಸುದ್ದಿ ಪ್ರಕಟವಾಗಿತ್ತು. ವಂಚಕರು ಕೇಳಿದ ಕಾರ್ಡ್ ವಿವರಗಳನ್ನೆಲ್ಲ ಕೊಟ್ಟ ಬಳಿಕ ಅವರ ಖಾತೆಯಿಂದ ಒಂದಷ್ಟು ಹಣ ಮಾಯವಾಗಿತ್ತು. ಈ ರೀತಿ ಮೋಸ ಹೋದವರು ಹೋಗುತ್ತಿರುವವರು ಗ್ರಾಮೀಣ ಪ್ರದೇಶದಲ್ಲಿರುವ ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ಗೊತ್ತಿಲ್ಲದ ಅಮಾಯಕರಲ್ಲ. ನಗರ ಪ್ರದೇಶಗಳಲ್ಲಿರುವ ಉದ್ಯೋಗಸ್ಥರು, ಗೃಹಿಣಿಯರು, ಕಲಾವಿದರು, ರಾಜಕಾರಣಿಗಳು, ಬುದ್ದಿವಂತರಂತೆ ಕಾಣುವ, ಹಾಗೆ ವರ್ತಿಸುವ ಇಂಥವರ ಅಸಲಿ ಬುದ್ದಿವಂತಿಕೆಯಷ್ಟು ಎಂಬುದನ್ನು “ಜಮ್ತಾರ” ಹಿಂದಿ ಧಾರವಾಹಿ ಹೇಳುತ್ತಾ, ಸಂಘಟಿತ ಜಾಲದ ಕೃತ್ಯಗಳನ್ನು ಬಯಲು ಮಾಡುತ್ತದೆ.
ವಂಚಿಸುವವರು ದೂರದ ದೇಶಗಳಲ್ಲಿ ಕುಳಿತು ಅಮೆರಿಕನ್ ಉಚ್ಛಾರದ ಇಂಗ್ಲಿಷ್ ಮಾತನಾಡುವವರಲ್ಲ ಅಥವಾ ಮಹಾನಗರಗಳ ಕ್ಯಾಬೀನ್ ಗಳಲ್ಲಿ ಕುಳಿತ ಮೇಧಾವಿ ಪದವೀಧರರೂ ಅಲ್ಲ, ಜಾರ್ಖಂಡ್ ರಾಜ್ಯದ ಜಮ್ತಾರ ಎಂಬ ಹಿಂದುಳಿದ ಜಿಲ್ಲೆಯ ಕಾಲೇಜು ಮೆಟ್ಟಿಲು ಹತ್ತದ ಹದಿಹರೆಯದ ಹುಡುಗರು. ಇವರ ವಿವರಗಳನ್ನು ನೋಡಿದರೆ ಇವರು ಹೀಗೆಲ್ಲ ಮೋಸ ಮಾಡಲು ಸಾಧ್ಯವಾಗುತ್ತದೆಯೇ ಎಂದು ಅಚ್ಚರಿಯಾಗುತ್ತದೆ.
ಕೇವಲ ಮೂರೇ ವರ್ಷದ ಹಿಂದೆ ಜಮ್ತಾರ ಆನ್ ಲೈನ್ ಬ್ಯಾಂಕಿಂಗ್ ವಂಚನೆಗೆ ಕುಪ್ರಸಿದ್ದಿಯಾಗಿತ್ತು. ಬಹುತೇಕ ರಾಜ್ಯಗಳ ಪೊಲೀಸರು ಇಲ್ಲಿಗೆ ತನಿಖೆಗಾಗಿ ಎಡತಾಕುತ್ತಲೇ ಇದ್ದರು. ಆದರೂ ವಂಚನೆಗೆ ಕಡಿವಾಣ ಹಾಕಲು ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ಇಲ್ಲಿಗೆ ನೇಮಕವಾಗುವ ಮಹಿಳಾ ಎಸ್.ಪಿ. ಜಯಾ ರಾಯ್ ಇಲ್ಲಿನ ವಂಚಕರ ಹೆಡೆಮುರಿ ಕಟ್ಟುತ್ತಾರೆ. ಅದೊಂದು ದೊಡ್ಡ ಸಾಹಸದ ಕಥೆ. ಇದನ್ನು ತ್ರಿಶಾಂತ್ ಶ್ರೀವಾತ್ಸವ್ ಅಚ್ಚುಕಟ್ಟಾದ ಚಿತ್ರಕಥೆಯಾಗಿಸಿದ್ದಾರೆ. ಇದನ್ನು ಆಧರಿಸಿದ ಧಾರವಾಹಿಯೇ “ಜಮ್ತಾರ”


ವಂಚಕರು – ರಾಜಕಾರಣಿಗಳು- ಪೊಲೀಸರು – ಪತ್ರಕರ್ತರು ಇವರುಗಳ ವ್ಯವಹಾರಿಕ ಸಂಬಂಧಗಳನ್ನು ಕೂಡ ಆವೇಶವಿಲ್ಲದೇ ಹೇಳುವ ಜಮ್ತಾರ, ನಗರ ಪ್ರದೇಶಗಳಲ್ಲಿ ಡಿಬಿಟ್/ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿರುವ ವ್ಯಕ್ತಿಗಳು ಹೇಗೆ ವಂಚನೆಯ ಖೆಡ್ಡಾಕ್ಕೆ ಬೀಳುತ್ತಾರೆ ಎಂಬ ವಿವರಗಳನ್ನು ನಮ್ಮ ಮುಂದೆ ಇಡುತ್ತದೆ.
ಹತ್ತು ಕಂತುಗಳಲ್ಲಿ ತೆರೆದುಕೊಳ್ಳುವ ಜಮ್ತಾರ, ವಂಚಕರ ಕೌಟುಂಬಿಕ ಪರಿಸರ, ಸಾಮಾಜಿಕ ಪರಿಸ್ಥಿತಿ ಇವರನ್ನೇ ದಾಳವಾಗಿಸಿಕೊಳ್ಳುವವರ ವಿವರಗಳನ್ನು ಪರಿಪರಿಯಾಗಿ ತೆರೆದಿಡುತ್ತದೆ. ಆನ್ ಲೈನ್ ವಂಚನೆಯ ಸಲುವಾಗಿಯೇ 17 ವರ್ಷದ ಹುಡುಗ 29 ವರ್ಷದ ಯುವತಿಯನ್ನು ಮದುವೆಯಾಗುವ, ಆಕೆ ವಯಸ್ಸು ಕೇವಲ ನಂಬರ್ ಎಂದು ಘಟನಾವಳಿಗಳು ಇಲ್ಲಿ ನಡೆಯುತ್ತವೆ. ಇಂಗ್ಲಿಷ್ ಗೊತ್ತಿರುವ ಬಡವರ ಮನೆಯ ಹೆಣ್ಣುಮಕ್ಕಳು ಇಲ್ಲಿ ಮಾರಾಟವಾಗುತ್ತಾರೆ.
ಈ ಎಲ್ಲ ಘಟನಾವಳಿಗಳನ್ನು ನಿರ್ದೇಶಕ ಸೌಮೇಂದ್ರ ಪಾಧಿ ಅಬ್ಬರವಿಲ್ಲದೇ ಹೇಳುತ್ತಾರೆ. ವ್ಯವಸ್ಥೆಯ ಕುಂದುಕೊರತೆಗಳನ್ನು ಕೂಡ ಹೇಳುತ್ತಾ ಹೋಗುತ್ತಾರೆ. ಇಂಥದೊಂದು ಕಥೆಯನ್ನು ವೆಬ್ ಸೀರೀಸ್ ಮಾಡುವ ಮುನ್ನ ಸಾಕಷ್ಟು ಅಧ್ಯಯನ ಮಾಡಿದ್ದಾರೆ ಎಂಬುದು ಪ್ರತಿಕಂತಿನಲ್ಲಿಯೂ ತಿಳಿಯುತ್ತದೆ. ಪ್ರತಿಯೊಂದು ಕಂತು ಕೂಡ ಮುಂದೇನು ನಡೆಯುತ್ತದೆ ಎಂಬ ರೀತಿಯ ಸಸ್ಪೆನ್ಸ್ ನೊಂದಿಗೆ ಅಂತ್ಯವಾಗುವುದಿಲ್ಲ. ಆದರೂ ಪ್ರೇಕ್ಷಕರ ಆಸಕ್ತಿ ಕಡಿಮೆಯಾಗದ ರೀತಿಯಲ್ಲಿ ಕಥೆ ಬೆಳೆಸುತ್ತಾ ಹೋಗಲಾಗಿದೆ.


ಮುಖ್ಯವಾಗಿ ಗಮನಿಸಬೇಕಿರುವುದು ಪಾತ್ರಗಳ ಆಯ್ಕೆ. ಆಯಾ ಪಾತ್ರ ಕೇಳುವ ವಿವರಗಳ ವ್ಯಕ್ತಿಗಳನ್ನೇ ಆಯ್ಕೆ ಮಾಡಲಾಗಿದೆ. ಎಸ್,ಪಿ. ಡಾಲಿ ಸಾಹು ಆಗಿ ಅಭಿನಯಿಸಿರುವ ಅಕ್ಷಾ ಪರ್ದಸಾನಿ ಅಬ್ಬರಿಸಿ – ಬೊಬ್ಬಿರಿಯದೇ ತಣ್ಣಗೆ ನಟಿಸಿದ್ದಾರೆ. ಎಲ್ಲಿಯೂ ಕೂಡ ಓವರ್ ಆಕ್ಟಿಂಗ್ ಎನಿಸುವುದಿಲ್ಲ. ಇದೇ ಮಾತನ್ನು ಸ್ಥಳೀಯ ಪ್ರಭಾವಿ ರಾಜಕಾರಣಿ ಪಾತ್ರಧಾರಿ ಬ್ರಜೇಶ್ ಬಾನ್, ಹದಿನೇಳರ ಹರೆಯದ ಸನ್ನಿಯಾಗಿರುವ ಸ್ಪರ್ಶ್ ಶ್ರೀವಾಸ್ತವ್, ಪೊಲೀಸ್ ಅಧಿಕಾರಿ ಬಿಸ್ವಾ ಪಾಠಕ್ ದಿಭೈಂದು ಭಟ್ಟಾಚಾರ್ಯ ಮತ್ತು ಇನ್ನಿತರ ಪಾತ್ರಧಾರಿಗಳಿಗೂ ಹೇಳಬಹುದು.
ಆಯ್ಕೆ ಮಾಡಿರುವ ಲೊಕೇಶನ್, ಕಾಸ್ಟ್ಯೂಮ್, ಒಳಾಂಗಣ ಇವೆಲ್ಲವೂ ಕಥೆ ನಡೆದ ಪರಿಸರವನ್ನೇ ಸಂಪೂರ್ಣವಾಗಿ ಹೋಲುತ್ತದೆ. ಆ ಪರಿಯ ಶ್ರಮವನ್ನು ಚಿತ್ರತಂಡ ವಹಿಸಿದೆ. ಛಾಯಾಗ್ರಾಹಕರ ತಂಡದ ಮುಖ್ಯಸ್ಥ ಕೌಶಲ್ ಸಿನ್ಹಾ, ಸಂಕಲನಕಾರ ಜುಬೀನ್ ಶೇಖ್, ಹಿನ್ನೆಲೆ ಸಂಗೀತ ನೀಡಿರುವ ಸಿದ್ಧಾಂತ್ ಮಾಥೂರ್ ಅವರ ಕಾರ್ಯ ಅಚ್ಚುಕಟ್ಟು.
ಆನ್ ಲೈನ್ ಬ್ಯಾಂಕಿಂಗ್ ವಂಚನೆಯ ಆಳ – ಅಗಲಗಳನ್ನು ಅಳೆಯುತ್ತೇನೆಂದು ಹೊರಟಂತೆ ಕಾಣುವ ಜಮ್ತಾರ ತಂಡ ಎಲ್ಲ ವಿವರಗಳನ್ನು ನೀಡಲು ಸಾಧ್ಯವಾಗಿಲ್ಲ. ಇರುವ ಕಂತುಗಳ ಪರಿಮಿತಿಯಲ್ಲೇ ಅವೆಲ್ಲವುಗಳನ್ನೂ ಹೇಳಲು ಸಾಧ್ಯವಿತ್ತು. ಇತ್ತ ನಿರ್ದೇಶಕ ಗಮನ ನೀಡಬೇಕಿತ್ತು. ಆದರೆ ನೋಡುಗರಲ್ಲಿ ವಂಚನೆಯ ಜಾಲದ ಸ್ವರೂಪದ ಬಗ್ಗೆ ಎಚ್ಚರವುಂಟು ಮಾಡುವುದರಲ್ಲಿ ತಂಡ ಯಶಸ್ವಿಯಾಗಿದೆ. ಈ ಧಾರವಾಹಿ ನೆಟ್ ಫ್ಲಿಕ್ಸ್ ನಲ್ಲಿದೆ.

Exit mobile version