Site icon ಕುಮಾರರೈತ

ಕನ್ನಡದ ತೇರು ಎಳೆಯಲು ದೊಣೆನಾಯಕನ ಅಪ್ಪಣೆ ಬೇಕೇ ?

ನಮ್ಮದು ನಾಡು – ನುಡಿಯನ್ನು ತಾಯಿ ಎಂದು ಕರೆಯುವ ಸಂಸ್ಕೃತಿ. ಸಮುದಾಯದೊಳಗೆ ಭಿನ್ನಸ್ವರಗಳು ಇದ್ದ ಸಂದರ್ಭದಲ್ಲಿಯೂ ಕನ್ನಡದ ತೇರು ಎಳೆಯುವ ಸಂದರ್ಭಗಳಲ್ಲಿ ಒಟ್ಟಾಗುತ್ತೇವೆ. ನುಡಿಯನ್ನು ಮೆರೆಸುತ್ತೇವೆ. ಬೇರೆಬೇರೆ ನೆಲೆಯ ವಿರೋಧಗಳನ್ನು ತಾತ್ಕಾಲಿಕವಾಗಿಯೂ ಮರೆಯುತ್ತೇವೆ. ಇದಕ್ಕೆ ನಿದರ್ಶನಗಳ ಸರಮಾಲೆಯೇ ಇದೆ. ಇಂಥದೊಂದು ಪರಂಪರೆಗೆ ಕನ್ನಡ – ಸಂಸ್ಕೃತಿ ಖಾತೆ ನೊಗ ಹೊತ್ತವರೇ ಕಪ್ಪುಚುಕ್ಕಿ ಇಡುತ್ತಾರೆಂದರೆ ಅದು ದಿಗ್ಬ್ರಮೆ ಸಂಗತಿ.

ಜಿಲ್ಲಾ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸಾಹಿತಿ ಕುಂವೀ ಜತೆ ಕಲ್ಕುಳಿ ವಿಠಲ ಹೆಗ್ಗಡೆ

ಇಂಥದೊಂದು ಸಾಂಸ್ಕೃತಿಕ ಆಘಾತ – ಕನ್ನಡ ನಾಡು – ನುಡಿಗೆ ಅಪಚಾರ,  ಸೌಹಾರ್ದತೆ ನೆಲೆವೀಡು ಶೃಂಗೇರಿಯಲ್ಲಿ ನಡೆದಿದೆ. ಇದರ ಸುತ್ತಲಿನ ಘಟನಾವಳಿಗಳು ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರತ್ತಲೇ ಬೆರಳು ತೋರಿಸುತ್ತಿವೆ. ಈ ಊರು (ಚಿಕ್ಕಮಗಳೂರು) ಹೇಗೆ ನಿಸರ್ಗದತ್ತವಾಗಿ ಸಂಪದ್ಬರಿತವೊ ಹಾಗೆ ಕನ್ನಡ ಸಾಹಿತ್ಯವನ್ನೂ ಶ್ರೀಮಂತಿಕೆಗೊಳಿಸಲು ಶ್ರಮಿಸಿದವರಿಗೂ ಹೆಸರುವಾಸಿ.

ಜಿಲ್ಲೆಯ ನಿಸರ್ಗ ಶ್ರೀಮಂತಿಕೆಯನ್ನು ಉಳಿಸಲು ಹಗಲಿರುಳು ಶ್ರಮಿಸುತ್ತಿರುವ, ಇದಕ್ಕಾಗಿ ಕಷ್ಟ-ನಷ್ಟಗಳ ಹಾದಿಯಲ್ಲಿಯೇ ನಡೆಯುತ್ತಿರುವ ಕಲ್ಕುಳಿ ವಿಠಲ ಹೆಗ್ಗಡೆ ಅವರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಇದರ ಸಂಭ್ರಮ ಮತ್ತಷ್ಟೂ ಹೆಚ್ಚಬೇಕಿತ್ತು. ಆದರೆ ಸಿ.ಟಿ. ರವಿ ನಿಲುವು ಅವುಗಳಿಗೆ ತಡೆಗೋಡೆಯಾಯಿತು. ಇದು ತೀವ್ರ ವಿಷಾದ ಸಂಗತಿ.

ವಿರೋಧಕ್ಕೆ ಕಾರಣವಾದರೂ ಏನು : ಮಾನವ ಸಮುದಾಯಗಳ ಸೌಹಾರ್ದತೆಗೆ ಶ್ರಮಿಸುವವರನ್ನೂ ನಕ್ಸಲರ ಸಾಲಿಗೆ ಸೇರಿಸುವುದರಲ್ಲಿ, ಅರ್ಬನ್ ನಕ್ಸಲರೆಂದು ಕರೆಯುವುದರಲ್ಲಿ ಬಹುತೇಕರು ಬಲಪಂಥೀಯರು ನಿಸ್ಸಿಮರು. ವಿಠಲ ಹೆಗ್ಗಡೆ ಅವರ ವಿಷಯದಲ್ಲಿಯೂ ಸಚಿವ ಸಿ.ಟಿ. ರವಿ ಹೀಗೆ ನಡೆದುಕೊಂಡರು. ನಕ್ಸಲ್ ಬೆಂಬಲಿಗರು ಎಂದು ಸಾರಸಗಟಾಗಿ ಕರೆದುಬಿಟ್ಟರು. ಇದಕ್ಕೆ ಅವರ ಬಳಿ ಆಧಾರಗಳಿವೆವೆ ? ಖಂಡಿತ ಇಲ್ಲ. ಸಮ್ಮೇಳನಾಧ್ಯಕ್ಷರಾಗುವುದನ್ನು ವಿರೋಧಿಸಿದ ನಿಲುವನ್ನು ಸಮರ್ಥಿಸಿಕೊಳ್ಳುವ ಹಠಕ್ಕೆ ಬಿದ್ದು ಹೀಗೆ ಕರೆದರು. ಇದರ ಹಿಂದಿನ – ಮುಂದಿನ ಪರಿಣಾಮಗಳನ್ನು ಅವರು ಯೋಚಿಸಲೇ ಹೋಗಲಿಲ್ಲ.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ಪೊಲೀಸರಿಗೆ ಕಾನೂನು ಹೇಳುತ್ತಿರುವುದು

ಈ ಹಿಂದೆ ಕಲ್ಕುಳಿ ವಿಠಲ ಹೆಗ್ಗಡೆ ಅವರನ್ನು ನಕ್ಸಲ್ ಬೆಂಬಲಿಗ ಎಂದು ಕರೆದವರಿಗೆ ನ್ಯಾಯಾಲಯ ಜೈಲುಶಿಕ್ಷೆ- ದಂಡ ವಿಧಿಸಿದೆ. ಇದು ಸಿ,ಟಿ. ರವಿಗೆ ತಿಳಿಯದ ಸಂಗತಿ ಖಂಡಿತ ಆಗಿರಲಿಕ್ಕಿಲ್ಲ. ಏಕೆಂದರೆ ಬಾಬಾ ಬುಡನ್ ಗಿರಿ ವಿಷಯದಲ್ಲಿ ಕಲ್ಕುಳಿ ಸೌಹಾರ್ದದ ನೆಲೆಯಲ್ಲಿ ನಿಂತು ಹೋರಾಟ ಮಾಡಿದ್ದು ಸಿ.ಟಿ.ರವಿಯನ್ನು ಕೆರಳಿಸಿದೆ. ಇದನ್ನೇ ಮನಸಿನಲ್ಲಿಟ್ಟುಕೊಂಡ ಕಾರಣದಿಂದಲೇ ವಿಠಲ ಹೆಗ್ಗಡೆ ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಮಿತಿ 16ನೇ ಜಿಲ್ಲಾ ಸಮ್ಮೇಳನಕ್ಕೆ ಅವಿರೋಧ ಆಯ್ಕೆ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗಿಯೇ ಕಲ್ಕುಳಿ ವಿಠಲ ಹೆಗ್ಗಡೆ ಅಧ್ಯಕ್ಷರಾಗಿದ್ದಾರೆ. ಇವರು ಮಲೆನಾಡಿನ ಬಗ್ಗೆ ಬರೆದ “ಮಂಗನ ಬ್ಯಾಟೆ” ಬಹು ಅಪರೂಪದ ಕೃತಿ. ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ಮತ್ತೊಂದು ಕಾಣಿಕೆ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ದೊರೆತಿದೆ.

ವಿಚಿತ್ರ ಎಂದರೆ ಸಾಹಿತ್ಯ ವಲಯದ ಪ್ರಶಂಶೆಗೆ ಪಾತ್ರವಾದ ಈ ಕೃತಿಯ ಬಗ್ಗೆಯೂ ಸಚಿವ ಸಿ.ಟಿ. ರವಿ. ಹಗುರವಾಗಿ ಮಾತನಾಡಿರುವುದು. “ಪ್ರಶಸ್ತಿ ಯಾವ ಕಾರಣಕ್ಕಾಗಿ ಬರುತ್ತದೆ ಎಂದು ನಾನು ಈಗ ಹೇಳೋದಿಲ್ಲ” ಎಂಬ ವ್ಯಂಗ್ಯದ ಮಾತು ಆಡಿದ್ದಾರೆ.. ಮಲೆನಾಡಿಗರೇ ಆದ ರವಿ ತಮ್ಮ ಮಲೆನಾಡಿನ ಬಗ್ಗೆಯೇ ಬರೆದ ಈ ಕೃತಿ ಓದಿದ್ದರೆ ಈ ಮಾತು ಹೇಳುತ್ತಿರಲಿಲ್ಲ. ಒಂದು ವೇಳೆ ಓದಿದ್ದು ಅದರ ಬಗ್ಗೆ ತಕರಾರುಗಳಿದ್ದರೆ ಸಮ್ಮೇಳನದ ವೇದಿಕೆಯಲ್ಲಿ ವಿಮರ್ಶೆ ನೆಲೆಯಲ್ಲಿ ಮಾತನಾಡಬೇಕಿತ್ತು. ಕಲ್ಕುಳಿ ವಿಠಲ ಹೆಗ್ಗಡೆ ಅವರ ಬಗ್ಗೆಯೂ ತಕಾರರುಗಳಿದ್ದರೆ ಹೇಳಬಹುದಿತ್ತು.

ಬೆರಳೆಣಿಕೆ ಸಂಖ್ಯೆ ಪ್ರತಿಭಟನಾಕಾರರಿಗೆ ಬೆದರಿದರೇಕೆ ಪೊಲೀಸರು ?

ಈ ಎಲ್ಲ ಪ್ರಜಾಸತ್ತಾತ್ಮಕ ಕ್ರಮಗಳನ್ನು ಗಾಳಿಗೆ ತೂರಿದ ಕಾರಣದಿಂದಾಗಿಯೇ ಶೃಂಗೇರಿಯಲ್ಲಿ ಜನವರಿ 10 ರಂದು ನಡೆದ ಸಮ್ಮೇಳನ ಗದ್ದಲದ ನಡುವೆ, ಆತಂಕದ ನೆರಳಿನಲ್ಲಿ ನಡೆಯಿತು. ಕಲ್ಕುಳಿ ವಿಠಲ ಹೆಗ್ಗಡೆ ಅವರ ಆಯ್ಕೆ ವಿರೋಧಿಸಿದ ಒಂದೆರಡು ಬಲಪಂಥೀಯ ಸಂಘಟನೆಗಳವರು ಶೃಂಗೇರಿ ಬಂದ್ ಮಾಡಲು ಶ್ರಮಿಸಿದ್ದರು. ದೂರದೂರಿನಿಂದ ಬಂದಿಳಿದ ಸಾಹಿತ್ಯಾಸಕ್ತರು, ದೇಗುಲಕ್ಕೆ ಬಂದ ಭಕ್ತಾದಿಗಳು ಬೆಳಗ್ಗಿನ ಉಪಹಾರವಿಲ್ಲದೇ ಉಪವಾಸ ಇರುವ ದುಸ್ಥಿತಿ ನಿರ್ಮಾಣವಾಯಿತು. ಖಾಸಗಿ ಬಸ್ಸುಗಳ ಸಂಚಾರವಿರಲಿಲ್ಲ. ಇವೆಲ್ಲವೂ ಶಾಂತೀಪ್ರಿಯ ಶೃಂಗೇರಿ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುವುದರ ಜತೆಗೆ ಲಕ್ಷಾಂತರ ರೂ ವಹಿವಾಟಿನ ನಷ್ಟಕ್ಕೂ ಕಾರಣವಾಯ್ತು.

ಇಷ್ಟೆಲ್ಲದರ ನಡುವೆಯೂ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿತವಾಗಿದ್ದ ಸಮ್ಮೇಳನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದರು. ಉದ್ಘಾಟನಾ ಸಮಾರಂಭ, ಗೋಷ್ಠಿಗಳು  ಅರ್ಥಪೂರ್ಣವಾಗಿ ನಡೆಯಿತು. ಮಲೆನಾಡನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಸರ್ವಾಧ್ಯಕ್ಷ ಕಲ್ಕುಳಿ ವಿಠಲ ಹೆಗ್ಗಡೆ ಅವರು ಅವುಗಳಿಗೆ ಪರಿಹಾರ ಹೇಗೆಂಬುದನ್ನು ತಿಳಿಸಿದರು.

ಇವೆಲ್ಲವೂ ಪೊಲೀಸರ ನಿರಂತರ ಅಸಹಕಾರ – ಪ್ರತಿಭಟನಾಕಾರರ ಘೋಷಣೆಗಳ ನಡುವೆ ನಡೆಯಿತೆಂಬುದು ಗಮನಾರ್ಹ. ಸಮ್ಮೇಳನ ನಿಲ್ಲಿಸಬೇಕೆಂದು ಹಠ ತೊಟ್ಟವರಂತೆ ಕಾಣುತ್ತಿದ್ದ ಪೊಲೀಸರು ಅಡಿಗಡಿಗೂ ಅಡ್ಡಿಪಡಿಸಿದರು. ಸಮ್ಮೇಳನದ ಮುಂಭಾಗದಲ್ಲಿಯೇ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಘೋಷಣೆ ಕೂಗಲು ಅವಕಾಶ ನೀಡಿದರು. ಸ್ಥಳೀಯ ಶಾಸಕ ರಾಜೇಗೌಡ, ಎಂ.ಎಲ್ಸಿ ಭೋಜೇಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರಿಲ್ಲದಿದ್ದರೆ ಮೊದಲ ದಿನದ ಸಮ್ಮೇಳನವೂ ನಡೆಯುತ್ತಿರಲಿಲ್ಲ.

ಸಭಾಂಗಣದೊಳಗೆ ಪ್ರವೇಶಿರುವ ಪೊಲೀಸರು

ಅಂದು ರಾತ್ರಿ ಮತ್ತೆ ಸ್ವಾಗತ ಸಮಿತಿಗೆ ನೋಟೀಸ್ ನೀಡಿದ ಪೊಲೀಸರು “ ಪ್ರತಿಭಟನಾಕಾರರು ಪೆಟ್ರೋಲ್ ಬಾಂಬ್ ಬಳಸುವ ಮಾಹಿತಿ ಸಿಕ್ಕಿದೆ. ಕಾನೂನು – ಸುವ್ಯಸ್ಥೆಗೆ ಧಕ್ಕೆ ಉಂಟಾಗುತ್ತದೆ. ಎರಡನೇ ದಿನದ ಸಮ್ಮೇಳನ ನಿಲ್ಲಿಸಿ” ಎಂದರು. ಸಾಹಿತ್ಯ ಸಮ್ಮೇಳನಕ್ಕೆ ಬೆದರಿಕೆ ಇದ್ದರೆ ರಕ್ಷಣೆ ನೀಡಿ ನಡೆಯುವಂತೆ ಮಾಡಬೇಕಾದರೇ ಹೀಗೆ ಹೇಳುವುದು ಎಷ್ಟು ಸರಿ.

ಅಂತೂ ಎರಡನೇ ದಿನದ ಸಮ್ಮೇಳನ ನಿಂತಿದೆ. ಆದರೆ ಇದು ಎತ್ತಿರುವ ಪ್ರಶ್ನೆಗಳು ಹಲವು. ಈ ಎಲ್ಲ ಗದ್ದಲ – ಗೊಂದಲಗಳಿಗೆ ಒಂದೇ ಮಾತಿನಲ್ಲಿ ತೆರೆ ಎಳೆಯಬಬಹುದಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಏಕೆ ಮೌನ ವಹಿಸಿದರು ? ಕನ್ನಡಿಗರು –ಕನ್ನಡದ ಅಸ್ಮಿತೆ ಸಂಕೇತವಾದ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ಅನುದಾನ ನೀಡಲು ನಿರಾಕರಿಸಿದ್ದು ಏಕೆ ? ಇದು ಸ್ವಾಯತ್ತ ಸಂಸ್ಥೆಯೋ ಅಥವಾ ಅಧಿಕಾರಸ್ಥರ ಮರ್ಜಿಗೆ ಅನುಗುಣವಾಗಿ ನಡೆಯಬೇಕಾದ ಸಂಸ್ಥೆಯೊ ? ಸರ್ಕಾರ ನೀಡುವ ಅನುದಾನಕ್ಕೆ ಕೈ ಚಾಚಿ ಸಾಹಿತ್ಯ ಸಮ್ಮೇಳನ ನಡೆಸಬೇಕೆ ? ಬಾರುಕೋಲಿನಂಥ ಸಾಹಿತ್ಯ ರಚನೆ ಮೂಲಕ ಸರ್ಕಾರವನ್ನು ಎಚ್ಚರಿಸಬೇಕಾದ ಬಹುತೇಕ ಸಾಹಿತಿಗಳು ಮೌನ ವಹಿಸಿದ್ದೇಕೆ ? ಇಂದು ಜಿಲ್ಲಾ ಸಮ್ಮೇಳನದ ಅಧ್ಯಕ್ಷರನ್ನು ಬದಲಿಸಿ ಎಂದವರು ನಾಳೆ ನಾವು ಸೂಚಿಸಿದವರೆ ತಾಲ್ಲೂಕು – ಜಿಲ್ಲಾ – ರಾಜ್ಯ ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರಾಗಬೇಕು ಎಂದು ಹೇಳುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯೇನು ? ಇನ್ನೂ ಮುಂದುವರಿದು ಬಲಪಂಥೀಯ ಸಂಘಟನೆ ಬಲವರ್ಧನೆಗೆ ಪೂರಕವಾಗುವ ಸಾಹಿತ್ಯ ರಚಿಸಿದವರಿಗೆ ಮಾತ್ರ ಪ್ರಶಸ್ತಿ – ಪರಸ್ಕಾರ ಎನ್ನದೇ ಇರುತ್ತಾರೆಯೇ ? ಇನ್ನೂ ಮುಂದುವರಿದು ನಾವು ಹೇಳಿದ್ದನ್ನಷ್ಟೆ ಬರೆದುಕೊಂಡು ಬಿದ್ದಿರಿ ಎಂದು ಸಾಹಿತಿಗಳಿಗೆ ಸೂಚಿಸುವುದಿಲ್ಲ ಎಂದು ಗ್ಯಾರಂಟಿಯೇನು, ಸೈದ್ಧಾಂತಿಕ, ವೈಚಾರಿಕ ಭಿನ್ನಮತಗಳ ನಡುವೆಯೂ ಕರ್ನಾಟಕದ ಅಧಿಕಾರಸ್ಥ ರಾಜಕಾರಣಿಗಳು ಸಾಹಿತಿಗಳು – ಪರಿಸರ ಹೋರಾಟಗಾರರ ವಿಷಯಗಳಲ್ಲಿ ಉದಾತ್ತವಾಗಿ ನಡೆದುಕೊಳ್ಳುತ್ತಾ ಬಂದಿರುವ ಉದಾಹರಣೆಗಳಿವೆ, ಇದಕ್ಕೆ ವಿರುದ್ಧವಾಗಿ ಸಿ.ಟಿ. ರವಿ ನಡೆದುಕೊಂಡಿದ್ದಾರೆ. ಇವರನ್ನು ಸಚಿವ ಸ್ಥಾನದಿಂದ ಕೈಬಿಡಿ ಎಂದು ಸಾಹಿತಿಗಳೆಲ್ಲರೂ ಒಕ್ಕೂರಲಿನಿಂದ ಹೇಳಬಾರದೇಕೆ ? ಇವೆಲ್ಲದರ ಜೊತೆಗೆ ಮತ್ತೊಂದು ಪ್ರಶ್ನೆ, ಕನ್ನಡದ ತೇರು ಎಳೆಯಲು ದೊಣೆನಾಯಕನ ಅಪ್ಪಣೆಗೆ ಕಾಯುವಂಥ ಪರಿಸ್ಥಿತಿ ಬೇಕೆ ?

Exit mobile version