ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ ಹಿರಿಯ ನಾಯಕರಿಗೆ ಕರ್ನಾಟಕ ಸಾಕಷ್ಟು ಬಾರಿ ಪುನಶ್ಚೇತನ ನೀಡಿದೆ. 1978ರಲ್ಲಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇವರನ್ನು ಸೋಲಿಸಲು ವಿರೋಧಪಕ್ಷಗಳು ಮಾಡಿದ ರಾಜಕೀಯ ಪ್ರಯತ್ನ ವಿಫಲವಾಗಿದ್ದವು. ಆದರೆ ಆ ಗೆಲುವು ಅನಾಯಾಸದಿಂದ ದಕ್ಕಿರಲಿಲ್ಲ. 1999ರಲ್ಲಿ ಸೋನಿಯಾಗಾಂಧಿ ಉತ್ತರದ ಅಮೇಥಿ ಕ್ಷೇತ್ರದ ಜೊತೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ನಾಯಕಿ ಸುಷ್ಮಾ ರಾಜ್ ಎದುರು ಸೆಣಸುವುದು ಸುಲಭವಾಗಿರಲಿಲ್ಲ. ಕನ್ನಡಿಗರು ಸೋನಿಯಾಗಾಂಧಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿದರು. ಇದೀಗ ರಾಹುಲ್ ಗಾಂಧಿ ಕನ್ನಡದ ನೆಲದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಅರೇ ಏನಿದು: ವೈನಾಡು ಲೋಕಸಭಾ ಕ್ಷೇತ್ರವಿರುವುದು ಕೇರಳ ರಾಜ್ಯದಲ್ಲಿ. ಕುಮಾರ ರೈತ ಇದನ್ನು ಕನ್ನಡದ ನೆಲವೆಂದು ಹೇಳುತ್ತಿದ್ದಾರಲ್ಲ ಎಂದು ಗೊಂದಲವಾಗುತ್ತಿರಬಹುದಲ್ಲವೆ ? ಅಥವಾ ಇವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದೂ ಅನಿಸಿರುತ್ತದೆ. ಆದರೆ ವೈನಾಡು ಕನ್ನಡಿಗರ ಊರು, ಕನ್ನಡ ನೆಲ. ಇದು ಉತ್ಪ್ರೇಕ್ಷೆಯಲ್ಲ. ಶತಶತಮಾನಗಳಿಂದಲೂ ದಾಖಲಾಗುತ್ತಲೇ ಬಂದಿರುವ ಐತಿಹಾಸಿಕ ಸಂಗತಿ.

ತಿರುಗಾಟ: ಈಗ ಕೇರಳದಲ್ಲಿರುವ ಸುಲ್ತಾನ್ ಬತೇರಿಯಿಂದ ತಿರುವಂತನಪುರದವರೆಗೂ, ಅಲ್ಲಿಂದ ಕಾಸರಗೋಡಿನವರೆಗೂ ಸಾಕಷ್ಟು ಬಾರಿ ತಿರುಗಾಡುತ್ತಲೇ ಬರುತ್ತಿದ್ದೇನೆ. ಇತಿಹಾಸ ಪುಸ್ತಕಗಳನ್ನು ಓದಿ ಅರಿಯುವುದಕ್ಕಿಂತ ಮೊದಲೇ ನಿರಂತರವಾಗಿ ಸಂಚರಿಸಿದ್ದರ ಪರಿಣಾಮವಾಗಿ  ವೈನಾಡು ಮತ್ತು ಕಾಸರಗೋಡು ಕನ್ನಡದ ನೆಲ, ಕನ್ನಡ ಸಂಸ್ಕೃತಿಯ ಪ್ರದೇಶ ಎಂಬುದು ಮನದಟ್ಟಾಗಿತ್ತು. ನಂತರ ಇತಿಹಾಸದ ಓದು ನನ್ನ ಗ್ರಹಿಕೆಯನ್ನು ಪುಷ್ಟಿಗೊಳಿಸಿದೆ.  ರಾಹುಲ್ ಗಾಂಧಿ ಅವರು ವೈನಾಡಿನಿಂದಲೂ ಸ್ಪರ್ಧಿಸುತ್ತಿರುತ್ತಿರುವ ಸಂದರ್ಭದಲ್ಲಿ ಈ ಕನ್ನಡ ನೆಲದ ವಿಶೇಷತೆಗಳನ್ನು ಹಂಚಿಕೊಳ್ಳಬೇಕೆಂಬ ಕಾರಣದಿಂದ ಈ ಲೇಖನಮಾಲೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

ದಟ್ಟವಾದ ಕಾಡು: ಇಡೀ ವೈನಾಡು ಅರಣ್ಯಮಯ, ಕಡಿದಾದ ಬೆಟ್ಟಗುಡ್ಡಗಳ ಪ್ರದೇಶ. ಕ್ರಿಸ್ತಶಕೆ ಆರಂಭವಾಗುವುದಕ್ಕೆ ಕನಿಷ್ಟ ಸಾವಿರ ವರ್ಷಗಳ ಮುಂಚಿನಿಂದಲೇ ಇಲ್ಲಿ ಮಾನವ ವಾಸ ಆರಂಭವಾಗಿತ್ತು. ಅಲ್ಲಿದ್ದವರು ಆದಿವಾಸಿಗಳು. ಇವರು ಮಾತನಾಡುವ ಭಾಷೆಗಳ ಮೇಲೆ ಕನ್ನಡದ ದಟ್ಟ ಪ್ರಭಾವವಿದೆ. ಈ ನಂತರ ಇಲ್ಲಿಗೆ ಕಾಲಿಟ್ಟು ಜೀವನ ನಡೆಸಲು ಆರಂಭಿಸಿದವರು ಅಚ್ಚಕನ್ನಡ ಮಾತನಾಡುವವರು. ಸುಲ್ತಾನ್ ಬತೇರಿಯಲ್ಲಿರುವ ಎಡಕಲ್ಲು ಗುಡ್ಡದ ಪಾದದಲ್ಲಿ ಕನ್ನಡದ ಶಾಸನಗಳು ದೊರಕಿವೆ. ಇದು 5ನೇ ಶತಮಾನದಲ್ಲಿ ಮೈಸೂರು ಅರಸರಾಗಿದ್ದ  ಕನ್ನಡಿಗ ಕುಟುಂಬಿಯಾ ಅಥವಾ ಕುಡುಂಬಿಯಾ ವಂಶದ ದೊರೆ ವಿಷ್ಣುವರ್ಮ ಕೆತ್ತಿಸಿದ ಶಾಸನಗಳು.

ಬೈಲುನಾಡು: ಆಗ ವೈನಾಡನ್ನು ಬೈಲುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶ ನಂತರ ತಲಕಾಡನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಗಂಗರ ವಶವಾಯಿತು. ಇದನ್ನು ಇವರಿಂದ ಕ್ರಿಸ್ತಶಕ 11ನೇ ಶತಮಾನದ ಆರಂಭದಲ್ಲಿ ವಶಪಡಿಸಿಕೊಂಡವರು ಕದಂಬರು. ಈ ನಂತರ ಇದು ಹೊಯ್ಸಳರ ವಶವಾಯಿತು. ಇವರು ಜೈನದೊರೆಗಳು. ಇವರ ಕಾಲಘಟ್ಟದಲ್ಲಿ ಕನ್ನಡ ಪ್ರದೇಶಗಳಲ್ಲಿ ಜೈನರ ಸಂಖ್ಯೆ ಹೆಚ್ಚಳವಾಯಿತು. ಅಪಾರ ಸಂಖ್ಯೆಯಲ್ಲಿ ಕನ್ನಡ ಮಾತೃಭಾಷೆಯಾಗಿರುವ ಜೈನರು ಬೈಲುನಾಡಿಗೆ ಬಂದು ವ್ಯವಸಾಯ ಆರಂಭಿಸಿದರು. ವಿಶೇಷವೆಂದರೆ ಇವರು ದುರ್ಗಮ ಅರಣ್ಯ, ಕಡಿದಾದ ಬೆಟ್ಟಗಳಲ್ಲಿ ತೋಟಗಾರಿಕೆ ಆರಂಭಿಸಿದರು. ಇವರೆಲ್ಲ ದಿಗಂಬರ ಪಂಥದವರು. ಈ ಭಾಗದಲ್ಲಿ ಇವರನ್ನು ಗೌಡರು ಎಂದು ಕರೆಯುತ್ತಾರೆ.

ಜೈನಬಸದಿಗಳು: ಬೈಲುನಾಡಿನಲ್ಲಿ ಅಂದರೆ ಕಲ್ಲುಬೆಟ್ಟ, ಸುಲ್ತಾನ್ ಬತೇರಿ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೈನಬಸದಿಗಳ ನಿರ್ಮಾಣವಾಯಿತು. ಇಂದಿಗೂ ಕೆಲವಾರು ಜೈನಬಸದಿಗಳು ಉಳಿದುಕೊಂಡಿವೆ. ಪುರಾತತ್ವ ಇಲಾಖೆ ಇವುಗಳನ್ನು ಸಂರಕ್ಷಿಸುತ್ತಿದೆ.  ಹೊಯ್ಸಳ ಕುಲದ ಹೆಸರಾಂತ ಪ್ರಬಲ ದೊರೆ ಬಿಟ್ಟಿದೇವ ವೈಷ್ಣವ ದೀಕ್ಷೆ ಸ್ವೀಕರಿಸುವ ತನಕ ಅವರ ಆಡಳಿತವಿದ್ದ ಪ್ರದೇಶದಲ್ಲಿ ಮತ್ತು ಇತರ ರಾಜರ ಆಳ್ವಿಕೆಯಲ್ಲಿದ್ದ ಪ್ರದೇಶಗಳಲ್ಲಿಯೂ ಜೈನಧರ್ಮಕ್ಕೆ ಅಪಾರ ಪ್ರೋತ್ಸಾಹವಿತ್ತು. ಧಾರ್ಮಿಕ ಸುರಕ್ಷತೆಯ ಭಾವನೆಯಿತ್ತು.

ಬಿಟ್ಟಿದೇವ ವಿಷ್ಣುವರ್ಧನನಾಗಿದ್ದು: ಜೈನದೊರೆ ಬಿಟ್ಟಿದೇವ ಬೈಲುನಾಡಿಗೆ ಜೈನ ಧರ್ಮ ಪ್ರಚಾರಕರನ್ನು ಸಹ ಕಳಿಸುತ್ತಿದ್ದ. ಇಲ್ಲಿದ್ದ ಜೈನರಿಗೆ ಪ್ರಬಲದೊರೆಯ ಅಭಯಹಸ್ತವಿತ್ತು. ಈ ಬಳಿಕ ಬಿಟ್ಟಿದೇವ ವೈಷ್ಣವದೀಕ್ಷೆ ಸ್ವೀಕರಿಸಿ ವಿಷ್ಣುವರ್ಧನನಾದರೂ ಬೇಲೂರು-ಹಳೇಬೀಡಿನಿಂದ ಬಹುದೂರದಲ್ಲಿದ್ದ ಕನ್ನಡಿಗ ಜೈನರು ವಿಚಲಿತರಾಗಲಿಲ್ಲ. ಕೃಷಿ ಮತ್ತು ವ್ಯಾಪಾರ ಅವಲಂಬಿಸಿದ್ದ ಅವರು ಎಂದಿನಂತೆ ತಮ್ಮ ಧಾರ್ಮಿಕ ಮತ್ತು ವೃತ್ತಿಜೀವನವನ್ನು ಮುಂದುವರಿಸಿದರು.

ಹೊಯ್ಸಳರಿಂದ ಕದಂಬರಿಗೆ: ಮತ್ತೆ ಬೈಲುನಾಡು ಪ್ರದೇಶವನ್ನು ಕದಂಬ ದೊರೆಗಳು ವಶಪಡಿಸಿಕೊಂಡರು. ತದನಂತರ ವಿಜಯನಗರ ಸಾಮ್ರಾಜ್ಯವನ್ನಾಳಿದ ಸಂಗಮ ವಂಶದ ರಾಜರ ವಶವಾಯಿತಾದರೂ ಕದಂಬ ದೊರೆಗಳು ಅವರ ಸಾಮಂತರಾಗಿ ಈ ಪ್ರದೇಶದ ಆಳ್ವಿಕೆ ಮುಂದುವರಿಸಿದ್ದರು. ಈ ಬಳಿಕ ಈ ಪ್ರದೇಶ ಮೈಸೂರು ಅರಸರ ವಶವಾಯಿತು.

ಸ್ವತಂತ್ರ ರಾಜರು: ವಿಜಯನಗರ ಸಾಮ್ರಾಜ್ಯದ ಕುಸಿತದ ನಂತರ ಮೈಸೂರು ಸಂಸ್ಥಾನದ ಅರಸರು (ಸುಮಾರು 1610)ಸ್ವತಂತ್ರ ರಾಜರಾದರು. ಅವರ ಆಳ್ವಿಕೆ ಬೈಲುನಾಡಿನಲ್ಲಿಯೂ ಮುಂದುವರೆಯಿತು. ಈ ಬಳಿಕದ ರಾಜಕೀಯ ಒಳಸುಳಿಗಳ ಪರಿಣಾಮದಿಂದ ಮೈಸೂರು ಅರಸರ ಶಕ್ತಿಗುಂದಿತು. ಈ ಸಂದರ್ಭ ಬಳಸಿಕೊಂಡ ಹೈದರಾಲಿ ಆಳ್ವಿಕೆ ಆರಂಭಿಸಿದರು. ಈ ಸಂದರ್ಭದಲ್ಲಿಯೇ ಬೈಲುನಾಡಿನಲ್ಲಿ ಕಚ್ಚಾರಸ್ತೆಗಳ ನಿರ್ಮಾಣವಾಯಿತು. ಹೈದರಾಲಿ ಬಳಿಕ ಮೈಸೂರು ಸಂಸ್ಥಾನದ ದೊರೆಯಾದ ಟಿಪ್ಪು ಸುಲ್ತಾನ್, ಬೈಲುನಾಡಿನ ಒಂದು ಪ್ರದೇಶವನ್ನು ಮಿಲಿಟರಿ ನೆಲೆಯಾಗಿ ಅಭಿವೃದ್ಧಿಪಡಿಸಿದ. ಈ ಕಾರಣದಿಂದ ಅದು ಸುಲ್ತಾನ್ ಬತೇರಿ ಎಂದು ಕರೆಸಿಕೊಂಡಿತು. ಇಷ್ಟರಲ್ಲಾಗಲೇ ಬೈಲುನಾಡು ವೈನಾಡು ಎಂದು ಕರೆಸಿಕೊಳ್ಳಲು ಆರಂಭಿಸಿತ್ತು.

ಹೈದರಾಲಿ

1792ರ ಒಪ್ಪಂದ: ಈಸ್ಟ್ ಇಂಡಿಯಾ ಕಂಪನಿ ಸೈನ್ಯದೊಂದಿಗೆ ನಡೆದ ಅನೇಕ ಯುದ್ಧಗಳಲ್ಲಿ ಟಿಪ್ಪು ಜಯಗಳಿಸಿದರೂ 1792ರಲ್ಲಿ ನಡೆದ ಯುದ್ಧದಲ್ಲಿ ಸೋಲು ಅನುಭವಿಸಬೇಕಾಯಿತು. ಬ್ರಿಟಿಷರೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಯಿತು. ಕೇರಳ ಭಾಗದಲ್ಲಿಯೂ ಇದ್ದ ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿಗಳು ವೈನಾಡನ್ನು ವಶಪಡಿಸಿಕೊಂಡರು. ಆದರೆ ಟಿಪ್ಪು ಸುಲಭದಲ್ಲಿ ಬಗ್ಗಲಿಲ್ಲ.

ಕನ್ನಡಿಗರ ಪ್ರದೇಶ: ಬ್ರಿಟಿಷ್ ಗವರ್ನರ್ ಜನರಲ್ ಎದುರು ತನ್ನ ಅಧಿಕಾರಿಗಳ ಮೂಲಕ “ಶತಶತಮಾನಗಳಿಂದಲೂ ವೈನಾಡು ಕನ್ನಡಿಗರ ಪ್ರದೇಶ, ಕನ್ನಡಿಗ ದೊರೆಗಳು ಆಳಿಕೊಂಡು ಬರುತ್ತಿದ್ದಾರೆ. ಈ ಪ್ರದೇಶಕ್ಕೂ ಕೇರಳಕ್ಕೂ ಭೌಗೋಳಿಕವಾಯಿಯೂ ಸಂಬಂಧವಿಲ್ಲ” ಎಂದು ಪ್ರಬಲ ವಾದ ಮಂಡಿಸಿದ. ಈ ನಂತರ ಬ್ರಿಟಿಷ್ ಗವರ್ನರ್ ಆದೇಶದ ಮೇರೆಗೆ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ವೈನಾಡಿನಿಂದ ಕಾಲ್ತೆಗೆಯಿತು. ಈ ಪ್ರದೇಶ ಮತ್ತೆ ಟಿಪ್ಪು ಆಳ್ವಿಕೆಗೆ ಸೇರಿತು. ಈತನ ಮರಣಾನಂತರವೂ ಈ ಪ್ರದೇಶ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿಯೇ ಮುಂದುವರಿಯಿತು. ಈ ನಂತರ ನಡೆದ ಒಂದಿಷ್ಟು ಬೆಳವಣಿಗೆಗಳ ಬಳಿಕ ಮತ್ತೆ ಇದು ಬ್ರಿಟಿಷರ ವಶವಾಯಿತು.

ಟಿಪ್ಪು ಸುಲ್ತಾನ್

ಪ್ಲಾಂಟೇಶನ್ ಗಳು: ಬ್ರಿಟಿಷರು ಇಲ್ಲಿ ಕಡಿದಾದ ಬೆಟ್ಟಗಳಲ್ಲಿ ಟೀ, ಕಾಫಿ ಮತ್ತು ಸಂಬಾರ ಪದಾರ್ಥಗಳ ವಿಶಾಲ ಪ್ಲಾಂಟೇಶನ್ ಗಳನ್ನು ಮತ್ತು ಇವುಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸತೊಡಗಿದರು. ದುರ್ಗಮ ಬೆಟ್ಟಗಳ ಅಂಚಿನಲ್ಲಿ ಸುಲ್ತಾನ್ ಬತೇರಿಯಿಂದ ಕೊಜಿಕ್ಕೊಡ್, ತಲಚೇರಿಯವರೆಗೂ ರಸ್ತೆಗಳನ್ನು ನಿರ್ಮಿಸಿದರು. ಬಳಿಕ ಮೈಸೂರು ಮತ್ತು ನೀಲಗಿರಿ (ಊಟಿ) ತನಕವೂ ರಸ್ತೆಗಳನ್ನು ಮಾಡಿದರು.

ಬಂದವರು ಕೇರಳಿಗರು: ಬ್ರಿಟಿಷರು ಇಷ್ಟೆಲ್ಲ ಕೆಲಸ ಮಾಡಿದ್ದು 20ನೇ ಶತಮಾನದ ಆರಂಭದಲ್ಲಿ. ಶತಶತಮಾನಗಳ ಹಿಂದೆ ಇಲ್ಲಿ ಬಂದು ನೆಲಸಿ ದುರ್ಗಮ ಬೆಟ್ಟ-ಕಾಡುಗಳನ್ನು ಸವರಿ ವ್ಯವಸಾಯ ಭೂಮಿ ಮಾಡಿದ್ದ ಕನ್ನಡಿಗರು ಈ ಹಂತದಲ್ಲಿ ಇಲ್ಲಿಗೆ ಬರಲಿಲ್ಲ. ಬಂದವರು ಕೇರಳಿಗರು. ಅಲ್ಲಿನ ಬೇರೆಬೇರೆ ಭಾಗಗಳಿಂದ ಇಲ್ಲಿಗೆ ನೌಕರರಾಗಿ ಬಂದರು. ಆದರೆ ಮೊದಲಿನಿಂದಲೂ ಈ ಭಾಗದಲ್ಲಿದ್ದ ಕನ್ನಡಿಗರೇನೂ ಕಾಲ್ತೆಗೆಯಲಿಲ್ಲ. ಸಾಹಸ ಪ್ರವೃತ್ತಿಯ ಅವರು ತಮ್ಮ ಪಾಡಿಗೆ ತಮ್ಮ ಕಾಯಕ ಮುಂದುವರಿಸಿದರು.

ಸ್ವಾತಂತ್ರ್ಯ ನಂತರದ ಬೆಳವಣಿಗೆ: ಕನ್ನಡಿಗರು ಮೊದಲಿನಿಂದಲೂ ಸಾಹಸ ಪ್ರವೃತ್ತಿಗೆ ಹೆಸರಾದವರು. ತಮ್ಮ ನೆಲ-ಜಲದ ಮೇಲಿನ ಸ್ವಾಭಾವಿಕ ಹಕ್ಕನ್ನು ಬಿಟ್ಟುಕೊಡದವರು. ಈ ಪ್ರವೃತ್ತಿ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಮೈಸೂರು ರಾಜ್ಯದ ರಾಜಕೀಯ ನಾಯಕರಿಗೆ ಏಕೆ ಕಡಿಮೆಯಾಯಿತೋ, ಮಾಯವಾಯಿತೋ ಕನ್ನಡದ ಬಹುಮುಖ್ಯ ಪ್ರದೇಶಗಳು ಭಾಷಾವಾರು ಪ್ರಾಂತ್ಯದ ರಚನೆ ಸಂದರ್ಭದಲ್ಲಿ ಅಕ್ಕಪಕ್ಕದ ರಾಜ್ಯಗಳಿಗೆ ಸೇರಿ ಹೋದವು. ಹೀಗೆ ಹೋದ ಪ್ರದೇಶದಲ್ಲಿ ನೈಸರ್ಗಿಕ ಸಿರಿವಂತಿಕೆಯ ನೆಲೆವೀಡಾದ ವೈನಾಡು ಕೂಡ ಸೇರಿಬಿಟ್ಟಿತು. ಇಲ್ಲಿನ ರಾಜಕೀಯ ನಾಯಕರು ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಕೊಂಚ ಸೊಲ್ಲೆತ್ತಿದ್ದರು ಇಂಥ ಸೇರ್ಪಡೆ ಆಗುತ್ತಿರಲಿಲ್ಲ. ಈ ಭಾಗದಲ್ಲಿ ಕೇರಳಕ್ಕೆ ವೈನಾಡು ಸೇರಿ ಹೋದರೆ ಕರಾವಳಿ ಭಾಗದಲ್ಲಿ ಕಾಸರಗೋಡು ಸೇರಿತು. ಹೀಗೆ ಸೇರಿತು ಎನ್ನುವುದಕ್ಕಿಂತ ಸೇರಿಸಲ್ಪಟ್ಟವು ಎನ್ನುವುದೇ ಸೂಕ್ತ.

ಮುಂದಿನ ಭಾಗದಲ್ಲಿ: ವೈನಾಡು ಎಂಬ ಹೆಸರು ಏಕೆ ಬಂತು, ಅಲ್ಲಿಯ ಜೈನ ಬಸದಿಗಳ ಸ್ಥಿತಿಗತಿ ಹೇಗಿದೆ ಎಂಬ ವಿವರಗಳು.

ಕೃತಜ್ಞತೆ: ಈ ಲೇಖನಕ್ಕೆ ಬಳಸಿಕೊಂಡಿರುವ ಚಿತ್ರಗಳನ್ನು ಅಂತರ್ಜಾಲದಿಂದ ತೆಗೆದುಕೊಂಡಿದ್ದೇನೆ. ಇವುಗಳ ಮೂಲ ಚಿತ್ರ ರಚನೆ ಕಲಾವಿದರು, ಛಾಯಾಗ್ರಾಹಕರಿಗೆ ಕೃತಜ್ಞತೆಗಳು

Similar Posts

Leave a Reply

Your email address will not be published. Required fields are marked *