ಸಮಾಜದ ಬಹಳಷ್ಟು ಮಂದಿ ಸೂಕ್ಷ್ಮ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇವರಲ್ಲಿ ಸಾಹಿತಿಗಳು, ಪತ್ರಕರ್ತರೂ ಇದ್ದಾರೆ. ಇವರ ವೀರಾವೇಶವೇನಿದ್ದರೂ ಅಂತರಂಗದದ ಗುಂಪುಗಳಲ್ಲಿ, ತನ್ನವರೇ ಇರುವ ವಾಟ್ಸಪ್ ಗ್ರೂಪುಗಳಲ್ಲಿ ಬಹಿರಂಗವಾಗುತ್ತದೆ. ಪ್ರತಿಷ್ಠಿತ ವ್ಯಕ್ತಿಗಳ ಬಗ್ಗೆ ಉಸಿರು ಎತ್ತುವುದಿಲ್ಲ. ನಮಗ್ಯಾಕೆ ಅವೆಲ್ಲದರ ‘ ಉಸಾಬರಿ ‘ ಎನ್ನುವಾಗ ಎನ್.ಎಸ್ ಶಂಕರ್ ಆ ‘ ಉಸಾಬರಿ ‘ಗೆ ಹೋಗುವುದೇ ಸೂಕ್ತ ಎಂದು ಮುನ್ನುಗುತ್ತಾರೆ.
ಶಂಕರ್ ಅವರು ಸಾಹಿತಿ – ಪತ್ರಕರ್ತ – ಸಿನೆಮಾ ನಿರ್ದೇಶಕ ಇವೆಲ್ಲದರ ಜತೆಗೆ ವಿಶಿಷ್ಟ ಚಿಂತಕ. ವಿಶಿಷ್ಟ ಎಂಬ ವಿಶೇಷಣ ಏಕೆ ಎಂಬ ಪ್ರಶ್ನೆ ನಿಮಗೆ ಎದುರಾಗಬಹುದು. ಆದರೆ ಇವರ ಬರೆಹಗಳನ್ನು ಓದಿದಾಗ, ಮಾತನಾಡಿದಾಗ ಹೀಗೆ ಹೇಳುವುದರಲ್ಲಿ ತಪ್ಪೇನೂ ಇಲ್ಲ ಎಂಬುದು ನಿಮಗೇ ಅರಿವಾಗುತ್ತದೆ. ಈಗಾಗಲೇ ನೀವು ಶಂಕರ್ ಕೃತಿಗಳನ್ನು ಓದಿದ್ದರೆ ಈ ಮಾತಿನಲ್ಲಿ ಲವಲೇಶದ ಉತ್ಪ್ರೇಕ್ಷೆಯೂ ಇಲ್ಲ ಎಂಬುದು ಅರಿವಿಗೆ ಬಂದಿರುತ್ತದೆ.
‘ ಉಸಾಬರಿ’ ಸಮಕಾಲೀನ ಸಂವೇದನೆಯ ಬರೆಹಗಳು. ದೇವನೂರು ಮಹಾದೇವ, ಲಂಕೇಶ್, ಕಮ್ಯುನಿಸ್ಟರು, ಟಿವಿ. ಟಿ.ಆರ್.ಪಿ., ಪತ್ರಕರ್ತರ ಸರಹದ್ದು, ಮೀ ಟೂ, ಟಾಲ್ ಸ್ಟಾಯ್, ರೈತ ಚಳವಳಿ, ಬೆಳೆವಿಮೆ, ಮೋದಿ ಕಾಲದ ಘಟನಾವಳಿಗಳು ಹೀಗೆ ಅನೇಕ ಸಂಗತಿಗಳ ಬಗ್ಗೆ ಬರೆದಿದ್ದಾರೆ. “ಅರೇ ಸಾಕಷ್ಟು ಮಂದಿ ಈ ವಿಷಯಗಳ ಬಗ್ಗೆ ಬರೆದಿದ್ದಾರೆ; ಬರೆಯುತ್ತಿದ್ದಾರೆ, ಇದರಲ್ಲಿ ವಿಶೇಷತೆ ಏನು’ ಎಂಬ ಪ್ರಶ್ನೆಯೂ ನಿಮಗೆ ಎದುರಾಗಬಹುದು. ಆದರೆ ಈ ಬರೆಹಗಳು ನಿಮಗೆ ಅಪರೂಪವೆನ್ನಿಸುವ ಸೂಕ್ಷ್ಮ ಒಳನೋಟಗಳನ್ನು ನೀಡುತ್ತವೆ. ವಿಶ್ಲೇಷಣೆಯನ್ನು ಮತ್ತಷ್ಟೂ ಹರಿತವಾಗಿಸುತ್ತವೆ.
ಲಂಕೇಶ್ ಅವರ ವಿಚಾರಧಾರೆಯ ಬಗ್ಗೆ ಹಲವರಿಗೆ ಗೊತ್ತು. ಕನ್ನಡ ಸಂದರ್ಭಕ್ಕಷ್ಟೇ ಅಲ್ಲದೇ ಇಡೀ ಭಾರತೀಯ ಸಂದರ್ಭದ ಮಹತ್ವದ ಕಥೆಗಾರ, ಪತ್ರಕರ್ತ. ಇವರ ವಿಚಾರಧಾರೆಗಳು, ಬರೆಹಗಳನ್ನು ಶಂಕರ್ ವಿಶ್ಲೇಷಿಸುತ್ತಾರೆ. ದ್ವಂದ್ವಗಳನ್ನು, ಉದ್ದೇಶಪೂರ್ವಕ ಅಲಕ್ಷ್ಯ ಎನ್ನಬಹುದಾದ ಸಂಗತಿಗಳನ್ನು ನಮ್ಮ ಮುಂದೆ ಇರಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಗ್ರಾಮೀಣ ಕರ್ನಾಟಕದಲ್ಲಿ ಶೌಚಾಲಯ ಪ್ರಜ್ಞೆ ಮೂಡಿಸಲು ಯತ್ನಿಸಿದ ಸಚಿವ ಎಂ.ಪಿ. ಪ್ರಕಾಶ್ ಅವರನ್ನು ಕಕ್ಕಸು ಮಂತ್ರಿ ಎಂದು ಕರೆದದ್ದು, ದೇವರಾಜ ಅರಸು ಅವರ ರಾಜಕೀಯ ಕೊಡುಗೆಗಳ ಪೂರ್ಣ ಅರಿವು ಮಾಡಿಕೊಳ್ಳದೇ ಇರುವುದು; ಇವೆಲ್ಲದರ ಜತೆಗೆ ವಿ.ಪಿ.ಸಿಂಗ್ ಜಾರಿಗೆ ತಂದ ಮಂಡಲ್ ಆಯೋಗದ ಮೀಸಲಾತಿ ಬಗ್ಗೆ ಉದಾಸೀನ ಮನೋಭಾವ ಹೊಂದಿದ್ದರತ್ತ ಗಮನ ಸೆಳೆಯುತ್ತಾರೆ.


‘ಲಂಕೇಶ್ ಅವರು ದೇವರಾಜ ಅರಸು ಆಡಳಿತವನ್ನು ಎಂದೂ ಸಹಾನುಭೂತಿಯಿಂದ ನೋಡುವ ಪ್ರಯತ್ನವನ್ನೇ ಮಾಡಲಿಲ್ಲ’ ಎನ್ನುವ ಶಂಕರ್ ಇದೇ ಲಂಕೇಶ್ ದೇವರಾಜ ಅರಸು ಅವರನ್ನು ಸಹಸ್ರಮಾನದ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿದ್ದು ವಿರೋಧಾಭಾಸಗಳಲ್ಲಿ ಒಂದು. ಇದೇ ರೀತಿ ಮೀಸಲಾತಿ ಸಮರ್ಥಕರಾಗಿದ್ದ ಲಂಕೇಶ್, ಮಂಡಲ್ ಆಯೋಗದ ಶಿಫಾರಸು ಜಾರಿಯಾಗಿ ಅದರ ವಿರುದ್ಧ ತೀವ್ರ ಪ್ರತಿಭಟನೆಗಳಾಗುತ್ತಿದ್ದ ಸಂದರ್ಭದಲ್ಲಿ ಲಂಕೇಶ್ ಪತ್ರಿಕೆ ಸಂಚಿಕೆಯೊಂದಕ್ಕೆ ‘ ಛಿದ್ರವಾಗುತ್ತಿರುವ ಭಾರತ” ಎಂದು ಶೀರ್ಷಿಕೆ ನೀಡಿದರೆ ಹೊರತು ಮಂಡಲ್ ಮೀಸಲಾತಿ ಅವಶ್ಯಕತೆ ಪ್ರತಿಪಾದಿಸಿ ಬರೆಯಲಿಲ್ಲ ಎನ್ನುತ್ತಾರೆ.
ಕನ್ನಡ ಸಂದರ್ಭದ ಸಮರ್ಧ ವಿಮರ್ಶಕ ನಟರಾಜ್ ಹುಳಿಯಾರ್ ಅವರ ‘ ಇಂತಿ ನಮಸ್ಕಾರಗಳು’ ಮಹತ್ವದ ಕೃತಿ. ಇದರಲ್ಲಿ ತನ್ನ ಗುರುಗಳಾದ ಲಂಕೇಶ್, ಡಿ.ಆರ್. ನಾಗರಾಜ್ ಅವರುಗಳ ವ್ಯಕ್ತಿತ್ವ – ಬರೆಹಗಳ ಬಗ್ಗೆ ಬೆಳಕು ಚೆಲ್ಲುವಂಥ ಬರೆಹಗಳನ್ನು ಬರೆದಿದ್ದಾರೆ. ಶಂಕರ್ ಅವರು ಈ ಬರೆಹಗಳ ಮೇಲೆಯೂ ತಮ್ಮ ವಿಮರ್ಶಕ ಪ್ರಜ್ಞೆಯ ಬೆಳಕು ಚೆಲ್ಲಿದ್ದಾರೆ. ಈ ಕೃತಿಯಲ್ಲಿ ನಟರಾಜ್ ಅವರದು ಲಂಕೇಶರೆಡಿಗಿನ ಭಾವುಕತನ – ತೀವ್ರ ಅಭಿಮಾನದ ಬರೆವಣಿಗೆ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇದಕ್ಕೆ ತಮ್ಮದೇ ಆದ ಆಧಾರಗಳನ್ನೂ ನೀಡುತ್ತಾರೆ.
ತಮ್ಮ ಊರಿನ ಗೋಪಿ ಎಂಬ ಯುವಕನ ಮನೋಭಾವ, ಲೈಂಗಿಕ ಸಂಗತಿಗಳ ಬಗ್ಗೆ ಅಸಹನೆ ತೋರಿಸುವ ಲಂಕೇಶ್ ತಮ್ಮ ಇಂಥವೇ ವಿಚಾರಗಳಿಗೆ ತಾತ್ಪಿಕ ಸ್ಪರ್ಶ ನೀಡುವುದನ್ನು ಪ್ರಶ್ನೆ ಮಾಡುತ್ತಾರೆ. ಇದನ್ನು ಲಂಕೇಶರ ಡಬ್ಬಲ್ ಸ್ಟ್ಯಾಂಡರ್ಡ್ ಎಂದೇ ಕಠಿಣವಾಗಿ ಹೇಳುವುದು ಅವರ ಅಭಿಮಾನಿ (ನನ್ನನ್ನು ಸೇರಿಸಿ) ದಂಗು ಬಡಿಸುತ್ತದೆ. ಮನುಷ್ಯರ ದುಷ್ಟತನ ಈವಿಲ್ ಬಗ್ಗೆ ಪದೇಪದೇ ಹೇಳುವ ಲಂಕೇಶರ ದ್ವಂದ್ವಗಳು, ಈ ವಿಷಯದಲ್ಲಿ ಗಾಂಧಿ ವಿಚಾರಧಾರೆಯನ್ನು ಸಮರ್ಪಕವಾಗಿ ಗ್ರಹಿಸಿಲ್ಲದ ಸಂಗತಿಗಳನ್ನು ನಮ್ಮ ಮುಂದಿಡುತ್ತಾರೆ
‘ಲಂಕೇಶ್ ಅವರ ಹುಳಿಮಾವಿನ ಮರ ಕನ್ನಡದ ಶ್ರೇಷ್ಠ ಆತ್ಮಚರಿತ್ರೆಗಳಲ್ಲಿ ಒಂದು ಎಂಬುದು ಅದನ್ನು ಓದಿದವರೆಗೆಲ್ಲ ಅರಿವಾಗಿರುತ್ತದೆ’ ನಟರಾಜ್ ಹುಳಿಯಾರ್ ಅವರ ಈ ಹೇಳಿಕೆಗೆ ಶಾಕಿಂಗ್ ಎನ್ನುವಂಥ ಕೌಂಟರ್ ನೀಡುತ್ತಾರೆ “ ಹುಳಿಮಾವಿನ ಮರ” ತಿಳಿ ನಿರೂಪಣೆಯ ಕೇವಲ ಆತ್ಮಕಥೆ ಮಾತ್ರವಲ್ಲ, ಅದೊಂದು ನವ್ಯ ಆತ್ಮಕಥನ ! ಅಂದರೆ ನವ್ಯಕಥೆ, ನವ್ಯ ಕಾದಂಬರಿ, ನವ್ಯ ಕವನ ಇದ್ದಂತೆ ಇದು ನವ್ಯ ಆತ್ಮಕಥೆ. ಅಂದರೆ ತಿಳಿದೋ ತಿಳಿಯದೆಯೋ ಲೇಖಕ ತನ್ನ ಅನುಭವವನ್ನು ನವ್ಯ ಸಂವೇದನೆಯ ಎರಕದಲ್ಲಿ ಹುಯ್ದಿಟ್ಟ ಸೋಜಿಗವಿದು. ಅಂದರೆ ಅನುಭವವನ್ನು ಅನುಭವ ಮಾತ್ರವಾಗಿ ಅರಗಿಸಿಕೊಳ್ಳಲಾಗದೇ ನವ್ಯ ಚೌಕಟ್ಟಿಗೆ ಹೊಂದಿಸಿಟ್ಟ ಪಾಕವಿದು. ಹಾಗಾಗಿ ಅಷ್ಟರ ಮಟ್ಟಿಗೆ ಇದು ಅಪ್ರಮಾಣಿಕ ಕೃತಿ.
‘ ಈ ಹೇಳಿಕೆ ವಿಶದವಾಗಬೇಕಾದರೆ ಆ ಕೃತಿಯ ಕಟ್ಟಡದಲ್ಲಿ ಕಾಣುವ ಬಿರುಕುಗಳನ್ನು ನೋಡಬೇಕು’ ಎನ್ನುವ ಶಂಕರ್ ಅವುಗಳನ್ನು ವಿವರಿಸುತ್ತಾರೆ. ಇದನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟಿದ್ದಾದರೂ ವಿಮರ್ಶಕ ನೆಲೆಯಲ್ಲಿ ಹೇಳುವ ಇಂಥ ಮಾತುಗಳನ್ನು ಮತ್ತೆಮತ್ತೆ ಚರ್ಚಿಸುವುದಕ್ಕೆ ಮುನ್ನುಡಿಯನ್ನಂತೂ ಹಾಕಿದ್ದಾರೆ ಎನಿಸುತ್ತದೆ.
ಯಶವಂತ ಚಿತ್ತಾಲರ ‘ಶಿಕಾರಿ’ ಕೃತಿ ಬಗ್ಗೆ ಇದುವರೆಗಿನ ವಿಮರ್ಶೆಗಳು ನಮ್ಮ ಎದುರಿಗಿಟ್ಟ ಗ್ರಹಿಕೆಗಳಿಗಿಂತ ಬಹು ಭಿನ್ನವಾದ ಗ್ರಹಿಕೆಯನ್ನು ಶಂಕರ್ ನಮ್ಮ ಮುಂದಿಡುತ್ತಾರೆ. ‘ ನಾಗಪ್ಪನ ನೀತಿ ನಿಯಮ; ಶಿಕಾರಿಯ ನೈತಿಕ ನೆಲೆ ಯಾವುದು ಎಂಬ ಅಧ್ಯಾಯದಲ್ಲಿ ವಿವರವಾಗಿ ಚರ್ಚಿಸುತ್ತಾರೆ.
“ನಿಮ್ಮಂತವರ ನಿಜವಾದ ಬಣ್ಣ ತೋರಿಸಿಕೊಡಲು ಅನುವು ಮಾಡಿಕೊಡಬಹುದಾದ ಜರ್ನಲಿಸಂಗೆ” ಹೋಗುತ್ತೇನೆ ಎಂಬ ಮಾತುಗಳನ್ನು ಶಿಕಾರಿಯ ಕೊನೆ ಭಾಗದಲ್ಲಿ ನಾಗಪ್ಪ ಹೇಳುತ್ತಾನೆ’ ಇದಕ್ಕೆ ಶಂಕರ್ ಹೇಳುವುದು ಹೀಗಿದೆ ‘ಇದು ಅವನ (ನಾಗಪ್ಪ) ಭವಿಷ್ಯದ ಹೆಜ್ಜೆಯೇ ಆಗುವುದಾದರೆ ನಾಗಪ್ಪ ಬ್ಲಾಕ್ ಮೇಲ್ ನಿರತ ‘ಪೀತ ಪತ್ರಕರ್ತ’ ಮಾತ್ರ ಆಗಲು ಸಾಧ್ಯ. ಇದು ‘ಶಿಕಾರಿ’ ಕಾದಂಬರಿಯ ನೈಜ ಒಳದನಿ. ಆದರೆ ಇಷ್ಟುಕಾಲ ಚಿತ್ತಾಲರ ಕಥನ ಕೌಶಲದ ಮಾಯೆಗೆ ಸಿಲುಕಿ, ನಮಗೆ ಕವಿದ ಮಬ್ಬು ಹರಿದಿಲ್ಲ. ಉದ್ದಕ್ಕೂ ನಾಗಪ್ಪ ನಿಷ್ಪಾಪ ಮುಗ್ಧ, ಉದಾತ್ತ ಅಮಾಯಕನೆಂದೇ ನಂಬಿಕೊಂಡು ಬಂದಿದ್ದೇವೆ” ಇದು ಕೂಡ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಬಹುದಾದ ಅಭಿಪ್ರಾಯ.
ಪುಸ್ತಕದ ಮೂರನೇ ಭಾಗದಲ್ಲಿ ಮೋದಿ ಆಡಳಿತ ಪರ್ವದ ಅವಾಂತರಗಳ ಬಗ್ಗೆ ಪರಿಪರಿಯಾಗಿ ಹೇಳುತ್ತಾರೆ. ಮೋದಿ ಅವರು ಅಂಬಾನಿಯ ಕಿಸೆಯಲ್ಲಿದ್ದಾರೋ ಅಥವಾ ಅಂಬಾನಿ, ಮೋದಿ ಕಿಸೆಯಲ್ಲಿದ್ದಾರೋ ಎಂದು ಹೇಳುವ ಶಂಕರ್ ಈ ಕಾಲಘಟ್ಟದಲ್ಲಿ ಬಹುತೇಕ ಮಾಧ್ಯಮಗಳೇಕೆ ಭಟ್ಟಂಗಿಗಳಾಗಿವೆ ಎಂದು ವಿವರಿಸುತ್ತಾರೆ. ದನಿಯೆತ್ತುವ ಮಾಧ್ಯಮದ ದನಿಯನ್ನು ಹೇಗೆ ಉಡುಗಿಸಲಾಗುತ್ತದೆ ಎಂಬುದನ್ನೂ ಉದಾಹರಣೆಗಳ ಸಮೇತ ಹೇಳುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ಬಲಪಂಥೀಯ ಕೂಗುಮಾರಿತನದ ಹಿನ್ನೆಲೆಗಳನ್ನು ವಿವರಿಸುತ್ತಾರೆ. ಇವರ ವಿಮರ್ಶೆಯ ನೆಲೆಯಲ್ಲಿ ಫಸಲ್ ಭೀಮಾ ಯೋಜನೆಯ ಒಳ ವಿವರಗಳು ಮತ್ತಷ್ಟೂ ಅರಿವಿಗೆ ಬರುತ್ತವೆ.


ದೇವನೂರು ಮಹಾದೇವ ಸಮಕಾಲಿನ ಜಗತ್ತಿನ ಮಹತ್ವದ ಕಥೆಗಾರರಷ್ಟೇ ಅಲ್ಲ; ಸಾಮಾಜಿಕ ಚಿಂತಕರು ಸಹ. ಬುದ್ಧ – ಬಸವ – ಗಾಂಧಿ – ಅಂಬೇಡ್ಕರ್ ಅವರ ಸಮ್ಮಿಶ್ರಣ ವಿಚಾರಧಾರೆಗಳನ್ನು ಉಳ್ಳವರು. ಇದು ನಾಡಿನ ಬೆಳಕಾಗಬಲ್ಲದು ಎಂದು ಭಾವಿಸಿದವರು. ಇವರ ವಿಚಾರಧಾರೆ ‘ಎದೆಗೆ ಬಿದ್ದ ಅಕ್ಷರ’ದಲ್ಲಿ ಪ್ರಕಟವಾಗಿವೆ. ‘ಎದೆಯ ದನಿ’ ಅಧ್ಯಾಯದಲ್ಲಿ ಈ ಕೃತಿಯ ಹೇಳಿಕೆಗಳನ್ನು ಉದಹರಿಸುತ್ತಾ ಹೋಗುವ ಶಂಕರ್, ಇಲ್ಲಿ ನಿಜಕ್ಕೂ ಏನು ಹೇಳ ಹೊರಟ್ಟಿದ್ದಾರೆ ಎಂಬುದು ಅರ್ಥವಾಗಲಿಲ್ಲ.
ಇಲ್ಲಿ ಹಿಟ್ ಆ್ಯಂಡ್ ರನ್ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. ‘ ಮಹಾದೇವ ಅವರೊಂದಿಗಿನ ನನ್ನ ಸ್ನೇಹ ದಶಕಗಳ ಕಾಲದ್ದು; ‘ ‘ಸುದ್ದಿ ಸಂಗಾತಿ’ ಮಾಡುತ್ತಿದ್ದಾಗಲಂತೂ ನಿಕಟ ಒಡನಾಟವೇ. ನನ್ನ ಹಿರಿಯಣ್ಣನಂತಿದ್ದ ಅವರಿಂದ ಎಷ್ಟೋ ಬಾರಿ ಮಾರ್ಗದರ್ಶನ ಪಡೆದಿದ್ದೇನೆ. ಹಾಗೆಯೇ ಅವರ ವ್ಯಕ್ತಿತ್ವದ ಎತ್ತರ, ಅವರದೇ ಮಾತು ಬಳಸುವುದಾದರೆ ನನ್ನ ಕಣ್ಣಳತೆಯಲ್ಲಿ ಎರಡೆರಡೇ ಗೇಣು ಕಮ್ಮಿಯಾಗುತ್ತಾ ಬಂದ ಪ್ರಸಂಗಗಗಳು ಹಲವಾರಿವೆ. ಅದನ್ನೆಲ್ಲ ಇಲ್ಲಿ ಚರ್ಚಿಸುವುದು ಬೇಡ’’ ಅರೇ ಬೇಡವಾಗಿದ್ದರೆ ಈ ನಕಾರಾತ್ಮಕ ಮಾತನ್ನು ಉಲ್ಲೇಖಿಸಿದಾದರೂ ಏಕೆ ?
‘ಸಾಂಸ್ಕೃತಿಕ ದಂಡುಪಾಳ್ಯ’ ಅಧ್ಯಾಯದಲ್ಲಿ ಬಲಪಂಥೀಯ ಸಂಘಟನೆಗಳ ಜತೆಗೆ ಜನಸಾಮಾನ್ಯರಲ್ಲಿಯೂ ದ್ವೇಷ – ಅಸಹನೆಯ ಭಾಷೆ ಮಡುಗಟ್ಟಿದೆ’ ಎಂದು ಹೇಳುತ್ತಾ ‘“ಕನ್ನಯ್ಯನೂ ನನ್ನ ಮಗ, ರೋಹಿತ್ ವೇಮುಲನೂ ನನ್ನ ಮಗ, ಇದೀಗ ಜಿಗ್ನೇಶ್ ಮೆವಾನಿಯೂ ನನ್ನ ಮಗ ಎಂದು ಬಡಬಡಿಸುವ ಬಡಿವಾರ ಇನ್ನೊಂದು ಕಡೆ” ಎಂದು ವ್ಯಂಗ್ಯವಾಡುತ್ತಾರೆ. ಕರ್ನಾಟಕದ ಸಂದರ್ಭದಲ್ಲಿ ಹೀಗೆಂದವರು ಗೌರಿ ಲಂಕೇಶ್ ಮಾತ್ರ. ಇದು ಈ ವ್ಯಕ್ತಿಗಳ ವೈಚಾರಿಕ ತಿಳಿವಳಿಕೆ ಬಗ್ಗೆ ಮೂಡಿದ ಅಭಿಮಾನದಿಂದ ಹೇಳಿದ ಭಾವನಾತ್ಮಕ ಮಾತು. ಆದ್ದರಿಂದ ಈ ಸಂದರ್ಭದಲ್ಲಿ ಶಂಕರ್ ಅವರದು ಅನಗತ್ಯ ಅಸಹನೆ ಮಾತು ಎನಿಸದಿರದು.
ದಲಿತ ಕೇರಿಯವರು ಹಮ್ಮಿಕೊಂಡಿದ್ದ ‘ ಒಂದು ಲೋಟ ನೀರು ‘ ಕಾರ್ಯಕ್ರಮವನ್ನು ಅಧ್ಯಾತ್ಮಿಕ ಸ್ತರಕ್ಕೆ ತೆಗೆದುಕೊಂಡು ಹೋಗುವ ಶಂಕರ್ “ಬುದ್ಧನೆಡೆಗೆ ಮರಳಿ ಮನೆಗೆ’ ಕಾರ್ಯಕ್ರಮದ ಬಗ್ಗೆ ನಿರಾಶೆ ಧೋರಣೆ ವ್ಯಕ್ತಪಡಿಸುತ್ತಾರೆ. ಆದರೆ ಇದರ ವಿವರಗಳನ್ನು ಚರ್ಚಿಸುವುದಿಲ್ಲ.
ಮಹಾರಾಷ್ಟ್ರದ ದಲಿತ್ ಫ್ಯಾಂಥರ್ಸ್ ಚಳವಳಿ ಪ್ರಭಾವದಿಂದ ಕರ್ನಾಟಕದಲ್ಲಿ ದಲಿತ ಚಳವಳಿ ಹುಟ್ಟಿತ್ತು. 80ರ ದಶಕದಲ್ಲಿ ಇದು ಶಕ್ತಿ ಕಳೆದುಕೊಂಡಿತು. ಇದರ ಬಗ್ಗೆ ಶಂಕರ್ ಹೀಗೆ ಬರೆಯುತ್ತಾರೆ “ ಸಂಘಟನೆಯ ಕಾರ್ಯಕರ್ತರು ಮತ್ತು ನಾಯಕರು ಮೊದಲ ಬಾರಿ ಹಿಂದೆಂದು ಇಲ್ಲದ ಮಟ್ಟಿಗೆ ಅಧಿಕಾರ ಕೇಂದ್ರದ ಸಮೀಪ ಬಂದರು. ಆ ಅಧಿಕಾರ ಸಹಜವಾಗಿ ಇವರ ಅಸ್ಥಿಗಳಲ್ಲಿ ಹರಿಯತೊಡಗಿತು. ಫಲವಾಗಿ ಸಂಘಟನೆ ಒಂದು ಲಾಭದಾಯಕ ಹೂಡಿಕೆಯಾಗಿ ಆಸ್ತಿಯಾಗಿ ಕಾಡತೊಡಗಿತು. ಇದನ್ನು ಹಂಚಿಕೊಳ್ಳಬಾರದೆಂಬ ಸ್ವಾರ್ಥ ಕೆಲವರಲ್ಲಿಯಾದರೂ ಮೊಳಕೆಯೊಡೆಯಿತು. ಅದರ ಪರಿಣಾಮವೇ ಆ ಪ್ರಶ್ನೆ – ದಲಿತ ಸಂಘಟನೆಯಲ್ಲಿ ದಲಿತರಿಗೇನು ಕೆಲಸ.

ಶಂಕರ್ ಅವರ ಈ ಮಾತುಗಳನ್ನು ಒಪ್ಪಬಹುದು. ಆದರೆ ಮುಂದುವರಿದು ಅವರು ಹೇಳುವ “ಅಲ್ಲಿಗೆ ಜಾತಿ ವಿನಾಶದ ಮಹಾ ಕನಸು ಶಾಶ್ವತವಾಗಿ ಕಣ್ಣು ಮುಚ್ಚಿತು” ಇದು ಉತ್ಪ್ರೇಕ್ಷೆಯ ಮಾತು. ದಲಿತ ಸಂಘಟನೆಯಲ್ಲಿ ಇದ್ದ ದಲಿತೇತರ ವ್ಯಕ್ತಿಗಳ ಸರಾಸರಿ ಸಂಖ್ಯೆಯೆಷ್ಟು ? ಇವರು ಇದ್ದ ಮಾತ್ರಕ್ಕೆ ಜಾತಿ ವಿನಾಶದ ಕನಸು ನನಸಾಗಲು ಸಾಧ್ಯವಿತ್ತೆ ? ಇದು ಜಾತಿ ಸಂಕೀರ್ಣತೆಗಳ ಆಳ – ಅಗಲದ ಬಗ್ಗೆ ತೀವ್ರವಾಗಿ ಯೋಚಿಸದೇ ಆಡಿರುವ ಅಭಿಮಾನದ ಮಾತು.


ಸಮಕಾಲೀನ ಸಾಂಸ್ಕೃತಿಕ – ಸಾಹಿತ್ಯಿಕ – ಸಾಮಾಜಿಕ – ರಾಜಕೀಯ ವಿಷಯಗಳ ಬಗ್ಗೆ ಒಳನೋಟದ ಬೆಳಕು ಚೆಲ್ಲುವ ‘ಉಸಾಬರಿ” ವೈಚಾರಿಕ ಸಾಹಿತ್ಯ ಪ್ರಿಯರೆಲ್ಲರೂ ಓದಬೇಕಾದ ಕೃತಿ ಎಂಬುದು ನನ್ನ ಅಭಿಪ್ರಾಯ. ಇದನ್ನು ‘ಅಕ್ಷರ ಮಂಟಪ’ ಪ್ರಕಟಿಸಿದೆ.

Similar Posts

Leave a Reply

Your email address will not be published. Required fields are marked *